ಗ್ಲ್ಯಾಸ್ಗೋ (ಆ. 01): 2026ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮತ್ತಷ್ಟು ಜೋರಾಗಿದೆ. ಅಥ್ಲೆಟಿಕ್ಸ್ ಹಾಗೂ ಬಾಕ್ಸಿಂಗ್ನಲ್ಲಿ ಯಶಸ್ಸಿನ ಬೆನ್ನಲ್ಲೇ, ಪ್ಯಾರಾ-ಅಥ್ಲೆಟಿಕ್ಸ್ನಲ್ಲೂ ಭಾರತೀಯ ಕ್ರೀಡಾಪಟುಗಳು ಅದ್ಭುತ ಸಾಧನೆ ಮಾಡಿದ್ದಾರೆ. ಪುರುಷರ ಪ್ಯಾರಾ ಶಾಟ್ಪುಟ್ F57 ವಿಭಾಗದಲ್ಲಿ ಭಾರತದ ಸೋಮನ್ ರಾಣಾ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದರೆ, ಶುಭಮ್ ಜುಯಾಲ್ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು.
ಚಿನ್ನ ಗೆದ್ದ ಸೋಮನ್ ರಾಣಾ
ಸ್ಪರ್ಧೆಯಲ್ಲಿ ಆರಂಭದಿಂದಲೇ ಭಾರತದ ಇಬ್ಬರು ಅಥ್ಲೀಟ್ಗಳ ನಡುವೆ ತೀವ್ರ ಪೈಪೋಟಿ ಕಂಡುಬಂತು. ಮೊದಲ ಹಂತದಲ್ಲಿ ಶುಭಮ್ ಜುಯಾಲ್ 13.08 ಮೀಟರ್ ಎಸೆದು ಅಗ್ರಸ್ಥಾನದಲ್ಲಿದ್ದರು. ಆದರೆ ಅನುಭವಿ ಅಥ್ಲೀಟ್ ಸೋಮನ್ ರಾಣಾ ತಮ್ಮ ಅತ್ಯುತ್ತಮ ಪ್ರಯತ್ನದಲ್ಲಿ 13.40 ಮೀಟರ್ ದೂರ ಎಸೆದು ಚಿನ್ನದ ಪದಕವನ್ನು ಗೆದ್ದರು. ಈ ಸಾಧನೆಯೊಂದಿಗೆ ಕಾಮನ್ವೆಲ್ತ್ ಕ್ರೀಡಾಕೂಟದ ಈ ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಶುಭಮ್ ಜುಯಾಲ್ ಬೆಳ್ಳಿ ಪದಕದೊಂದಿಗೆ ಭಾರತದ ಸಾಧನೆಗೆ ಮತ್ತಷ್ಟು ಮೆರುಗು ತಂದರು.
ಸೋಮನ್ ರಾಣಾ ಯಾರು?
ಸೋಮನ್ ರಾಣಾ ಅವರ ಜೀವನಗಾಥೆ ಅನೇಕ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದೆ. ಬಿಹಾರ ಮೂಲದ ಅವರು ಭಾರತೀಯ ಸೇನೆಯಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಆರಂಭದಲ್ಲಿ ಬಾಕ್ಸಿಂಗ್ನಲ್ಲಿ ತೊಡಗಿಸಿಕೊಂಡಿದ್ದ ಅವರು, 2005ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ನೆಲಬಾಂಬ್ ಸ್ಫೋಟಕ್ಕೆ ಸಿಲುಕಿ ಒಂದು ಕಾಲು ಕಳೆದುಕೊಂಡರು. ಈ ದುರ್ಘಟನೆ ಅವರ ಬದುಕಿನ ದಿಕ್ಕನ್ನೇ ಬದಲಿಸಿತು. ಆದರೂ ಛಲ ಬಿಡದ ಸೋಮನ್ ಪ್ಯಾರಾ ಶಾಟ್ಪುಟ್ಗೆ ಪ್ರವೇಶಿಸಿ ಕಠಿಣ ಪರಿಶ್ರಮದ ಮೂಲಕ ಯಶಸ್ಸಿನ ಶಿಖರ ತಲುಪಿದರು.
2022ರ ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಹಾಗೂ 2025ರ ಪ್ಯಾರಾ ವಿಶ್ವ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದಿದ್ದ ಸೋಮನ್, ಇದೀಗ ಕಾಮನ್ವೆಲ್ತ್ ಚಿನ್ನದ ಪದಕ ಗೆದ್ದು ತಮ್ಮ ಸಾಧನೆಗೆ ಮತ್ತೊಂದು ಚಿನ್ನದ ಗರಿ ಸೇರಿಸಿದ್ದಾರೆ.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಶುಭಮ್ ಜುಯಾಲ್
ಇನ್ನೊಂದೆಡೆ, ಉತ್ತರಾಖಂಡದ ರೂರ್ಕಿ ಮೂಲದ ಶುಭಮ್ ಜುಯಾಲ್ ಭಾರತೀಯ ಸೇನೆಯಲ್ಲಿ ಲ್ಯಾನ್ಸ್ ನಾಯಕ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 2012ರಲ್ಲಿ ಸೇನೆಗೆ ಸೇರುವ ಪ್ರಕ್ರಿಯೆಯ ವೇಳೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡರೂ, ಧೈರ್ಯ ಕಳೆದುಕೊಳ್ಳಲಿಲ್ಲ. ಕೃತಕ ಕಾಲಿನ ನೆರವಿನಿಂದ ಪ್ಯಾರಾ ಶಾಟ್ಪುಟ್ನಲ್ಲಿ ಅಭ್ಯಾಸ ಆರಂಭಿಸಿ, ಮೊದಲ ಕಾಮನ್ವೆಲ್ತ್ ಕ್ರೀಡಾಕೂಟದಲ್ಲೇ ಬೆಳ್ಳಿ ಪದಕ ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದಾರೆ.
ಭಾರತೀಯ ಸೇನೆಯ ಇಬ್ಬರು ಯೋಧರು ಕಾಮನ್ವೆಲ್ತ್ ವೇದಿಕೆಯಲ್ಲಿ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸಿರುವುದು ದೇಶದ ಕ್ರೀಡಾಭಿಮಾನಿಗಳಲ್ಲಿ ಸಂಭ್ರಮ ಮೂಡಿಸಿದೆ.





