ಚಿಕ್ಕಬಳ್ಳಾಪುರ: ರಾಜ್ಯವನ್ನು ಬೆಚ್ಚಿಬೀಳಿಸುವಂತಹ ಅಮಾನವೀಯ ಘಟನೆ ಚಿಕ್ಕಬಳ್ಳಾಪುರದಲ್ಲಿ ಬೆಳಕಿಗೆ ಬಂದಿದೆ. ಎರಡನೇ ಬಾರಿಯೂ ಹೆಣ್ಣು ಮಗು ಜನಿಸಿದ್ದರಿಂದ ಅಸಮಾಧಾನಗೊಂಡ ತಂದೆಯೊಬ್ಬ, ಕೇವಲ 13 ದಿನದ ಹಸುಗೂಸನ್ನು ಮನೆಯ ನೀರಿನ ಸಂಪ್‌ಗೆ ಎಸೆದು ಹತ್ಯೆ ಮಾಡಿದದ್ದಾನೆ. ಈ ಸಂಬಂಧ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಈ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.
ಈ ದುರ್ಘಟನೆ ಚಿಕ್ಕಬಳ್ಳಾಪುರ ನಗರದ ಶಾಂತಿನಗರ ಪ್ರದೇಶದಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಇಮ್ರಾನ್ ಎಂದು ಗುರುತಿಸಲಾಗಿದೆ. ಮಗುವಿನ ತಾಯಿ ಮುಸ್ಕಾನ್ ನೀಡಿದ ದೂರಿನ ಆಧಾರದ ಮೇಲೆ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ದಂಪತಿಗೆ ಈಗಾಗಲೇ ಒಂದು ಹೆಣ್ಣು ಮಗು ಇತ್ತು. ಇತ್ತೀಚೆಗೆ ಎರಡನೇ ಬಾರಿಯೂ ಹೆಣ್ಣು ಮಗು ಜನಿಸಿದ್ದು, ಇದರಿಂದ ಅಸಮಾಧಾನಗೊಂಡ ಆರೋಪಿಯು ಈ ಕೃತ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಜನಿಸಿದ ಕೇವಲ 13 ದಿನಗಳಲ್ಲೇ ಹಸುಗೂಸನ್ನು ಮನೆಯ ನೀರಿನ ಸಂಪ್‌ಗೆ ಎಸೆದಿದ್ದಾನೆ.
ಘಟನೆ ಬೆಳಕಿಗೆ ಬಂದ ಬಳಿಕ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನವಜಾತ ಶಿಶುವಿನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮಗುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ವೈದ್ಯಕೀಯ ವರದಿ ಹಾಗೂ ಇತರ ಸಾಕ್ಷ್ಯಾಧಾರಗಳನ್ನು ಆಧರಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಗುವಿನ ತಾಯಿ ನೀಡಿದ ದೂರಿನಲ್ಲಿ, ತನ್ನ ಪತಿ ಎರಡನೇ ಹೆಣ್ಣು ಮಗು ಜನಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದ ಎಂದು ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಆರೋಪಿಯ ಹೇಳಿಕೆ, ಕುಟುಂಬ ಸದಸ್ಯರ ವಿಚಾರಣೆ ಹಾಗೂ ಸ್ಥಳದಲ್ಲಿನ ಸಾಕ್ಷ್ಯಗಳನ್ನು ಪರಿಶೀಲಿಸಲಾಗುತ್ತಿದೆ.





