ಬೆಂಗಳೂರು, ಆಗಸ್ಟ್ 12: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿಸಿಬಿ ಪೊಲೀಸರು ನಡೆಸಿದ ದಿಢೀರ್ ದಾಳಿಯಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಿಂದ ಆ್ಯಂಡ್ರಾಯ್ಡ್ ಮೊಬೈಲ್ ಪತ್ತೆಯಾಗಿದೆ. ಈ ಘಟನೆಯು ಜೈಲು ಅಧಿಕಾರಿಗಳಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಜೈಲಾಧಿಕಾರಿಯೊಬ್ಬರನ್ನು ಅಮಾನತ್ತುಗೊಳಿಸಲಾಗಿದೆ. ಘಟನೆಯ ಗಂಭೀರತೆಯನ್ನು ಗಮನಿಸಿದ ಮೇಲಾಧಿಕಾರಿಗಳು, ಜೈಲಿನ ಎಸ್ಪಿ ಅವರಿಗೆ ವಿವರಣಾತ್ಮಕ ನೋಟಿಸ್ ಜಾರಿ ಮಾಡಿದ್ದಾರೆ.
ಸಿಸಿಬಿ ದಾಳಿಯಲ್ಲಿ 10ಕ್ಕೂ ಹೆಚ್ಚು ಮೊಬೈಲ್ ಪತ್ತೆ
ಸಿಸಿಬಿ ಪೊಲೀಸರು ಆಗಸ್ಟ್ 11ರ ರಾತ್ರಿ ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ ಜೈಲಿನ ವಿವಿಧ ಬ್ಯಾರಕ್‌ಗಳಲ್ಲಿ 10ಕ್ಕೂ ಹೆಚ್ಚು ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದಾರೆ. ಡಿಸಿಪಿ ಹರಿಬಾಬು ಮತ್ತು ಇಮಾಮ್ ಖಾಸೀಂ ನೇತೃತ್ವದಲ್ಲಿ ಸುಮಾರು 90ಕ್ಕೂ ಹೆಚ್ಚು ಸಿಸಿಬಿ ಸಿಬ್ಬಂದಿ ಪ್ರತಿ ಬ್ಯಾರಕ್‌ನಲ್ಲಿ ಸತತವಾಗಿ 6 ಗಂಟೆಗಳ ಕಾಲ ತಪಾಸಣೆ ನಡೆಸಿದ್ದಾರೆ. ಈ ತಪಾಸಣೆಯಲ್ಲಿ ಪ್ರಜ್ವಲ್ ರೇವಣ್ಣ ಅವರ ಹಾಸಿಗೆಯ ಕೆಳಗೆ ಬಚ್ಚಿಟ್ಟಿದ್ದ ಆ್ಯಂಡ್ರಾಯ್ಡ್ ಮೊಬೈಲ್ ಪತ್ತೆಯಾಗಿದೆ.
ಆಗಸ್ಟ್ 6ರಂದೇ ತಪಾಸಣೆ ನಡೆಸಿತ್ತು ಜೈಲು ಅಧಿಕಾರಿಗಳು
ಆಗಸ್ಟ್ 6ರಂದು ಜೈಲು ಅಧಿಕಾರಿಗಳು ಬ್ಯಾರಕ್ಗಳಲ್ಲಿ ತಪಾಸಣೆ ನಡೆಸಿದ್ದ ವೇಳೆ ಪ್ರಜ್ವಲ್ ರೇವಣ್ಣ ಬಳಿ ಯಾವುದೇ ಮೊಬೈಲ್ ಪತ್ತೆಯಾಗಿರಲಿಲ್ಲ. ಆದರೆ ಕೆಲವೇ ದಿನಗಳಲ್ಲಿ ಅವರ ಬಳಿ ಮೊಬೈಲ್ ಕಾಣಿಸಿಕೊಂಡಿದ್ದು, ಜೈಲು ಸುರಕ್ಷತೆಯಲ್ಲಿ ದೊಡ್ಡ ಲೋಪವನ್ನು ಬಯಲು ಮಾಡಿದೆ. ಮೊಬೈಲ್ ಅವರಿಗೆ ಹೇಗೆ ಲಭ್ಯವಾಯಿತು ಮತ್ತು ಯಾರು ನೀಡಿದರು ಎಂಬುದನ್ನು ತನಿಖೆ ಮಾಡಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ವಿಐಪಿ ಕೈದಿಗಳ ಬ್ಯಾರಕ್‌ನಲ್ಲೂ ತಪಾಸಣೆ
ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್ ಮಾತ್ರವಲ್ಲದೆ, ಜೈಲಿನಲ್ಲಿರುವ ಇತರೆ ವಿಐಪಿ ಕೈದಿಗಳಾದ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಹಲವು ಪ್ರಮುಖ ಕೈದಿಗಳ ಬ್ಯಾರಕ್ಗಳಲ್ಲಿಯೂ ಸಿಸಿಬಿ ಅಧಿಕಾರಿಗಳು ಸತತ 6 ಗಂಟೆಗಳ ಕಾಲ ಶೋಧ ನಡೆಸಿದ್ದಾರೆ. ದರ್ಶನ್ ಮತ್ತು ಪವಿತ್ರಾ ಗೌಡ ಅವರ ಬ್ಯಾರಕ್ಗಳಲ್ಲಿ ಹೆಚ್ಚಿನ ವಸ್ತುಗಳು ಪತ್ತೆಯಾಗಿಲ್ಲವಾದರೂ, ಪ್ರಜ್ವಲ್ ರೇವಣ್ಣ ಬ್ಯಾರಕ್ನಲ್ಲಿ ಮೊಬೈಲ್ ಪತ್ತೆಯಾಗಿದೆ.
ಮೊಬೈಲ್ ಬಳಕೆಗೆ ಕಾರಣವೇನು?
ಮೊಬೈಲ್ ಜೈಲಿನೊಳಗೆ ಹೇಗೆ ಬಂತು, ಯಾರು ನೀಡಿದರು ಹಾಗೂ ಅದನ್ನು ಯಾವ ಉದ್ದೇಶಕ್ಕೆ ಬಳಸಲಾಗುತ್ತಿತ್ತು ಎಂಬುದರ ಕುರಿತು ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಸದ್ಯ, ಪ್ರಜ್ವಲ್ ರೇವಣ್ಣ ಅವರಿಗೆ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ. ಹೊರಗಿನ ಸಂಪರ್ಕಗಳೊಂದಿಗೆ ಮಾತನಾಡಲು, ಸಾಕ್ಷ್ಯಗಳನ್ನು ನಾಶಪಡಿಸಲು ಅಥವಾ ಬೇರೆ ಯಾವುದೇ ಅಕ್ರಮ ಚಟುವಟಿಕೆಗೆ ಮೊಬೈಲ್ ಬಳಕೆಯಾಗಿದೆಯೇ ಎಂದು ಪರಿಶೀಲಿಸಲಾಗುತ್ತಿದೆ.
ಜೈಲಾಧಿಕಾರಿ ಅಮಾನತ್ತು – ಎಸ್ಪಿಗೆ ನೋಟಿಸ್
ಘಟನೆಯ ಹಿನ್ನೆಲೆಯಲ್ಲಿ ಜೈಲಾಧಿಕಾರಿಯೊಬ್ಬರನ್ನು ಅಮಾನತ್ತುಗೊಳಿಸಿ, ಜೈಲಿನ ಎಸ್ಪಿ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಕೈದಿಗಳಿಗೆ ನಿಷೇಧಿತ ವಸ್ತುಗಳು ಹೇಗೆ ತಲುಪುತ್ತಿವೆ ಮತ್ತು ಜೈಲು ಸುರಕ್ಷತೆಯಲ್ಲಿ ಎಷ್ಟು ಲೋಪಗಳಿವೆ ಎಂಬುದನ್ನು ಪರಿಶೀಲಿಸಲು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ನಿಗದಿತ ಅವಧಿಯೊಳಗೆ ಮೊಬೈಲ್ ಕುರಿತು ಸಮರ್ಪಕ ಮಾಹಿತಿ ನೀಡದಿದ್ದರೆ ಪ್ರಜ್ವಲ್ ರೇವಣ್ಣ ಅವರನ್ನು ಬೇರೆ ಬ್ಯಾರಕ್ಕೆ ಸ್ಥಳಾಂತರಿಸುವುದಾಗಿ ಜೈಲು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.





