ನವದೆಹಲಿ ಜುಲೈ(13): ಬಿಡದಿಯಲ್ಲಿನ ಮಂಡಹಳ್ಳಿ ಗ್ರಾಮದ ರೈತರ ಆಕ್ರೋಶಕ್ಕೆ ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆಯೇ ಕಾರಣ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.
ರಾಜ್ಯ ಸರ್ಕಾರದ ಚಿತಾವಣೆಯಿಂದ ಬಿಡದಿ ಟೌನ್‌ಶಿಪ್‌ಗೆ ಜೆಎಂಸಿ ಸರ್ವೆ ನಡೆಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಬಂದಿದ್ದಾರೆ. ಅವರ ವಿರುದ್ಧ ರೈತ ಮಹಿಳೆಯರು ಸಹಜವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಸಚಿವರು ಹೇಳಿದ್ದಾರೆ
ಬಿಡದಿಯ ಮಂಡಲಹಳ್ಳಿ ಗ್ರಾಮದಲ್ಲಿ ಜಿಬಿಡಿಎ ಅಧಿಕಾರಿಗಳು ಜೆಎಂಸಿ ಸರ್ವೆಗೆ ಮುಂದಾದ ಸಂದರ್ಭದಲ್ಲಿ ವಿರುದ್ಧ ರೈತರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದು, ರೈತರಿಗೆ ಕೇಂದ್ರ ಸಚಿವರು ಬೆಂಬಲ ವ್ಯಕ್ತಪಡಿಸಿದ್ದಾರೆ.
ತಮ್ಮ ಭೂಮಿಗಳನ್ನು ಸರ್ವೇ ಮಾಡಲು ಬಂದ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಮೇಲೆ ಪೊಲೀಸರು ದಬ್ಬಾಳಿಕೆ ನಡೆಸಿದ ವಿಷಯ ತಿಳಿಯುತ್ತಿದ್ದಂತೆ ಪಶ್ಚಿಮ ಬಂಗಾಳದಲ್ಲಿ ಅಧಿಕೃತ ಪ್ರವಾಸದಲ್ಲಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಈ ಬಗ್ಗೆ ವಿಡಿಯೋ ಸಂದೇಶ ನೀಡಿ ಪ್ರತಿಕ್ರಿಯಿಸಿದ್ದಾರೆ.
ಭೂಮಿ ಕಳೆದುಕೊಳ್ಳುತ್ತಿರುವ ಭೀತಿಯಲ್ಲಿರುವ ರೈತರು ಸುಮಾರು 500 ದಿನಗಳಿಂದ ಬಿಡದಿಯಲ್ಲಿ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದರು. ಏಕಾಏಕಿಯಾಗಿ ಅಧಿಕಾರಿಗಳು ಸರ್ವೆ ಮಾಡಲು ಬಂದಿರುವುದು ಸರಿಯಲ್ಲ. ಈ ವೇಳೆ ಸಹಜವಾಗಿಯೇ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸರ್ಕಾರದ ಬೇಜವಾಬ್ದಾರಿ ಮತ್ತು ಚಿತಾವಣೆಯೇ ಕಾರಣ ಎಂದು ದೂರಿದ್ದಾರೆ.
ಈ ಸಂದರ್ಭದಲ್ಲಿ ರೈತರಿಗೆ ಮನವಿ ಮಾಡಿದ ಕೇಂದ್ರ ಸಚಿವರು, ಕೆಟ್ಟ ಘಟನೆಗಳಿಗೆ ಅವಕಾಶ ಕೊಡಬೇಡಿ ಎಂದು ರೈತರಿಗೆ ಮನವಿ ಮಾಡುತ್ತೇನೆ. ಶಾಂತಿಯುತ ಹೋರಾಟ ಮುಂದುವರೆಸಿ. ಕಾನೂನು ಪರವಾಗಿ ನಿಮ್ಮ ಪರ ಹೋರಾಟ ಮಾಡುವುದಕ್ಕೆ ಅನೇಕರು ನಿಮ್ಮ ಪರ ದನಿ ಎತ್ತಿದ್ದಾರೆ ಎಂದು ಹೇಳಿದ್ದಾರೆ.
ರೈತ ಮಹಿಳೆಯರ ಮೇಲೆ ಪೊಲೀಸರು ನಡೆಸಿರುವ ದೌರ್ಜನರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸಚಿವರು, ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ನಾನು ಎಚ್ಚರಿಕೆ ಕೊಡುತ್ತಿದ್ದೇನೆ. ಶಾಂತಿಯುತವಾಗಿ ನಡೆಯುತ್ತಿರುವ ಹೋರಾಟಕ್ಕೆ ಸರ್ಕಾರ ನಿಮ್ಮನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ನೀವು ಯಾವುದೇ ಕಾರಣಕ್ಕೆ ಸರ್ಕಾರದ ದರ್ಪಕ್ಕೆ ಹೆದರಿ ರೈತ ವಿರೋಧಿ ನೀತಿ ಅನುಸರಿಸಬೇಡಿ. ಒಂದು ವೇಳೆ ಹಾಗೆ ಮಾಡಿದರೆ ಸರ್ಕಾರದ ಕೆಟ್ಟ ನಡವಳಿಕೆಯ ಪಾಲು ನಿಮಗೂ ಹಂಚಿಕೊಳ್ಳುವ ದಿನ ಬರುತ್ತದೆ. ಹೀಗಾಗಿ ಪೊಲೀಸರು ಎಚ್ಚರಿಕೆಯಿಂದ ಇರಬೇಕು ಎಂದು ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ಈ ರೀತಿಯಲ್ಲಿ ಮೃಗೀಯವಾಗಿ ವರ್ತಿಸಬಾರದಿತ್ತು ಎಂದು ಹೇಳಿರುವ ಕೇಂದ್ರ ಸಚಿವರು; ಸರ್ಕಾರದ ಆದೇಶದ ಮೇರೆಗೆ ಅಧಿಕಾರಿಗಳು ಸರ್ವೇ ಮಾಡಲು ಬಂದಿದ್ದಾರೆ. ಪರಂಪರಾಗತವಾಗಿ ತಲೆತಲಾಂತರ ಗಳಿಂದ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಕುಟುಂಬಗಳ ಜಮೀನನ್ನು ಕಿತ್ತುಕೊಳ್ಳಲು ಬಂದರೆ ರೈತರು ಸುಮ್ಮನಿರಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.





