ಚಿಕ್ಕಮಗಳೂರು (ಜು.27): ಕಾಡುಹಂದಿ ಶಿಕಾರಿಗೆಂದು ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರಿನ ಕಡೂರು ತಾಲೂಕಿನ ದೊಣ್ಣೆಕೋರನಹಳ್ಳಿ ಗ್ರಾಮದಲ್ಲಿ ನಡೆದಿದೆ. ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವನ್ನಪ್ಪುತ್ತಿದ್ದಂತೆ ವಿಷಯ ಮುಚ್ಚಿಹಾಕಲು ಆರೋಪಿಗಳು ಶವವನ್ನು ಗುಟ್ಟಾಗಿ ಹೂತುಹಾಕಿದ್ದಾರೆ. ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಯಗಟಿ ಠಾಣೆ ಪೊಲೀಸರು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.
ಮೃತರನ್ನು ಗ್ರಾಮದ ನಿವಾಸಿ ಕರಿಯಪ್ಪ (52) ಎಂದು ಗುರುತಿಸಲಾಗಿದೆ. ಆರೋಪಿಗಳಾಗಿ ಅದೇ ಗ್ರಾಮದ ಚಂದ್ರಪ್ಪ, ಕೆಂಚಪ್ಪ ಹಾಗೂ ಯದುಕುಮಾರ್ ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಗಳು ಕಾಡುಹಂದಿ ಬೇಟೆಯಾಡುವ ಉದ್ದೇಶದಿಂದ ಜಮೀನಿನ ಬಳಿ ಅಕ್ರಮವಾಗಿ ವಿದ್ಯುತ್ ತಂತಿ ಅಳವಡಿಸಿದ್ದರು. ಈ ವೇಳೆ ಅಲ್ಲಿಗೆ ತೆರಳಿದ್ದ ಕರಿಯಪ್ಪ ಅವರು ಆಕಸ್ಮಿಕವಾಗಿ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನೆಯಿಂದ ಗಾಬರಿಗೊಂಡ ಆರೋಪಿಗಳು ತಮ್ಮ ವಿರುದ್ಧ ಪ್ರಕರಣ ದಾಖಲಾಗುವ ಭೀತಿಯಿಂದ ಮೃತದೇಹವನ್ನು ಯಾರಿಗೂ ತಿಳಿಯದಂತೆ ಗುಟ್ಟಾಗಿ ಹೂತುಹಾಕಿದ್ದಾರೆ. ಅಲ್ಲದೆ, ಘಟನೆಯ ಕುರಿತು ಯಾವುದೇ ಮಾಹಿತಿ ಹೊರಬರದಂತೆ ಸಾಕ್ಷ್ಯ ನಾಶಪಡಿಸಲು ಯತ್ನಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಇದೇ ವೇಳೆ ಕರಿಯಪ್ಪ ಅವರು ಮನೆಗೆ ವಾಪಸ್ ಬಾರದೆ ಇದ್ದುದರಿಂದ ಕುಟುಂಬ ಸದಸ್ಯರು ಆತಂಕಕ್ಕೊಳಗಾದರು. ಸಂಬಂಧಿಕರು ಹಾಗೂ ಗ್ರಾಮಸ್ಥರು ಹಲವು ಕಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗಲಿಲ್ಲ. ಕೊನೆಗೆ ಯಗಟಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಲಾಯಿತು.
ಪೊಲೀಸರು ತನಿಖೆ ಆರಂಭಿಸಿ, ಸುತ್ತಮುತ್ತಲಿನ ಜಮೀನುಗಳ ಬಳಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ದೃಶ್ಯಾವಳಿಗಳಲ್ಲಿ ಕರಿಯಪ್ಪ ಅವರು ಜಮೀನಿನ ಕಡೆ ತೆರಳಿರುವುದು ಕಂಡುಬಂದಿತ್ತು. ಕೆಲವೇ ಗಂಟೆಗಳ ಬಳಿಕ ಅದೇ ಮಾರ್ಗದಲ್ಲಿ ಮತ್ತೊಬ್ಬ ವ್ಯಕ್ತಿ ಆತಂಕದಿಂದ ಓಡಾಡುತ್ತಿರುವ ದೃಶ್ಯವೂ ಪೊಲೀಸರ ಗಮನ ಬಂದಿತ್ತು.
ಆ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣದ ಸತ್ಯ ಹೊರಬಿದ್ದಿದೆ. ಬಳಿಕ ಆರೋಪಿಗಳು ಕಾಡುಹಂದಿ ಬೇಟೆಗೆ ವಿದ್ಯುತ್ ತಂತಿ ಅಳವಡಿಸಿದ್ದನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಮೃತದೇಹವನ್ನು ಗುಟ್ಟಾಗಿ ಹೂತುಹಾಕಿರುವ ಸ್ಥಳದ ಮಾಹಿತಿಯನ್ನೂ ನೀಡಿದ್ದಾರೆ.
ಅಧಿಕಾರಿಗಳ ಸಮ್ಮುಖದಲ್ಲಿ ಹೂತುಹಾಕಿದ್ದ ಸ್ಥಳವನ್ನು ಗುರುತಿಸಿ ಮೃತದೇಹವನ್ನು ಹೊರತೆಗೆಯುವ ಕಾರ್ಯ ನಡೆಸಲಾಯಿತು. ತರೀಕೆರೆ ಉಪವಿಭಾಗಾಧಿಕಾರಿ (ಎಸಿ) ಅವರ ನೇತೃತ್ವದಲ್ಲಿ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಗ್ರಾಮಸ್ಥರು ಯಗಟಿ ಪೊಲೀಸ್ ಠಾಣೆ ಎದುರು ಜಮಾಯಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಯಗಟಿ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಕ್ರಮ ಬೇಟೆ, ನಿರ್ಲಕ್ಷ್ಯದಿಂದ ಸಂಭವಿಸಿದ ಸಾವು, ಸಾಕ್ಷ್ಯ ನಾಶ ಹಾಗೂ ಮೃತದೇಹವನ್ನು ಅಕ್ರಮವಾಗಿ ಮರೆಮಾಚಿದ ಆರೋಪಗಳ ಕುರಿತು ತನಿಖೆ ಮುಂದುವರಿದಿದೆ. ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಹೆಚ್ಚಿನ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.





