ನವದೆಹಲಿ, ಜುಲೈ 23: ನೀಟ್ (NEET UG) ಪರೀಕ್ಷೆಯಲ್ಲಿನ ಅಕ್ರಮಗಳು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಹೋರಾಟ ನಡೆಸುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಜುಲೈ 24ರಂದು ದೇಶಾದ್ಯಂತ ಬೃಹತ್ ಶಾಂತಿಯುತ ಪ್ರತಿಭಟನೆ ನಡೆಸಲು ಕರೆ ನೀಡಿದೆ.
ಕೇಂದ್ರ ಸರ್ಕಾರ ಹಲವು ಬಾರಿ ಮಾತುಕತೆಗೆ ಆಹ್ವಾನ ನೀಡಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರೂ, ತಮ್ಮ ಬೇಡಿಕೆಗಳು ಈಡೇರುವವರೆಗೆ ಹೋರಾಟ ಮುಂದುವರಿಸುವುದಾಗಿ ಸಿಜೆಪಿ ನಾಯಕರು ಘೋಷಿಸಿದ್ದಾರೆ.
ಸಿಜೆಪಿ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ದೇಶದ ಎಲ್ಲಾ ಪ್ರಮುಖ ನಗರಗಳು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು, ಯುವಜನರು ಮತ್ತು ಸಾರ್ವಜನಿಕರು ಒಂದೇ ದಿನ, ಒಂದೇ ಬೇಡಿಕೆಯೊಂದಿಗೆ ಶಾಂತಿಯುತ ಧರಣಿ, ಪ್ರತಿಭಟನೆ ಹಾಗೂ ಮೆರವಣಿಗೆ ನಡೆಸಲಿದ್ದಾರೆ. ಶಿಕ್ಷಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ನ್ಯಾಯವನ್ನು ಖಚಿತಪಡಿಸಬೇಕೆಂಬುದು ಪ್ರತಿಭಟನೆಯ ಪ್ರಮುಖ ಉದ್ದೇಶವಾಗಿದೆ.
ಸಿಜೆಪಿ ಹೇಳುವಂತೆ, ಇತ್ತೀಚಿನ ದಿನಗಳಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಕೆಲವೆಡೆ ಪೊಲೀಸ್ ಕ್ರಮಗಳು ನಡೆದಿದ್ದು, ಆ ಸಂತ್ರಸ್ತ ವಿದ್ಯಾರ್ಥಿಗಳೊಂದಿಗೆ ಐಕ್ಯತೆ ಪ್ರದರ್ಶಿಸುವ ಉದ್ದೇಶದಿಂದಲೇ ಈ ರಾಷ್ಟ್ರವ್ಯಾಪಿ ಪ್ರತಿಭಟನೆ ಆಯೋಜಿಸಲಾಗಿದೆ. ವಿವಿಧ ವಿದ್ಯಾರ್ಥಿ ಸಂಘಟನೆಗಳು, ಯುವ ಸಂಘಗಳು ಹಾಗೂ ಸಾಮಾಜಿಕ ಸಂಘಟನೆಗಳು ಪರಸ್ಪರ ಸಮನ್ವಯ ಸಾಧಿಸಿ ಪ್ರತಿಭಟನೆ ಯಶಸ್ವಿಗೊಳಿಸಬೇಕೆಂದು ಸಂಘಟನೆ ಮನವಿ ಮಾಡಿದೆ.
ಇದೇ ವೇಳೆ, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಯಾರನ್ನೂ ಬಿಡುವುದಿಲ್ಲ ಎಂದು ಕೇಂದ್ರ ಸರ್ಕಾರ ಈಗಾಗಲೇ ಭರವಸೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ಪ್ರಕರಣಗಳ ತ್ವರಿತ ತನಿಖೆಗಾಗಿ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸುವ ಕುರಿತು ಘೋಷಣೆ ಮಾಡಿದ್ದಾರೆ. ಅಲ್ಲದೆ, ಸರ್ಕಾರವು ಸಿಜೆಪಿ ಪ್ರತಿನಿಧಿಗಳನ್ನು ಮಾತುಕತೆಗೆ ಆಹ್ವಾನಿಸಿದೆ.
ಆದರೆ, ಈ ಆಹ್ವಾನವನ್ನು ಸಿಜೆಪಿ ತಿರಸ್ಕರಿಸಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಹುದ್ದೆಗೆ ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ. ಕೇವಲ ಭರವಸೆಗಳಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಹಾಗೂ ಪರೀಕ್ಷಾ ವ್ಯವಸ್ಥೆಯಲ್ಲಿ ಮೂಲಭೂತ ಸುಧಾರಣೆ ಅಗತ್ಯ ಎಂದು ಸಂಘಟನೆ ಅಭಿಪ್ರಾಯಪಟ್ಟಿದೆ.
ಪ್ರತಿಭಟನಾಕಾರರಿಗೆ ಸಿಜೆಪಿ ನೀಡಿದ ಪ್ರಮುಖ ಸೂಚನೆಗಳು
ಜುಲೈ 24ರ ಪ್ರತಿಭಟನೆ ಸಂಪೂರ್ಣ ಶಾಂತಿಯುತ ಹಾಗೂ ಅಹಿಂಸಾತ್ಮಕವಾಗಿರಬೇಕು ಎಂದು ಸಿಜೆಪಿ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಯಾವುದೇ ರೀತಿಯ ಹಿಂಸಾಚಾರ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಅಥವಾ ಪ್ರಚೋದನಕಾರಿ ವರ್ತನೆಗೆ ಅವಕಾಶ ನೀಡಬಾರದು ಎಂದು ತಿಳಿಸಿದೆ.
ಪ್ರತಿಭಟನೆಯ ವೇಳೆ “ಜೈ ಹಿಂದ್”, “ಭಾರತ ಮಾತಾ ಕಿ ಜೈ”, “ಇಂಕಿಲಾಬ್ ಜಿಂದಾಬಾದ್”, “ಜೈ ಭೀಮ್” ಮೊದಲಾದ ಸಕಾರಾತ್ಮಕ ಘೋಷಣೆಗಳನ್ನು ಮಾತ್ರ ಕೂಗುವಂತೆ ಸೂಚಿಸಲಾಗಿದೆ. ಪ್ರತಿಭಟನೆಯ ಪ್ರತಿಯೊಂದು ಘಟನೆ ಹಾಗೂ ಬೆಳವಣಿಗೆಯನ್ನು ಮೊಬೈಲ್‌ನಲ್ಲಿ ದಾಖಲಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ.
ನಿಗದಿಪಡಿಸಿದ ಮಾರ್ಗ ಹಾಗೂ ಸ್ಥಳಗಳಲ್ಲಿ ಮಾತ್ರ ಮೆರವಣಿಗೆ ನಡೆಸಬೇಕು. ಯಾವುದೇ ರೀತಿಯ ನಿಂದನೀಯ, ಕೋಮು ದ್ವೇಷ ಹುಟ್ಟುಹಾಕುವ ಅಥವಾ ಪ್ರಚೋದನಕಾರಿ ಭಾಷೆ ಬಳಸಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
ಯಾರೂ ಲಾಠಿ, ಕೋಲು ಅಥವಾ ಯಾವುದೇ ರೀತಿಯ ಆಯುಧಗಳನ್ನು ತರಬಾರದು. ಪ್ರತಿಭಟನಾಕಾರರು ಸಣ್ಣ ಗುಂಪುಗಳಲ್ಲಿ ಚಲಿಸುವಂತೆ ಹಾಗೂ ಪರಸ್ಪರ ಸಂಪರ್ಕದಲ್ಲಿರುವಂತೆ ಸೂಚಿಸಲಾಗಿದೆ.
ಸಾರ್ವಜನಿಕ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಪ್ರತಿಭಟನೆ ನಡೆಸಬೇಕು. ಪರಿಶೀಲಿಸದ ಮಾಹಿತಿ ಅಥವಾ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಬಾರದು ಎಂದು ಸಂಘಟನೆ ಮನವಿ ಮಾಡಿದೆ.
ಸುರಕ್ಷತೆಯ ದೃಷ್ಟಿಯಿಂದ ಪ್ರತಿಭಟನಾಕಾರರು ತಮ್ಮ ಕೈಯಲ್ಲಿ ಅಥವಾ ಜೇಬಿನಲ್ಲಿರುವ ಕಾರ್ಡ್‌ನಲ್ಲಿ ವಕೀಲರ ಅಥವಾ ಕಾನೂನು ವಿದ್ಯಾರ್ಥಿಯ ಸಂಪರ್ಕ ಸಂಖ್ಯೆ ಹಾಗೂ ತುರ್ತು ಸಂಪರ್ಕ ಸಂಖ್ಯೆಯನ್ನು ಬರೆದಿಟ್ಟುಕೊಳ್ಳುವಂತೆ ಸೂಚಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ಇದು ನೆರವಾಗಲಿದೆ ಎಂದು ಸಂಘಟನೆ ತಿಳಿಸಿದೆ.
ಹಿಂಸಾಚಾರಕ್ಕೆ ಪ್ರಚೋದಿಸುವ ಕಿಡಿಗೇಡಿಗಳ ಬಗ್ಗೆ ಎಚ್ಚರದಿಂದಿರಬೇಕು. ಯಾರಾದರೂ ಗಲಾಟೆ ಸೃಷ್ಟಿಸಲು ಪ್ರಯತ್ನಿಸಿದರೆ ಪ್ರತಿಕ್ರಿಯಿಸುವ ಬದಲು ಪ್ರತಿಭಟನೆಯ ಮಾರ್ಷಲ್‌ಗಳು ಅಥವಾ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಲಾಗಿದೆ.





