ಬೆಂಗಳೂರು: ನಗರದ ಮತ್ತೊಂದು ಪ್ರತಿಷ್ಠಿತ ಕ್ಲಬ್ ಮೇಲೆ ಆಹಾರ ಸುರಕ್ಷತಾ ಇಲಾಖೆ (FDA) ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಆಹಾರ ಸುರಕ್ಷತೆಗೆ ಸಂಬಂಧಿಸಿದ ಹಲವು ಗಂಭೀರ ನಿಯಮ ಉಲ್ಲಂಘನೆಗಳು ಪತ್ತೆಯಾಗಿವೆ. ಡಾಲರ್ಸ್ ಕಾಲೋನಿಯಲ್ಲಿರುವ ಚೇರ್ಮನ್ ಕ್ಲಬ್ನ ಅಡುಗೆಮನೆ ಹಾಗೂ ಆಹಾರ ಸಂಗ್ರಹಣಾ ಪ್ರದೇಶದಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳು, ಅನುಮತಿ ಇಲ್ಲದ ಕೃತಕ ಬಣ್ಣಗಳ ಬಳಕೆ ಹಾಗೂ ಸ್ವಚ್ಛತೆಯ ಕೊರತೆ ಸೇರಿದಂತೆ ಹಲವು ಅವ್ಯವಸ್ಥೆಗಳು ಕಂಡುಬಂದಿವೆ.
ಆಹಾರ ಸುರಕ್ಷತಾ ಅಧಿಕಾರಿಗಳು ನಡೆಸಿದ ಪರಿಶೀಲನೆ ವೇಳೆ ಸುಮಾರು 40 ಕೆ.ಜಿ. ಅವಧಿ ಮೀರಿದ ಮೆಣಸಿನಕಾಯಿ ಸಂಗ್ರಹಿಸಿರುವುದು ಪತ್ತೆಯಾಗಿದೆ. ಇದರ ಜೊತೆಗೆ 5 ಕೆ.ಜಿ. ಬ್ರೆಡ್ ಕ್ರಂಬ್ಸ್ ಹಾಗೂ 2 ಕೆ.ಜಿ. ಸಜೀರಾ ಆಹಾರ ಪದಾರ್ಥಗಳ ಪ್ಯಾಕೆಟ್ಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನಿಯಮಗಳಿಗೆ ಅನುಗುಣವಾದ ಲೇಬಲಿಂಗ್ ಇಲ್ಲದಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ಇನ್ನು ಕ್ಲಬ್ನ ಅಡುಗೆಮನೆ ಮತ್ತು ಆಹಾರ ಸಂಗ್ರಹಣಾ ಪ್ರದೇಶಗಳಲ್ಲಿ ತೀವ್ರ ಅನೈರ್ಮಲ್ಯ ಕಂಡುಬಂದಿದೆ. ಅಡುಗೆಮನೆಯಲ್ಲಿ ಜಿರಳೆಗಳು ಓಡಾಡುತ್ತಿರುವುದು ಅಧಿಕಾರಿಗಳಿಗೆ ಕಂಡುಬಂದಿದ್ದು, ಆಹಾರ ತಯಾರಿಕೆಯ ಸ್ಥಳದಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಅಗತ್ಯ ಆದ್ಯತೆ ನೀಡಲಾಗಿಲ್ಲ ಎಂಬುದು ಪರಿಶೀಲನೆಯಿಂದ ಬಹಿರಂಗವಾಗಿದೆ.
ಅಲ್ಲದೆ, ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಅನುಮತಿ ಇಲ್ಲದ ಅಥವಾ ನಿಯಮಬಾಹಿರ ಕೃತಕ ಬಣ್ಣಗಳನ್ನು ಬಳಸಿರುವುದು ಅಥವಾ ಅವುಗಳನ್ನು ಸಂಗ್ರಹಿಸಿಟ್ಟಿರುವುದು ಕೂಡ ಪತ್ತೆಯಾಗಿದೆ. ಆಹಾರ ಪದಾರ್ಥಗಳನ್ನು ಸಂಗ್ರಹಿಸುವಾಗ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸದಿರುವುದು ಮತ್ತೊಂದು ಪ್ರಮುಖ ಉಲ್ಲಂಘನೆಯಾಗಿದೆ.
ಸಸ್ಯಾಹಾರ-ಮಾಂಸಾಹಾರ ಒಟ್ಟಿಗೆ ಸಂಗ್ರಹಣೆ
ಕ್ಲಬ್ನಲ್ಲಿ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರ ಪದಾರ್ಥಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ಬದಲು ಒಂದೇ ಸ್ಥಳದಲ್ಲಿ ಇಟ್ಟಿರುವುದು ಕೂಡ ಅಧಿಕಾರಿಗಳ ಗಮನಕ್ಕೆ ಬಂದಿದೆ. ಆಹಾರ ಸುರಕ್ಷತಾ ನಿಯಮಗಳ ಪ್ರಕಾರ ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ಸೂಕ್ತ ರೀತಿಯಲ್ಲಿ ಪ್ರತ್ಯೇಕಿಸಿ ಸಂಗ್ರಹಿಸಬೇಕಾಗಿದ್ದು, ಈ ನಿಯಮವನ್ನೂ ಕ್ಲಬ್ನಲ್ಲಿ ಪಾಲಿಸಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಎಲ್ಲ ನಿಯಮ ಉಲ್ಲಂಘನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಆಹಾರ ಸುರಕ್ಷತಾ ಅಧಿಕಾರಿಗಳು ಕ್ಲಬ್ನ ಅಡುಗೆಮನೆಯನ್ನು ಸೀಲ್ ಮಾಡಿದ್ದಾರೆ. ಜೊತೆಗೆ ಕ್ಲಬ್ ಆಡಳಿತಕ್ಕೆ ನೋಟಿಸ್ ಜಾರಿ ಮಾಡಿ, ನಿಯಮ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳುವ ಪ್ರಕ್ರಿಯೆ ಆರಂಭಿಸಿದ್ದಾರೆ.
ನಗರದಲ್ಲಿ ಹೋಟೆಲ್ಗಳು, ರೆಸ್ಟೋರೆಂಟ್ಗಳು ಹಾಗೂ ಪ್ರತಿಷ್ಠಿತ ಕ್ಲಬ್ಗಳಲ್ಲಿ ಆಹಾರ ಸುರಕ್ಷತಾ ನಿಯಮಗಳ ಪಾಲನೆ ಪರಿಶೀಲಿಸಲು ಅಧಿಕಾರಿಗಳು ನಿರಂತರ ತಪಾಸಣೆ ನಡೆಸುತ್ತಿರುವ ಬೆನ್ನಲ್ಲೇ ಈ ದಾಳಿ ನಡೆದಿದೆ. ಆಹಾರ ತಯಾರಿಕೆ ಮತ್ತು ಸಂಗ್ರಹಣೆಯಲ್ಲಿ ಸ್ವಚ್ಛತೆ, ಗುಣಮಟ್ಟ ಹಾಗೂ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.





