ಬೆಂಗಳೂರು (ಜುಲೈ 27): ರಾಷ್ಟ್ರೀಯ ಹೆದ್ದಾರಿ-4ರ ಪೀಣ್ಯ ಎಲಿವೇಟೆಡ್ ಫ್ಲೈಓವರ್ (ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆ) ಮೇಲೆ ಡಾಂಬರೀಕರಣ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರಕ್ಕೆ ಬರುವ ವಾಹನ ಸವಾರರಿಗೆ ಮಹತ್ವದ ಟ್ರಾಫಿಕ್ ಸೂಚನೆ ನೀಡಲಾಗಿದೆ. ಇಂದಿನಿಂದ ಅಂದರೆ ಜುಲೈ 27ರಿಂದ ಆಗಸ್ಟ್ 5ರವರೆಗೆ ಒಟ್ಟು 10 ದಿನಗಳ ಕಾಲ ರಾತ್ರಿ ವೇಳೆ ಮೇಲ್ಸೇತುವೆಯ ಮೇಲೆ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಬೆಂಗಳೂರು ಸಂಚಾರ ವಿಭಾಗ ಪೊಲೀಸರು ಪ್ರಕಟಿಸಿದ್ದಾರೆ.
ಸಾರ್ವಜನಿಕರ ಸುರಕ್ಷತೆ ಹಾಗೂ ಕಾಮಗಾರಿ ಸುಗಮವಾಗಿ ಪೂರ್ಣಗೊಳ್ಳುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಸಾಮಾನ್ಯ ದಿನಗಳಲ್ಲಿ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಫ್ಲೈಓವರ್ನಲ್ಲಿ ಬೆಂಗಳೂರು ಕಡೆಗೆ ಬರುವ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ. ಶನಿವಾರ ಹಾಗೂ ಭಾನುವಾರದಂದು ಮಾತ್ರ ರಾತ್ರಿ 12 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಸಂಚಾರ ನಿರ್ಬಂಧ ಜಾರಿಯಲ್ಲಿರಲಿದೆ ಎಂದು ತಿಳಿಸಿದೆ.
ರಾಷ್ಟ್ರೀಯ ಹೆದ್ದಾರಿ-4ರ ಕೆನ್ನಮೆಟಲ್ ಮೀಡಿಯಾ (Upper Ramp)ದಿಂದ ಎಸ್.ಆರ್.ಎಸ್ (Down Ramp)ವರೆಗಿನ ಮೇಲ್ಸೇತುವೆ ಭಾಗದಲ್ಲಿ ಡಾಂಬರೀಕರಣ ನಡೆಯಲಿದ್ದು, ಈ ಅವಧಿಯಲ್ಲಿ ವಾಹನಗಳು ಫ್ಲೈಓವರ್ ಬಳಸುವುದನ್ನು ತಪ್ಪಿಸಿಕೊಳ್ಳಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.
“ಸಂಚಾರ ಸಲಹೆ/Traffic advisory” pic.twitter.com/hRbIikUtwZ
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) July 27, 2026
ಪರ್ಯಾಯ ಮಾರ್ಗ
ನೆಲಮಂಗಲದಿಂದ ಬೆಂಗಳೂರು ಕಡೆಗೆ ಬರುವ ವಾಹನಗಳು ಕೆನ್ನಮೆಟಲ್ ಫ್ಯಾಕ್ಟರಿ ಸಮೀಪ ಫ್ಲೈಓವರ್ ಕೆಳಭಾಗದ ಸರ್ವಿಸ್ ರಸ್ತೆಯನ್ನು ಬಳಸಬೇಕು. ಅಲ್ಲಿಂದ 8ನೇ ಮೈಲಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಎಸ್.ಆರ್.ಎಸ್ ಜಂಕ್ಷನ್ ಹಾಗೂ ಗೊರಗುಂಟೆಪಾಳ್ಯ ಮಾರ್ಗವಾಗಿ ನಗರ ಪ್ರವೇಶಿಸಬಹುದು ಎಂದು ಪರ್ಯಾಯ ಮಾರ್ಗವನ್ನು ಸೂಚಿಸಲಾಗಿದೆ.
ಈ ಕಾಮಗಾರಿಯಿಂದ ರಾತ್ರಿ ವೇಳೆ ಸಂಚರಿಸುವ ವಾಹನ ಸವಾರರಿಗೆ ಸ್ವಲ್ಪ ಮಟ್ಟಿನ ವಿಳಂಬವಾಗುವ ಸಾಧ್ಯತೆ ಇದೆ. ಆದ್ದರಿಂದ ಪ್ರಯಾಣ ಆರಂಭಿಸುವ ಮುನ್ನ ಟ್ರಾಫಿಕ್ ಮಾಹಿತಿ ಪರಿಶೀಲಿಸಿ, ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ಪೀಣ್ಯ ಫ್ಲೈಓವರ್ ಬೆಂಗಳೂರು ನಗರದ ಪ್ರಮುಖ ಸಂಪರ್ಕ ಮಾರ್ಗಗಳಲ್ಲಿ ಒಂದಾಗಿದ್ದು, ದಿನನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಉತ್ತಮ ಗುಣಮಟ್ಟದ ರಸ್ತೆ ಹಾಗೂ ಸುರಕ್ಷಿತ ಸಂಚಾರಕ್ಕಾಗಿ ಈ ಡಾಂಬರೀಕರಣ ಕಾಮಗಾರಿ ಕೈಗೊಳ್ಳಲಾಗಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ವಾಹನ ಸವಾರರಿಗೆ ಇನ್ನಷ್ಟು ಸುಗಮ ಸಂಚಾರ ದೊರೆಯುವ ನಿರೀಕ್ಷೆಯಿದೆ.





