ಬೆಂಗಳೂರು, ಸೆಪ್ಟೆಂಬರ್ 12: ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮಹತ್ವದ ಆದೇಶ ಹೊರಡಿಸಿದೆ. ಸೆಪ್ಟೆಂಬರ್ 14ರಂದು ನಗರದಾದ್ಯಂತ ಪ್ರಾಣಿವಧೆ ಹಾಗೂ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹಬ್ಬದ ದಿನದಂದು ಸಾರ್ವಜನಿಕರು ಹಾಗೂ ಮಾಂಸ ವ್ಯಾಪಾರಿಗಳು ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ಜಿಬಿಎ ಸೂಚಿಸಿದೆ.
ಜಿಬಿಎ ಪಶುಪಾಲನೆ ವಿಭಾಗದ ಉಪ ನಿರ್ದೇಶಕರು ಈ ಕುರಿತು ಅಧಿಕೃತ ಸುತ್ತೋಲೆ ಹೊರಡಿಸಿದ್ದು, ಜಿಬಿಎ ವ್ಯಾಪ್ತಿಯಲ್ಲಿರುವ ಎಲ್ಲಾ ಕಸಾಯಿಖಾನೆಗಳಲ್ಲಿ ಪ್ರಾಣಿವಧೆ ಮಾಡುವುದನ್ನು ಹಾಗೂ ಮಾಂಸದ ಅಂಗಡಿಗಳಲ್ಲಿ ಮಾಂಸ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಧಾರ್ಮಿಕ ಆಚರಣೆಗಳು ಸುಗಮವಾಗಿ ನಡೆಯುವಂತೆ ಮುಂಜಾಗ್ರತಾ ಕ್ರಮವಾಗಿ ಈ ಆದೇಶ ಜಾರಿಗೊಳಿಸಲಾಗಿದೆ.
ನಿಷೇಧದ ನಡುವೆಯೂ ಅಕ್ರಮವಾಗಿ ಪ್ರಾಣಿವಧೆ ಅಥವಾ ಮಾಂಸ ಮಾರಾಟ ಮಾಡುತ್ತಿರುವುದು ಕಂಡುಬಂದರೆ, ಸಂಬಂಧಪಟ್ಟವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಬಿಎ ಎಚ್ಚರಿಕೆ ನೀಡಿದೆ. ಹೀಗಾಗಿ ಸೆಪ್ಟೆಂಬರ್ 14ರಂದು ಮಾಂಸ ಮಾರಾಟಕ್ಕೆ ಸಂಬಂಧಿಸಿದ ವ್ಯಾಪಾರಿಗಳು ಆದೇಶವನ್ನು ಗಮನದಲ್ಲಿಟ್ಟುಕೊಂಡು ಸಹಕರಿಸುವಂತೆ ಸೂಚಿಸಲಾಗಿದೆ.
ಹಲಸೂರು ಕೆರೆಯಲ್ಲಿ ಗಣೇಶ ವಿಸರ್ಜನೆಗೆ ಸಿದ್ಧತೆ
ಇನ್ನು ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲಸೂರು ಕೆರೆಯ ಕಲ್ಯಾಣಿಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಪರಿಸರ ಸಂರಕ್ಷಣೆಯ ಉದ್ದೇಶದಿಂದ ಇಲ್ಲಿ ಮಣ್ಣಿನಿಂದ ತಯಾರಿಸಲಾದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಮಾತ್ರ ಅವಕಾಶ ನೀಡಲಾಗಿದೆ. ಪಿಒಪಿ (Plaster of Paris) ಗಣೇಶ ಮೂರ್ತಿಗಳ ವಿಸರ್ಜನೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ.
ಸಾರ್ವಜನಿಕರ ಸುರಕ್ಷತೆ ಮತ್ತು ಸುಗಮ ವಿಸರ್ಜನೆಗಾಗಿ ಹಲಸೂರು ಕೆರೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ, 24 ಗಂಟೆಗಳ ಕ್ರೇನ್ ಸೇವೆ, ಆಂಬುಲೆನ್ಸ್ ವ್ಯವಸ್ಥೆ, ವಿದ್ಯುತ್ ದೀಪಗಳು, ಕುಡಿಯುವ ನೀರು ಹಾಗೂ ಸಂಚಾರ ನಿರ್ವಹಣೆಯಂತಹ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಸೆಪ್ಟೆಂಬರ್ 14, 16, 18, 20, 22, 24, 26, 27 ಹಾಗೂ 28ರಂದು ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶ ಕಲ್ಪಿಸಲಾಗಿದೆ. ಕೆರೆಯ ಸ್ವಚ್ಛತಾ ಕಾರ್ಯಕ್ಕಾಗಿ ಸೆಪ್ಟೆಂಬರ್ 15, 17, 19, 21, 23 ಹಾಗೂ 25ರಂದು ವಿಸರ್ಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಣೇಶ ಚತುರ್ಥಿ ಸಂದರ್ಭದಲ್ಲಿ ಸಾರ್ವಜನಿಕರು ಪರಿಸರ ಸ್ನೇಹಿ ಆಚರಣೆಗೆ ಆದ್ಯತೆ ನೀಡಬೇಕು ಹಾಗೂ ಜಿಬಿಎ ಹೊರಡಿಸಿರುವ ನಿಯಮಗಳನ್ನು ಪಾಲಿಸುವ ಮೂಲಕ ಹಬ್ಬವನ್ನು ಸುರಕ್ಷಿತವಾಗಿ ಆಚರಿಸುವಂತೆ ಮನವಿ ಮಾಡಲಾಗಿದೆ.





