ಬೆಂಗಳೂರು ಸೆ.12: ವಿಯೆಟ್ನಾಂನಿಂದ ಬೆಂಗಳೂರಿಗೆ ಹೈಡ್ರೋಫೋನಿಕ್ ಗಾಂಜಾ ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಯಿಂದ ಸುಮಾರು ರೂ.1.38 ಕೋಟಿ ಮೌಲ್ಯದ 3.93 ಕೆ.ಜಿ. ಹೈಡ್ರೋಫೋನಿಕ್ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿ ವಿಯೆಟ್ನಾಂನ ಹಾನೊಯ್ ನಗರದಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಿದ್ದ ಎಂದು ತಿಳಿದುಬಂದಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬಳಿಕ ಕಸ್ಟಮ್ಸ್ ಅಧಿಕಾರಿಗಳು ಅನುಮಾನಾಸ್ಪದವಾಗಿ ಕಂಡುಬಂದ ಪ್ರಯಾಣಿಕನ ಬ್ಯಾಗ್ನ್ನು ತಪಾಸಣೆ ನಡೆಸಿದ್ದಾರೆ.
ಈ ವೇಳೆ ಬ್ಯಾಗ್ನಲ್ಲಿ ಹೈಡ್ರೋಫೋನಿಕ್ ಗಾಂಜಾ ಇರುವುದು ಪತ್ತೆಯಾಗಿದೆ. ಅಧಿಕಾರಿಗಳು ಬ್ಯಾಗ್ನಲ್ಲಿದ್ದ ಸುಮಾರು 3.93 ಕೆ.ಜಿ. ಹೈಡ್ರೋಫೋನಿಕ್ ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದು, ಅದರ ಅಂದಾಜು ಮೌಲ್ಯ ರೂ. 1.38 ಕೋಟಿ ಎಂದು ತಿಳಿಸಲಾಗಿದೆ.
ಗಾಂಜಾ ಪತ್ತೆಯಾಗುತ್ತಿದ್ದಂತೆ ಕಸ್ಟಮ್ಸ್ ಅಧಿಕಾರಿಗಳು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಯೆಟ್ನಾಂನ ಹಾನೊಯ್ನಿಂದ ಬೆಂಗಳೂರಿಗೆ ಮಾದಕ ವಸ್ತುವನ್ನು ಏಕೆ ತರಲಾಗುತ್ತಿತ್ತು, ಇದರ ಹಿಂದೆ ಮತ್ತಷ್ಟು ವ್ಯಕ್ತಿಗಳ ಕೈವಾಡವಿದೆಯೇ ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಆರೋಪಿಯ ವಿರುದ್ಧ NDPS ಕಾಯ್ದೆ, 1985ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಳ್ಳಸಾಗಣೆಯ ಜಾಲ, ಗಾಂಜಾ ಯಾರಿಗೆ ತಲುಪಿಸಬೇಕಾಗಿತ್ತು ಹಾಗೂ ಈ ಹಿಂದೆ ಇದೇ ರೀತಿಯ ಕೃತ್ಯದಲ್ಲಿ ಭಾಗಿಯಾಗಿದ್ದಾನೆಯೇ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೂಲಕ ಮಾದಕ ವಸ್ತುಗಳ ಕಳ್ಳಸಾಗಣೆ ತಡೆಯಲು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ಮತ್ತು ನಿಗಾ ಕಾರ್ಯವನ್ನು ಮುಂದುವರಿಸಿದ್ದಾರೆ.





