ಬೆಂಗಳೂರು: ರಾಮನಗರದ ದೊಡ್ಡೇರಿ ಫಾರ್ಮ್ಹೌಸ್ನಲ್ಲಿ ಪತ್ತೆಯಾದ ನಕಲಿ ಔಷಧ ದಂಧೆ ಪ್ರಕರಣದ ತನಿಖೆ ಇದೀಗ ಮತ್ತಷ್ಟು ವಿಸ್ತಾರಗೊಂಡಿದ್ದು, ಪ್ರಕರಣಕ್ಕೆ ಅಂತಾರಾಷ್ಟ್ರೀಯ ಲಿಂಕ್ ಇರುವ ಶಂಕೆ ವ್ಯಕ್ತವಾಗಿದೆ. ನಕಲಿ ಔಷಧಿಗಳಿಗೆ ಬಳಸಲಾಗುತ್ತಿದ್ದ ಲೇಬಲ್ಗಳು ಟರ್ಕಿಯಿಂದ ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ಬರುತ್ತಿದ್ದವು ಎಂಬ ಮಾಹಿತಿ ತನಿಖಾ ಸಂಸ್ಥೆಗಳಿಗೆ ಲಭ್ಯವಾಗಿದೆ ಎನ್ನಲಾಗಿದೆ. ಬ್ರಾಂಡೆಡ್ ಮೆಡಿಸಿನ್ ಕಂಪನಿಗಳ ಹೆಸರಿನ ಲೇಬಲ್ಗಳನ್ನು ಬಳಸಿಕೊಂಡು ನಕಲಿ ಔಷಧಿಗಳನ್ನು ತಯಾರಿಸಿ ಮಾರುಕಟ್ಟೆಗೆ ಪೂರೈಸುತ್ತಿದ್ದ ಜಾಲದ ಬಗ್ಗೆ ತನಿಖೆ ಚುರುಕುಗೊಂಡಿದೆ.
ಈ ಪ್ರಕರಣದಲ್ಲಿ ಬೆಂಗಳೂರಿನ ವೀರೇಶ್ ಜೈನ್ ಎಂಬಾತ ಪ್ರಮುಖ ಕಿಂಗ್ಪಿನ್ ಆಗಿರಬಹುದು ಎಂಬ ಶಂಕೆ ತನಿಖಾ ತಂಡಕ್ಕೆ ಮೂಡಿದೆ. ವೀರೇಶ್ ಜೈನ್ ಈ ಹಿಂದೆ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಬಳಿಕ ಪ್ರಶಾಂತ್ ಸೇರಿದಂತೆ ಇತರ ಆರೋಪಿಗಳೊಂದಿಗೆ ಸಂಪರ್ಕ ಬೆಳೆಸಿಕೊಂಡು ಸಂಘಟಿತವಾಗಿ ನಕಲಿ ಮೆಡಿಸಿನ್ ದಂಧೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
100ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಔಷಧಿ ಪೂರೈಕೆ
ತನಿಖೆಯ ಪ್ರಕಾರ, ಆರೋಪಿಗಳು ತಮ್ಮದೇ ಫಾರ್ಮಾ ಸಂಸ್ಥೆಯನ್ನು ಆರಂಭಿಸಿ ಅದರ ಮೂಲಕ ನಕಲಿ ಔಷಧಿಗಳನ್ನು ಪೂರೈಸುತ್ತಿದ್ದರೆಂಬ ಮಾಹಿತಿ ಹೊರಬಿದ್ದಿದೆ. ವಿವಿಧ ಆಸ್ಪತ್ರೆಗಳೊಂದಿಗೆ ಸಂಪರ್ಕ ಬೆಳೆಸಿಕೊಂಡು 100ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಔಷಧಿ ಸರಬರಾಜು ಮಾಡಲಾಗುತ್ತಿತ್ತು ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಮೂಲಕ ಕೋಟ್ಯಂತರ ರೂಪಾಯಿ ಮೌಲ್ಯದ ನಕಲಿ ಔಷಧಿಗಳನ್ನು ಮಾರಾಟ ಮಾಡಿರುವ ಸಾಧ್ಯತೆಯೂ ಇದೆ. ನಕಲಿ ಔಷಧಿಗಳು ಯಾವ ಆಸ್ಪತ್ರೆಗಳಿಗೆ, ಯಾವ ಮಾರ್ಗದಲ್ಲಿ ಮತ್ತು ಎಷ್ಟು ಪ್ರಮಾಣದಲ್ಲಿ ಪೂರೈಕೆಯಾಗಿವೆ ಎಂಬುದರ ಬಗ್ಗೆ ಎಸ್ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗುತ್ತಿರುವ ವೀರೇಶ್ ಜೈನ್ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಮಂಗಳವಾರದ ಬಳಿಕ ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲು ಎಸ್ಐಟಿ ಮುಂದಾಗಬಹುದು ಎನ್ನಲಾಗಿದ್ದು, ಕಸ್ಟಡಿ ವಿಚಾರಣೆ ಬಳಿಕ ದಂಧೆಯ ಸಂಪೂರ್ಣ ಜಾಲದ ಬಗ್ಗೆ ಮತ್ತಷ್ಟು ಮಾಹಿತಿ ಹೊರಬರುವ ಸಾಧ್ಯತೆಯಿದೆ.
ಟರ್ಕಿವರೆಗೂ ಚಾಚಿದ ನಕಲಿ ಮೆಡಿಸಿನ್ ಜಾಲ
ದೊಡ್ಡೇರಿ ಫಾರ್ಮ್ಹೌಸ್ ಪ್ರಕರಣದ ತನಿಖೆ ಮುಂದುವರಿದಂತೆ ದಂಧೆಯ ಅಂತಾರಾಷ್ಟ್ರೀಯ ಸಂಪರ್ಕದ ಬಗ್ಗೆ ಮಾಹಿತಿ ಹೊರಬಂದಿದೆ. ನಕಲಿ ಔಷಧಿಗಳಿಗೆ ಬಳಸಲಾಗುತ್ತಿದ್ದ ಲೇಬಲ್ಗಳನ್ನು ಟರ್ಕಿಯಿಂದ ತರಿಸಲಾಗುತ್ತಿತ್ತು ಎನ್ನಲಾಗಿದ್ದು, ಸಮುದ್ರ ಮಾರ್ಗದ ಮೂಲಕ ಅವುಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿತ್ತು.
ಬ್ರಾಂಡೆಡ್ ಔಷಧಿ ಕಂಪನಿಗಳ ಹೆಸರಿನ ಲೇಬಲ್ಗಳನ್ನು ಬಳಸಿ ನಕಲಿ ಔಷಧಿಗಳಿಗೆ ಅಸಲಿ ಔಷಧಿಯ ರೂಪ ನೀಡಲಾಗುತ್ತಿತ್ತೇ ಎಂಬ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ವಿಶೇಷವಾಗಿ ಕ್ಯಾನ್ಸರ್ ಸೇರಿದಂತೆ ಗಂಭೀರ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸುವ ಔಷಧಿಗಳ ವಿಚಾರದಲ್ಲಿ ಯಾವುದೇ ಅಕ್ರಮ ನಡೆದಿದೆಯೇ ಎಂಬುದು ತನಿಖೆಯ ಪ್ರಮುಖ ಅಂಶವಾಗಿದೆ.
ಆರು ರಾಜ್ಯಗಳಲ್ಲಿ ಏಕಕಾಲಕ್ಕೆ ದಾಳಿ
ದೊಡ್ಡೇರಿ ಫಾರ್ಮ್ಹೌಸ್ನಲ್ಲಿ ಪತ್ತೆಯಾದ ಜಾಲದ ಬೆನ್ನುಹತ್ತಿರುವ ಎಸ್ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ಹಲವು ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿವೆ. ಕರ್ನಾಟಕ ಸೇರಿದಂತೆ ಆರು ರಾಜ್ಯಗಳ ಸುಮಾರು 10 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ದಾಖಲೆಗಳು, ಔಷಧಿ ಸಂಗ್ರಹಣೆ ಹಾಗೂ ದಂಧೆಗೆ ಸಂಬಂಧಿಸಿದ ಇತರ ಮಾಹಿತಿಗಳನ್ನು ಪರಿಶೀಲಿಸಲಾಗಿದೆ.
ಕರ್ನಾಟಕದ ಜೊತೆಗೆ ಹಿಮಾಚಲ ಪ್ರದೇಶ, ಹರಿಯಾಣ, ತಮಿಳುನಾಡಿನ ಚೆನ್ನೈ, ಮಹಾರಾಷ್ಟ್ರದ ಮುಂಬೈ ಹಾಗೂ ತೆಲಂಗಾಣದಲ್ಲೂ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಸುಮಾರು 80ರಿಂದ 100 ಅಧಿಕಾರಿಗಳ ತಂಡ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದು, ಶಂಕಿತ ಫಾರ್ಮಾ ಸಂಸ್ಥೆಗಳ ಕಚೇರಿಗಳು, ಔಷಧ ಸಂಗ್ರಹ ಸ್ಥಳಗಳು ಹಾಗೂ ಜಾಲಕ್ಕೆ ಸಂಬಂಧಿಸಿದ ಇತರ ಕೇಂದ್ರಗಳ ಮೇಲೆ ದಾಳಿ ನಡೆಸಲಾಗಿದೆ.




