ತುಮಕೂರು: ಶಾಲಾ ಆವರಣದಲ್ಲಿ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ 10 ವರ್ಷದ ವಿದ್ಯಾರ್ಥಿಯೊಬ್ಬನ ಮೇಲೆ ಕಟ್ಟಡದ ಪಿಲ್ಲರ್ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಬಿಳಿಗಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕನನ್ನು ಮತ್ತಿಘಟ್ಟ ಗ್ರಾಮದ ಆನಂದ್ ಮೂರ್ತಿ ಅವರ ಪುತ್ರ ಧನುಷ್ (10) ಎಂದು ಗುರುತಿಸಲಾಗಿದೆ.
ಧನುಷ್ ಬಿಳಿಗಿಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಎಂದಿನಂತೆ ಮಂಗಳವಾರ ಬೆಳಗ್ಗೆ ಶಾಲೆಗೆ ಬಂದಿದ್ದ ಧನುಷ್, ತರಗತಿಗಳು ಆರಂಭವಾಗುವ ಮುನ್ನ ತನ್ನ ಸ್ನೇಹಿತರೊಂದಿಗೆ ಶಾಲೆಯ ಆವರಣದ ಸಮೀಪ ಆಟವಾಡುತ್ತಿದ್ದ. ಇದೇ ವೇಳೆ ಶಾಲೆಯ ಪಕ್ಕದಲ್ಲಿರುವ ನಂದಿನಿ ಹಾಲಿನ ಡೈರಿ ಕಟ್ಟಡದ ಪಿಲ್ಲರ್ ಏಕಾಏಕಿ ಕುಸಿದು ಬಾಲಕನ ಮೇಲೆ ಬಿದ್ದಿದೆ.
ಪಿಲ್ಲರ್ ನೇರವಾಗಿ ಧನುಷ್‌ನ ತಲೆಯ ಮೇಲೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೆಳಗ್ಗೆ ಸುಮಾರು 9.30ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಬಾಲಕನ ಸಾವಿಗೆ ಕಟ್ಟಡದ ಕಳಪೆ ಕಾಮಗಾರಿಯೇ ಕಾರಣವಾಗಿರಬಹುದು ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದಾರೆ. ನಂದಿನಿ ಡೈರಿ ಕಟ್ಟಡದ ನಿರ್ಮಾಣದ ಗುಣಮಟ್ಟದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ನಿರ್ಮಾಣ ಹಂತದಲ್ಲಿದ್ದ ಸುರಂಗಕ್ಕೆ ಏಕಾಏಕಿ ನುಗ್ಗಿದ ನೀರು: 7 ಕಾರ್ಮಿಕರು ಸಾವು
ಉತ್ತರಾಖಂಡದ ಚಮೋಲಿ ಜಿಲ್ಲೆಯ ಪೀಪಲ್‌ಕೋಟಿ ಸಮೀಪ ನಿರ್ಮಾಣ ಹಂತದಲ್ಲಿದ್ದ ವಿಷ್ಣುಗಡ–ಪೀಪಲ್‌ಕೋಟಿ ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ಭೀಕರ ದುರಂತ ಸಂಭವಿಸಿದ್ದು, ದಿಢೀರ್ ನೀರು ಹಾಗೂ ಮಣ್ಣು-ಬಂಡೆಗಳ ತ್ಯಾಜ್ಯ ಒಳನುಗ್ಗಿದ ಪರಿಣಾಮ 7 ಕಾರ್ಮಿಕರು ಮೃತಪಟ್ಟಿದ್ದು, 14ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಟೆಹ್ರಿ ಹೈಡ್ರೋ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (THDC) ಕೈಗೆತ್ತಿಕೊಂಡಿರುವ ಈ ಜಲವಿದ್ಯುತ್ ಯೋಜನೆಯಲ್ಲಿ ಗುರುವಾರ ಸಂಜೆ ಸುರಂಗದೊಳಗೆ ಕಾಮಗಾರಿ ನಡೆಯುತ್ತಿದ್ದ ವೇಳೆ ಏಕಾಏಕಿ ಭಾರಿ ಪ್ರಮಾಣದ ನೀರು, ಮಣ್ಣು ಮತ್ತು ಕಲ್ಲುಗಳ ಮಿಶ್ರಣ ರಭಸದಿಂದ ಒಳಹೊಕ್ಕಿದೆ. ಕ್ಷಣಾರ್ಧದಲ್ಲಿ ಸುರಂಗದೊಳಗಿನ ಪರಿಸ್ಥಿತಿ ನಿಯಂತ್ರಣ ತಪ್ಪಿದ್ದು, ಕಾರ್ಮಿಕರು ಪ್ರಾಣ ಉಳಿಸಿಕೊಳ್ಳಲು ಹರಸಾಹಸಪಟ್ಟಿದ್ದಾರೆ.
ಅಪಘಾತ ಸಂಭವಿಸಿದ ವೇಳೆ ಸುರಂಗದೊಳಗೆ ಒಟ್ಟು 22 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ನೀರಿನ ರಭಸಕ್ಕೆ ಕೆಲವರು ಸುರಂಗದ ಹೊರಭಾಗಕ್ಕೆ ತಳ್ಳಲ್ಪಟ್ಟರೆ, ಇನ್ನು ಹಲವರು ಒಳಗಡೆಯೇ ಸಿಲುಕಿಕೊಂಡಿದ್ದರು. ಘಟನೆ ತಿಳಿಯುತ್ತಿದ್ದಂತೆ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (NDRF), ರಾಜ್ಯ ವಿಪತ್ತು ಸ್ಪಂದನಾ ಪಡೆ (SDRF), ಇಂಡೋ-ಟಿಬೆಟನ್ ಗಡಿ ಪೊಲೀಸ್ (ITBP), ಸೇನೆ ಹಾಗೂ ಸ್ಥಳೀಯ ಪೊಲೀಸರು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.
ರಕ್ಷಣಾ ತಂಡಗಳು ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ 20ಕ್ಕೂ ಹೆಚ್ಚು ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತೆಗೆದಿದ್ದು, ಗಾಯಗೊಂಡ 14 ಮಂದಿಯನ್ನು ಗೋಪೇಶ್ವರ ಹಾಗೂ ಪೀಪಲ್‌ಕೋಟಿಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕೆಲವರ ಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಅವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಡೆಹ್ರಾಡೂನ್‌ನ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದಿಂದ ಘಟನೆಯ ಬಗ್ಗೆ ನಿರಂತರ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ರಕ್ಷಣಾ ಕಾರ್ಯಕ್ಕೆ ಯಾವುದೇ ವಿಳಂಬವಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವ ಅವರು, ಗಾಯಾಳುಗಳಿಗೆ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ ಆದೇಶಿಸಿದ್ದಾರೆ.
ದುರಂತದಲ್ಲಿ ಜಾರ್ಖಂಡ್ ಹಾಗೂ ಛತ್ತೀಸ್‌ಗಢ ಮೂಲದ ಕಾರ್ಮಿಕರೂ ಗಾಯಗೊಂಡಿರುವ ಹಿನ್ನೆಲೆಯಲ್ಲಿ, ಸಿಎಂ ಧಾಮಿ ಅವರು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಹಾಗೂ ಛತ್ತೀಸ್‌ಗಢ ಮುಖ್ಯಮಂತ್ರಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ನೆರವು ಮತ್ತು ಚಿಕಿತ್ಸೆಗೆ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.
ಭಾರಿ ಮಳೆಯೇ ದುರಂತಕ್ಕೆ ಕಾರಣ?
ಕಳೆದ ಹಲವು ದಿನಗಳಿಂದ ಚಮೋಲಿ ಜಿಲ್ಲೆಯಲ್ಲಿ ನಿರಂತರ ಧಾರಾಕಾರ ಮಳೆಯಾಗುತ್ತಿದೆ. ಪರ್ವತ ಪ್ರದೇಶಗಳಲ್ಲಿ ಭೂಕುಸಿತ, ನದಿಗಳ ನೀರಿನ ಮಟ್ಟ ಏರಿಕೆ ಹಾಗೂ ಮಣ್ಣು ಕುಸಿತದ ಘಟನೆಗಳು ಹೆಚ್ಚಾಗಿವೆ. ಇತ್ತೀಚೆಗಷ್ಟೇ ನೀತಿ ಕಣಿವೆ ಪ್ರದೇಶದಲ್ಲಿ ನದಿಯ ಪ್ರವಾಹಕ್ಕೆ ಸೇತುವೆಯೊಂದು ಕೊಚ್ಚಿಹೋಗಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಪ್ರಾಥಮಿಕ ಮಾಹಿತಿಯ ಪ್ರಕಾರ, ಮಳೆಯಿಂದ ಪರ್ವತ ಪ್ರದೇಶದಲ್ಲಿ ಜಮೆಯಾಗಿದ್ದ ಮಣ್ಣು ಮತ್ತು ಕಲ್ಲುಗಳು ನೀರಿನೊಂದಿಗೆ ಸುರಂಗದೊಳಗೆ ನುಗ್ಗಿರುವ ಸಾಧ್ಯತೆ ಇದೆ. ಘಟನೆಯ ನಿಖರ ಕಾರಣ ತಿಳಿಯಲು ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಸುರಂಗದ ಸುರಕ್ಷತಾ ಕ್ರಮಗಳ ಬಗ್ಗೆಯೂ ಪರಿಶೀಲನೆ ನಡೆಯುತ್ತಿದೆ.





