ನವದೆಹಲಿ: ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಹಾಗೂ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ಸೂಚಿಸಿ 26 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದ ಹೋರಾಟಗಾರ ಸೋನಂ ವಾಂಗ್ಚುಕ್, ಕೇಂದ್ರ ಸರ್ಕಾರದಿಂದ ಲಿಖಿತ ಭರವಸೆ ದೊರೆತ ಬಳಿಕ ತಮ್ಮ ಉಪವಾಸವನ್ನು ಅಂತ್ಯಗೊಳಿಸಿದ್ದರು. ಆದರೆ, ಉಪವಾಸವನ್ನು ಅಂತ್ಯಗೊಳಿಸಿದ ರೀತಿಯ ಕುರಿತು ಕೆಲವು ವಲಯಗಳಿಂದ ವ್ಯಕ್ತವಾಗಿರುವ ಟೀಕೆಗಳಿಗೆ ಇದೀಗ ಅವರು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಬಿಡುಗಡೆ ಮಾಡಿರುವ ವಾಂಗ್ಚುಕ್, ತಮ್ಮ ಉಪವಾಸ ನಿಜವೋ ಅಥವಾ ಸುಳ್ಳೋ ಎಂಬುದಕ್ಕೆ ತಾವು ಯಾರಿಗಾದರೂ ಪ್ರಮಾಣಪತ್ರ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಯಾವುದೇ ವೈಯಕ್ತಿಕ ಲಾಭಕ್ಕಾಗಿ ಅಲ್ಲ, ವಿದ್ಯಾರ್ಥಿಗಳ ಹಿತ ಮತ್ತು ಶಾಂತಿಯ ದೃಷ್ಟಿಯಿಂದಲೇ ಉಪವಾಸವನ್ನು ಕೊನೆಗೊಳಿಸಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರತಿಭಟನಾಕಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯ ಬಗ್ಗೆ ತಮಗೆ ಆತಂಕವಿತ್ತು. ದೆಹಲಿಯ ಪರಿಸ್ಥಿತಿ ದಿನದಿಂದ ದಿನಕ್ಕೆ ಉದ್ವಿಗ್ನವಾಗುತ್ತಿದ್ದ ಕಾರಣ, ಹಿಂಸಾಚಾರ ನಡೆಯದಂತೆ ತಡೆಯುವುದು ತಮ್ಮ ಮೊದಲ ಆದ್ಯತೆಯಾಗಿತ್ತು. ಇದೇ ಕಾರಣಕ್ಕೆ ಕೇಂದ್ರ ಸರ್ಕಾರದಿಂದ ಲಿಖಿತ ಭರವಸೆ ಪಡೆದು ನಂತರವೇ ಉಪವಾಸ ಅಂತ್ಯಗೊಳಿಸುವ ನಿರ್ಧಾರ ಕೈಗೊಂಡಿದ್ದೇನೆ ಎಂದು ವಾಂಗ್ಚುಕ್ ತಿಳಿಸಿದ್ದಾರೆ.
ಕೇಂದ್ರ ಸಚಿವರೊಂದಿಗೆ ನಡೆದ ಮಾತುಕತೆಯನ್ನು ಉಲ್ಲೇಖಿಸಿದ ಅವರು, ನಿನ್ನೆ ಮಧ್ಯರಾತ್ರಿ ವೇಳೆಗೆ ಸರ್ಕಾರ ಲಿಖಿತ ಭರವಸೆ ನೀಡಲು ಒಪ್ಪಿಕೊಂಡಿದೆ ಎಂಬ ಮಾಹಿತಿ ನನಗೆ ದೊರಕಿತು. ಆ ಸಂದರ್ಭದಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಡುವ ಭೀತಿ ಇತ್ತು. 2025ರಲ್ಲಿ ಲಡಾಖ್‌ನಲ್ಲಿ ಯುವಕರ ವಿರುದ್ಧ ಪೊಲೀಸರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ನಡೆಸಿದ ಕ್ರಮ ನನಗೆ ನೆನಪಾಯಿತು. ದೆಹಲಿಯಲ್ಲೂ ಅಂತಹ ಘಟನೆ ಮರುಕಳಿಸಬಾರದು ಎಂಬ ಉದ್ದೇಶದಿಂದ ಶಾಂತಿಯ ಹಿತದೃಷ್ಟಿಯಿಂದ ಉಪವಾಸವನ್ನು ಕೊನೆಗೊಳಿಸಿದೆ ಎಂದು ವಿವರಿಸಿದ್ದಾರೆ.
ತಮ್ಮ ವಿರುದ್ಧ ಕೇಳಿಬಂದ ಟೀಕೆಗಳಿಗೆ ಪ್ರತಿಕ್ರಿಯಿಸಿದ ಅವರು, “ಒಪ್ಪಂದ ಮಾಡಿಕೊಳ್ಳುವುದೇ ನನ್ನ ಉದ್ದೇಶವಾಗಿದ್ದರೆ, 26 ದಿನಗಳ ಕಾಲ ದೆಹಲಿಯ ಬಿಸಿಲಿನಲ್ಲಿ ಉಪವಾಸ ಮಾಡುವ ಅಗತ್ಯವೇ ಇರಲಿಲ್ಲ. ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಸುಲಭವಾಗಿ ಮಾತುಕತೆ ನಡೆಸಬಹುದಿತ್ತು. ಆದರೆ ನಾನು ವಿದ್ಯಾರ್ಥಿಗಳ ನ್ಯಾಯಕ್ಕಾಗಿ ಹೋರಾಟ ನಡೆಸಿದ್ದೇನೆ” ಎಂದು ತಿರುಗೇಟು ನೀಡಿದ್ದಾರೆ.
ಇದೇ ವೇಳೆ ತಮ್ಮ ಆಸ್ಪತ್ರೆ ಅನುಭವವನ್ನೂ ಹಂಚಿಕೊಂಡಿರುವ ವಾಂಗ್ಚುಕ್, ಜುಲೈ 18ರಂದು ಸಫ್ದರ್‌ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾದ ನಂತರ ತಮ್ಮನ್ನು ಕೈದಿಯಂತೆ ನಡೆಸಿಕೊಳ್ಳಲಾಯಿತು ಎಂದು ಆರೋಪಿಸಿದ್ದಾರೆ. ಆಸ್ಪತ್ರೆಯಲ್ಲಿ ಮುಕ್ತವಾಗಿ ಓಡಾಡಲು ಅವಕಾಶ ನೀಡಲಿಲ್ಲ. ಭೇಟಿಗೆ ಬಂದವರನ್ನು ಭೇಟಿಯಾಗಲು ನಿರ್ಬಂಧ ಹೇರಲಾಯಿತು. ಮೊಬೈಲ್ ಫೋನ್ ಹಾಗೂ ಲ್ಯಾಪ್‌ಟಾಪ್ ಬಳಸಲು ಕೂಡ ಅವಕಾಶ ನೀಡಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೆಹಲಿ ಹೈಕೋರ್ಟ್ ಆದೇಶದಂತೆ ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸಲು ಅನುಮತಿ ದೊರೆತಿದ್ದರೂ, ಸಫ್ದರ್‌ಜಂಗ್ ಆಸ್ಪತ್ರೆಯಿಂದ ಹೊರಹೋಗುವುದನ್ನು ಹಲವು ಗಂಟೆಗಳ ಕಾಲ ವಿಳಂಬಗೊಳಿಸಲಾಯಿತು ಎಂದು ಅವರು ದೂರಿದ್ದಾರೆ.
ಮೇದಾಂತ ಆಸ್ಪತ್ರೆಯಲ್ಲಿ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ ಮತ್ತು ಜಿತೇಂದ್ರ ಸಿಂಗ್ ತಮ್ಮನ್ನು ಭೇಟಿಯಾಗಿದ್ದು, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಬಳಿಕ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರ ನೀಡುವ ವಿಚಾರವನ್ನು ಸಕಾರಾತ್ಮಕವಾಗಿ ಪರಿಶೀಲಿಸುವುದಾಗಿ ಹಾಗೂ ಪರೀಕ್ಷಾ ವ್ಯವಸ್ಥೆಯಲ್ಲಿನ ಹೊಣೆಗಾರಿಕೆ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ವಾಂಗ್ಚುಕ್ ತಿಳಿಸಿದ್ದಾರೆ.
ಆದರೆ, ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಪ್ರಕರಣ ದಾಖಲಿಸುವುದಿಲ್ಲ ಎಂಬ ಲಿಖಿತ ಭರವಸೆ ನೀಡಲು ಸರ್ಕಾರ ಆರಂಭದಲ್ಲಿ ಹಿಂದೇಟು ಹಾಕಿತ್ತು. ಕೇವಲ ಮೌಖಿಕ ಭರವಸೆ ನೀಡಲಾಗಿತ್ತು. ಅದನ್ನು ತಾವು ಒಪ್ಪದೇ, ಲಿಖಿತ ಭರವಸೆ ಸಿಗುವವರೆಗೂ ತಮ್ಮ ನಿಲುವಿನಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಿಲ್ಲ. ಸರ್ಕಾರ ಅಧಿಕೃತವಾಗಿ ಭರವಸೆ ನೀಡಿದ ನಂತರವೇ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದೇನೆ ಎಂದು ಸೋನಂ ವಾಂಗ್ಚುಕ್ ಸ್ಪಷ್ಟಪಡಿಸಿದ್ದಾರೆ.





