ಹೈದರಾಬಾದ್: ತಮಿಳು ಚಿತ್ರರಂಗದ ಖ್ಯಾತ ನಟ ಆರ್ಯ ಅವರು ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದು, ಅವರ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಚಿತ್ರೀಕರಣದ ಕ್ಯಾಮೆರಾ ಮತ್ತು ಇತರ ಸಲಕರಣೆಗಳನ್ನು ಬಾಡಿಗೆಗೆ ನೀಡುವ ಸಂಸ್ಥೆಯೊಂದು ಹೈದರಾಬಾದ್ನ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ನಟ ಆರ್ಯ, ನಿರ್ಮಾಪಕ ವಿನೋದ್ ಮತ್ತು ಚಿತ್ರತಂಡದ ಇತರರ ವಿರುದ್ಧ ವಂಚನೆ ಮತ್ತು ಬೆದರಿಕೆ ಆರೋಪದ ದೂರು ದಾಖಲಿಸಿದೆ.
‘ಅನಂತನ್ ಕಾಡು’ (Ananthan Kaadu) ಚಿತ್ರದ ಚಿತ್ರೀಕರಣಕ್ಕಾಗಿ ಬಳಸಿದ ಸಲಕರಣೆಗಳ ಬಾಡಿಗೆ ಮೊತ್ತ 1.80 ಕೋಟಿ ರೂಪಾಯಿಗಿಂತ ಅಧಿಕ ಹಣವನ್ನು ಪಾವತಿಸದೆ ವಂಚಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ‘ಅನಂತನ್ ಕಾಡು’ ಚಿತ್ರದ ತಯಾರಕರು ಹೈದರಾಬಾದ್ ಮೂಲದ ಸಲಕರಣೆ ಬಾಡಿಗೆ ಸಂಸ್ಥೆಯಿಂದ ಪ್ರೀಮಿಯಂ ಡಿಜಿಟಲ್ ಕ್ಯಾಮೆರಾಗಳು, ಲೈಟಿಂಗ್ ಯೂನಿಟ್ಗಳು ಮತ್ತು ಇತರ ಚಿತ್ರೀಕರಣದ ಪರಿಕರಗಳನ್ನು ಬಾಡಿಗೆಗೆ ಪಡೆದುಕೊಂಡಿದ್ದರು. ಯಾವುದೇ ವಿಳಂಬವಿಲ್ಲದೆ ಬಾಡಿಗೆ ಹಣವನ್ನು ಚುಕ್ತಾ ಮಾಡಲಾಗುವುದು ಎಂದು ಚಿತ್ರತಂಡವು ಭರವಸೆ ನೀಡಿತ್ತು ಎಂದು ದೂರುದಾರರು ತಿಳಿಸಿದ್ದಾರೆ. ಸಲಕರಣೆಗಳನ್ನು ಪೂರೈಸುವುದರ ಜೊತೆಗೆ, ಸಂಸ್ಥೆಯು ಹೈದರಾಬಾದ್ನಿಂದ ಕೇರಳಕ್ಕೆ ಅವುಗಳನ್ನು ಸಾಗಿಸುವ ವ್ಯವಸ್ಥೆಯನ್ನೂ ಮಾಡಿತ್ತು. ಅಲ್ಲದೇ, ಇಡೀ ಚಿತ್ರೀಕರಣದ ಅವಧಿಯಲ್ಲಿ ತಾಂತ್ರಿಕ ಬೆಂಬಲವನ್ನು ಸಹ ನೀಡಿತ್ತು.
ಆದರೆ, ಚಿತ್ರೀಕರಣ ಮುಗಿದ ನಂತರ ಚಿತ್ರತಂಡವು ದೊಡ್ಡ ಮೊತ್ತದ ಹಣವನ್ನು ಬಾಕಿ ಉಳಿಸಿಕೊಂಡಿದೆ. ಒಟ್ಟು ಬಿಲ್ 2.12 ಕೋಟಿ ರೂಪಾಯಿಗಳಷ್ಟಿದ್ದು, ಅದರಲ್ಲಿ ಕೇವಲ ಒಂದು ಸಣ್ಣ ಭಾಗವನ್ನು ಮಾತ್ರ ಪಾವತಿಸಲಾಗಿದೆ. ಇನ್ನು 1.80 ಕೋಟಿ ರೂಪಾಯಿಗಿಂತ ಅಧಿಕ ಹಣ ಬಾಕಿ ಉಳಿದಿದೆ ಎಂದು ಸಂಸ್ಥೆ ಆರೋಪಿಸಿದೆ. ಈ ಬಾಕಿ ಹಣದ ಕುರಿತು ಚಿತ್ರದ ನಿರ್ಮಾಪಕರು ಲಿಖಿತವಾಗಿಯೂ ಒಪ್ಪಿಕೊಂಡಿದ್ದು, ಚಿತ್ರವು ಥಿಯೇಟರ್ಗಳಲ್ಲಿ ಬಿಡುಗಡೆಯಾಗುವ ಮುನ್ನ ಬಾಕಿಯನ್ನು ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದ್ದರು.
ಆರ್ಯ ವಿರುದ್ಧ ಬೆದರಿಕೆ ಆರೋಪ
ಹಲವು ಬಾರಿ ಪತ್ರಗಳು, ಫೋನ್ ಕರೆಗಳು ಮತ್ತು ವಾಟ್ಸಾಪ್ ಸಂದೇಶಗಳ ಮೂಲಕ ನೆನಪಿಸಿದರೂ ಭರವಸೆ ನೀಡಿದ ಹಣ ಪಾವತಿಯಾಗಿಲ್ಲ ಎಂದು ಬಾಡಿಗೆ ಸಂಸ್ಥೆ ಹೇಳಿದೆ. ಅಷ್ಟೇ ಅಲ್ಲದೆ, ಸಂಸ್ಥೆಯ ಮ್ಯಾನೇಜರ್ ಬಾಕಿ ಹಣವನ್ನು ಕೇಳಲು ಚಿತ್ರತಂಡವನ್ನು ಸಂಪರ್ಕಿಸಿದಾಗ, ನಟ ಆರ್ಯ, ನಿರ್ಮಾಪಕ ವಿನೋದ್ ಮತ್ತು ಅವರ ವೈಯಕ್ತಿಕ ಸಹಾಯಕರು ಸೇರಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರಿನ ಪ್ರಕಾರ, ಬಾಡಿಗೆ ಹಣ ಕೇಳಿದಾಗಲೆಲ್ಲಾ ಅವರನ್ನು ಬೆದರಿಸಿ ಅವಮಾನಿಸಲಾಗಿದೆ. ಇದರಿಂದ ಸಂಸ್ಥೆಯು ಮನನೊಂದಿದ್ದು, ತಮ್ಮ ಬಾಕಿಯನ್ನು ಇತ್ಯರ್ಥಪಡಿಸದಿದ್ದರೆ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಎಚ್ಚರಿಸಿದ್ದರು. ಆದರೂ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಜುಬಿಲಿ ಹಿಲ್ಸ್ ಪೊಲೀಸರನ್ನು ಸಂಪರ್ಕಿಸಿ ಅಧಿಕೃತ ದೂರು ದಾಖಲಿಸಿದ್ದಾರೆ.
ಪೊಲೀಸ್ ತನಿಖೆ ಆರಂಭ
ದೂರಿನ ಆಧಾರದ ಮೇಲೆ ಜುಬಿಲಿ ಹಿಲ್ಸ್ ಪೊಲೀಸರು IPC ಸೆಕ್ಷನ್ 420 (ವಂಚನೆ) ಮತ್ತು ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) ಸೇರಿದಂತೆ ಸಂಬಂಧಿತ ಕಾಯ್ದೆಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಪ್ರಸ್ತುತ ಬಾಡಿಗೆ ಸಂಸ್ಥೆಯು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಶೀಘ್ರದಲ್ಲೇ ದೂರಿನಲ್ಲಿ ಹೆಸರಿಸಲಾದವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಈ ಆರೋಪಗಳ ಕುರಿತು ನಟ ಆರ್ಯ ಅಥವಾ ‘ಅನಂತನ್ ಕಾಡು’ ಚಿತ್ರತಂಡವು ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.





