ಬೆಂಗಳೂರು/ತಿರುಪತಿ: ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ (ತಿಮ್ಮಪ್ಪ) ದೇವಾಲಯದಲ್ಲಿ ನಡೆಯುವ ಮೊದಲ ಆರತಿ ಗೌರವ ಕುರಿತಾಗಿ ಹೊಸ ವಿವಾದಕ್ಕೆ ನಾಂದಿ ಹಾಡಲಾಗಿದೆ. ಮೊದಲ ಆರತಿ ಗೌರವವನ್ನು ಕರ್ನಾಟಕದ ಜನಪ್ರತಿನಿಧಿಗಳಿಗೂ ವಿಸ್ತರಿಸಲಾಗುವುದು ಎಂಬ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ತಿರುಮಲ ತಿರುಪತಿ ದೇವಸ್ಥಾನ (TTD) ಸದಸ್ಯ ಭಾನು ಪ್ರಕಾಶ್ ರೆಡ್ಡಿ ಸ್ಪಷ್ಟ ತಿರುಗೇಟು ನೀಡಿದ್ದಾರೆ.
ಕೆಲ ದಿನಗಳ ಹಿಂದೆ ಡಿ.ಕೆ. ಶಿವಕುಮಾರ್ ಅವರು, ಕರ್ನಾಟಕದ ಪರವಾಗಿ ತಿರುಪತಿಯಲ್ಲಿ ನಡೆಯುವ ಮೊದಲ ಆರತಿಯಲ್ಲಿ ಮುಖ್ಯಮಂತ್ರಿ ಭಾಗವಹಿಸುವ ಅವಕಾಶ ಇರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಲ್ಲದೆ, ಮುಖ್ಯಮಂತ್ರಿ ಜೊತೆಗೆ ರಾಜ್ಯದ ಸಚಿವರು, ಶಾಸಕರು ಹಾಗೂ ನ್ಯಾಯಮೂರ್ತಿಗಳಿಗೂ ಈ ಗೌರವದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಬೇಕು ಎಂಬ ಆಶಯವನ್ನೂ ವ್ಯಕ್ತಪಡಿಸಿದ್ದರು.
ಈ ಹೇಳಿಕೆ ಚರ್ಚೆಗೆ ಕಾರಣವಾಗುತ್ತಿದ್ದಂತೆ ಟಿಟಿಡಿ ಸದಸ್ಯ ಭಾನು ಪ್ರಕಾಶ್ ರೆಡ್ಡಿ ಮಾಧ್ಯಮಗಳೊಂದಿಗೆ ಮಾತನಾಡಿ, “ತಿರುಪತಿ ಶ್ರೀನಿವಾಸನ ಮೊದಲ ಆರತಿ ಗೌರವವು ಎಂದೆಂದಿಗೂ ಮೈಸೂರು ರಾಜವಂಶಸ್ಥರಿಗೇ ಮೀಸಲಾಗಿದ್ದು, ಅದರಲ್ಲಿ ಯಾವುದೇ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ” ಎಂದು ಸ್ಪಷ್ಟಪಡಿಸಿದರು.
ಯದುವಂಶಕ್ಕೆ ಸೇರಿದ ಮೈಸೂರು ರಾಜವಂಶಸ್ಥರಿಗೆ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ಮನೆದೇವರಾಗಿದ್ದಾರೆ. ವಿಶೇಷವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತಾವಧಿಯಲ್ಲಿ ತಿರುಪತಿ ದೇವಸ್ಥಾನಕ್ಕೆ ಅಪಾರ ಪ್ರಮಾಣದ ದೇಣಿಗೆ, ಆಭರಣಗಳು ಹಾಗೂ ವಿವಿಧ ರೀತಿಯ ಸೇವೆಗಳನ್ನು ಸಲ್ಲಿಸಲಾಗಿತ್ತು. ಈ ಐತಿಹಾಸಿಕ ಕೊಡುಗೆಯನ್ನು ಗೌರವಿಸುವ ಉದ್ದೇಶದಿಂದಲೇ ಮೊದಲ ಆರತಿ ಗೌರವವನ್ನು ಮೈಸೂರು ರಾಜವಂಶಸ್ಥರಿಗೆ ಮೀಸಲಿಡಲಾಗಿದೆ ಎಂದು ಅವರು ವಿವರಿಸಿದರು.
ಭಾನು ಪ್ರಕಾಶ್ ರೆಡ್ಡಿ ಅವರು, “ಇದು ಯಾವುದೇ ರಾಜಕೀಯ ಹುದ್ದೆಗೆ ನೀಡುವ ಗೌರವವಲ್ಲ. ಇದು ಮೈಸೂರು ರಾಜವಂಶದ ಐತಿಹಾಸಿಕ ಕೊಡುಗೆಯನ್ನು ಸ್ಮರಿಸುವ ಧಾರ್ಮಿಕ ಸಂಪ್ರದಾಯ. ಆದ್ದರಿಂದ ಮುಖ್ಯಮಂತ್ರಿ, ಸಚಿವರು, ಶಾಸಕರು ಅಥವಾ ಯಾವುದೇ ರಾಜಕೀಯ ಹುದ್ದೆಯಲ್ಲಿರುವವರಿಗೆ ಈ ಗೌರವ ನೀಡಲು ಅವಕಾಶವಿಲ್ಲ” ಎಂದು ಹೇಳಿದರು.
ಇದೇ ವೇಳೆ, ತಿರುಪತಿ ದೇವಸ್ಥಾನವು ಎಲ್ಲ ಭಕ್ತರಿಗೂ ಸಮಾನವಾಗಿದ್ದು, ಧಾರ್ಮಿಕ ಆಚರಣೆಗಳನ್ನು ರಾಜಕೀಯ ದೃಷ್ಟಿಕೋನದಿಂದ ನೋಡುವುದು ಸೂಕ್ತವಲ್ಲ ಎಂದೂ ಅವರು ಅಭಿಪ್ರಾಯಪಟ್ಟರು. “ತಿರುಪತಿ ಧಾರ್ಮಿಕ ಕ್ಷೇತ್ರ. ಇಲ್ಲಿ ರಾಜಕೀಯ ಪ್ರವೇಶಿಸಬಾರದು. ಒಂದು ರಾಜ್ಯಕ್ಕೆ ವಿಶೇಷ ಅವಕಾಶ ನೀಡಿದರೆ, ನಾಳೆ ತಮಿಳುನಾಡು, ಕೇರಳ ಸೇರಿದಂತೆ ಇತರೆ ರಾಜ್ಯಗಳೂ ಇದೇ ರೀತಿಯ ಬೇಡಿಕೆ ಮುಂದಿಡಬಹುದು. ಇದರಿಂದ ಅನಗತ್ಯ ವಿವಾದಗಳು ಸೃಷ್ಟಿಯಾಗುವ ಸಾಧ್ಯತೆ ಇದೆ” ಎಂದು ಎಚ್ಚರಿಸಿದರು.
ಈ ಹಿನ್ನೆಲೆಯಲ್ಲಿ, ಮೊದಲ ಆರತಿ ಗೌರವ ಕುರಿತಾಗಿ ಯಾವುದೇ ಹೊಸ ಪ್ರಸ್ತಾಪ ಬಂದರೂ ಅದನ್ನು ಟಿಟಿಡಿ ಸಭೆಯಲ್ಲಿ ಚರ್ಚಿಸಿ ತಿರಸ್ಕರಿಸುವ ನಿರ್ಣಯ ಕೈಗೊಳ್ಳಲಾಗುವುದು ಎಂದು ಭಾನು ಪ್ರಕಾಶ್ ರೆಡ್ಡಿ ತಿಳಿಸಿದ್ದಾರೆ.





