ಬಾಗಲಕೋಟೆ: ಶಾಲೆಯಲ್ಲಿ ಮಕ್ಕಳು ಪಾಠ ಕೇಳುತ್ತಿದ್ದ ವೇಳೆ ದಿಢೀರ್ ಆಗಿ ಮೇಲ್ಛಾವಣಿಯ ಕಾಂಕ್ರೀಟ್ ಕುಸಿದು ಬಿದ್ದ ಘಟನೆ ಬಾಗಲಕೋಟೆ ತಾಲೂಕಿನ ಮುಗಳೂಳ್ಳಿ ತಾಂಡಾದಲ್ಲಿ ನಡೆದಿದೆ. ಅದೃಷ್ಟವಶಾತ್ ದೊಡ್ಡ ಅನಾಹುತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದ್ದು, ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಘಟನೆಯಲ್ಲಿ ನಾಲ್ವರು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿದೆ.
ಮುಗಳೂಳ್ಳಿ ತಾಂಡಾದ ಸರ್ಕಾರಿ ಶಾಲೆಯಲ್ಲಿ ಎಂದಿನಂತೆ ತರಗತಿಗಳು ನಡೆಯುತ್ತಿದ್ದವು. ಶಿಕ್ಷಕರು ಪಾಠ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಬೆಂಚ್‌ಗಳ ಮೇಲೆ ಕುಳಿತು ಪಾಠ ಕೇಳುತ್ತಿದ್ದರು. ಇದೇ ವೇಳೆ ಕೊಠಡಿಯ ಮೇಲ್ಛಾವಣಿಯ ಸಿಮೆಂಟ್ ಕಾಂಕ್ರೀಟ್‌ನ ಭಾಗವೊಂದು ದಿಢೀರ್ ಆಗಿ ಕುಸಿದು ಮಕ್ಕಳಿದ್ದ ಬೆಂಚ್‌ಗಳ ಮೇಲೆಯೇ ಬಿದ್ದಿದೆ.
ಮೇಲ್ಛಾವಣಿಯ ಭಾಗ ಕುಸಿಯುತ್ತಿದ್ದಂತೆ ತರಗತಿಯಲ್ಲಿದ್ದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕಾಂಕ್ರೀಟ್ ತುಂಡುಗಳು ವಿದ್ಯಾರ್ಥಿಗಳ ಮೇಲೆ ಬಿದ್ದ ಪರಿಣಾಮ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣ ಸ್ಥಳೀಯ ವೈದ್ಯರ ಬಳಿ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ ಎಂದು ತಿಳಿದುಬಂದಿದೆ.
ಕಬ್ಬಿಣದ ಸರಳು ಕಾಣುವಷ್ಟು ಶಿಥಿಲಗೊಂಡ ಕಟ್ಟಡ
ಘಟನೆ ಬಳಿಕ ಶಾಲಾ ಕೊಠಡಿಯ ದುಸ್ಥಿತಿ ಮತ್ತಷ್ಟು ಬಹಿರಂಗವಾಗಿದೆ. ಮೇಲ್ಛಾವಣಿ ಹಲವು ವರ್ಷಗಳಿಂದ ನಿರ್ವಹಣೆಯಿಲ್ಲದೆ ಶಿಥಿಲಗೊಂಡಿರುವುದು ಕಂಡುಬಂದಿದೆ. ಕಟ್ಟಡದ ಮೇಲ್ಛಾವಣಿಯ ಕಾಂಕ್ರೀಟ್ ಕಿತ್ತು ಹೋಗಿದ್ದು, ಒಳಭಾಗದಲ್ಲಿರುವ ಕಬ್ಬಿಣದ ಸರಳುಗಳು ಹೊರಗೆ ಕಾಣುವಷ್ಟು ಕಟ್ಟಡ ದುರ್ಬಲಗೊಂಡಿದೆ. ಇಂತಹ ಅಪಾಯಕಾರಿ ಸ್ಥಿತಿಯಲ್ಲಿದ್ದ ಕೊಠಡಿಯಲ್ಲೇ ಮಕ್ಕಳಿಗೆ ತರಗತಿ ನಡೆಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.
ಕೂದಲೆಳೆಯ ಅಂತರದಲ್ಲಿ ತಪ್ಪಿದ ದೊಡ್ಡ ಅನಾಹುತ
ಮೇಲ್ಛಾವಣಿಯ ಹೆಚ್ಚಿನ ಭಾಗ ತರಗತಿ ನಡೆಯುತ್ತಿದ್ದ ವೇಳೆ ಕುಸಿದಿದ್ದರೆ, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗುವ ಅಥವಾ ಪ್ರಾಣಹಾನಿಯಾಗುವ ಸಾಧ್ಯತೆಯಿತ್ತು. ಆದರೆ ಅದೃಷ್ಟವಶಾತ್ ದೊಡ್ಡ ಅನಾಹುತ ತಪ್ಪಿದೆ.
ಅಧಿಕಾರಿಗಳ ವಿರುದ್ಧ ಪೋಷಕರ ಆಕ್ರೋಶ
ಶಾಲಾ ಕಟ್ಟಡದ ದುಸ್ಥಿತಿಯ ಬಗ್ಗೆ ಶಿಕ್ಷಣ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮುಂಚಿತವಾಗಿಯೇ ಗಮನ ಹರಿಸಬೇಕಿತ್ತು ಎಂದು ಪೋಷಕರು ಮತ್ತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಟ್ಟಡ ಶಿಥಿಲಗೊಂಡಿದ್ದರೂ ದುರಸ್ತಿ ಮಾಡಿಸದೆ ಮಕ್ಕಳನ್ನು ಅದೇ ಕೊಠಡಿಯಲ್ಲಿ ಕೂರಿಸಿ ಪಾಠ ಮಾಡಿಸಿರುವುದು ಅಧಿಕಾರಿಗಳ ನಿರ್ಲಕ್ಷ್ಯ ಎಂದು ಆರೋಪಿಸಿದ್ದಾರೆ.
ಇನ್ನು ಮುಂದಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಶಾಲಾ ಕಟ್ಟಡದ ಸಂಪೂರ್ಣ ಪರಿಶೀಲನೆ ನಡೆಸಬೇಕು. ಅಪಾಯಕಾರಿ ಕೊಠಡಿಗಳನ್ನು ಬಳಸುವುದನ್ನು ತಕ್ಷಣ ನಿಲ್ಲಿಸಿ, ಮಕ್ಕಳಿಗೆ ಸುರಕ್ಷಿತ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.





