ಮಿಯಾಮಿ ನಗರದಲ್ಲಿ ನಡೆದ ಫಿಫಾ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ನಾರ್ವೆ ವಿರುದ್ಧ 2-1 ಗೋಲುಗಳ ಅಂತರದಿಂದ ರೋಚಕ ಜಯ ಸಾಧಿಸಿ ಸೆಮಿಫೈನಲ್‌ಗೆ ಭರ್ಜರಿ ಎಂಟ್ರಿ ನೀಡಿದೆ.
ಕೊನೆಯ ಕ್ಷಣದವರೆಗೂ ಕುತೂಹಲ ಕೆರಳಿಸಿದ ಈ ಪಂದ್ಯದಲ್ಲಿ ಜೂಡ್ ಬೆಲ್ಲಿಂಗ್‌ಹ್ಯಾಮ್ ಅವರ ಅದ್ಭುತ ಪ್ರದರ್ಶನ ಇಂಗ್ಲೆಂಡ್ ಗೆಲುವಿನ ಪ್ರಮುಖ ಕಾರಣವಾಯಿತು. ಈ ಸೋಲಿನೊಂದಿಗೆ ನಾರ್ವೆಯ ವಿಶ್ವಕಪ್ ಟ್ರೋಫಿ ಗೆಲ್ಲುವ ಕನಸು ಭಗ್ನಗೊಂಡಿದ್ದು, ಟೂರ್ನಿಯಿಂದ ಹೊರಬಿದ್ದಿದೆ. ಇದೀಗ ನಾರ್ವೆ ಮತ್ತು ಹಾಲೆಂಡ್ ಅವರ ವಿಶ್ವಕಪ್ ಟ್ರೋಫಿ ಕನಸಿನ ಓಟ ಇಲ್ಲಿಗೆ ಕೊನೆಗೊಂಡಿದೆ.
ಪಂದ್ಯದ ಆರಂಭದಿಂದಲೇ ಎರಡೂ ತಂಡಗಳು ಆಕ್ರಮಣಕಾರಿ ಆಟಕ್ಕೆ ಮೊರೆ ಹೋದವು. ಮೊದಲಾರ್ಧದಲ್ಲಿ ನಾರ್ವೆ ತಂಡವೇ ಹೆಚ್ಚು ಪ್ರಾಬಲ್ಯ ಸಾಧಿಸಿತು. ಅದರ ಫಲವಾಗಿ 36ನೇ ನಿಮಿಷದಲ್ಲಿ ಶೆಲ್ಡೆರಪ್ ಸುಂದರ ಗೋಲು ದಾಖಲಿಸಿ ನಾರ್ವೆಗೆ 1-0 ಮುನ್ನಡೆ ತಂದುಕೊಟ್ಟರು. ಈ ಗೋಲಿನ ಬಳಿಕ ನಾರ್ವೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.
ಆದರೆ ಇಂಗ್ಲೆಂಡ್ ಹೆಚ್ಚು ಸಮಯ ಹಿನ್ನಡೆಯಲ್ಲಿರಲಿಲ್ಲ. ಕೇವಲ 11 ನಿಮಿಷಗಳಲ್ಲೇ ಜೂಡ್ ಬೆಲ್ಲಿಂಗ್‌ಹ್ಯಾಮ್ ಅದ್ಭುತ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ತಂಡಕ್ಕೆ ಸಮಬಲ ತಂದುಕೊಟ್ಟರು. ಇದರೊಂದಿಗೆ ಮೊದಲಾರ್ಧ 1-1 ಸಮಬಲದೊಂದಿಗೆ ಅಂತ್ಯಗೊಂಡಿತು.
ದ್ವಿತೀಯಾರ್ಧದಲ್ಲಿ ನಾರ್ವೆ ಹಲವು ಬಾರಿ ಗೋಲು ಗಳಿಸುವ ಅವಕಾಶಗಳನ್ನು ಸೃಷ್ಟಿಸಿದರೂ, ಇಂಗ್ಲೆಂಡ್ ರಕ್ಷಣಾ ವಿಭಾಗದ ಶಿಸ್ತುಬದ್ಧ ಆಟ ಮತ್ತು ಗೋಲ್‌ಕೀಪರ್‌ನ ಉತ್ತಮ ಪ್ರದರ್ಶನದಿಂದ ಯಾವುದೇ ಪ್ರಯತ್ನ ಯಶಸ್ವಿಯಾಗಲಿಲ್ಲ. ಮತ್ತೊಂದೆಡೆ ಇಂಗ್ಲೆಂಡ್ ಕೂಡ ಕೆಲವು ಅವಕಾಶಗಳನ್ನು ನಿರ್ಮಿಸಿದರೂ ನಿರ್ಣಾಯಕ ಗೋಲು ಸಿಗಲಿಲ್ಲ. ಹೀಗಾಗಿ ನಿಯಮಿತ ಅವಧಿ 1-1 ಸಮಬಲದಲ್ಲೇ ಮುಕ್ತಾಯಗೊಂಡು ಪಂದ್ಯ ಹೆಚ್ಚುವರಿ ಸಮಯಕ್ಕೆ ಸಾಗಿತು.
ಹೆಚ್ಚುವರಿ ಸಮಯದ ಆರಂಭದಲ್ಲೇ ಮತ್ತೊಮ್ಮೆ ಬೆಲ್ಲಿಂಗ್‌ಹ್ಯಾಮ್ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದರು. 93ನೇ ನಿಮಿಷದಲ್ಲಿ ಅವರು ಗಳಿಸಿದ ಗೋಲು ಇಂಗ್ಲೆಂಡ್‌ಗೆ 2-1 ಮುನ್ನಡೆ ತಂದುಕೊಟ್ಟಿತು. ಬಳಿಕ ಉಳಿದ ಸಮಯದಲ್ಲಿ ನಾರ್ವೆ ಸಮಬಲ ಸಾಧಿಸಲು ಸಾಕಷ್ಟು ಪ್ರಯತ್ನಪಟ್ಟರೂ ಇಂಗ್ಲೆಂಡ್ ರಕ್ಷಣಾ ಪಡೆ ಯಾವುದೇ ಅವಕಾಶ ನೀಡಲಿಲ್ಲ.
ಅಂತಿಮವಾಗಿ 2-1 ಅಂತರದಿಂದ ಜಯ ಸಾಧಿಸಿದ ಇಂಗ್ಲೆಂಡ್, 2018ರ ಬಳಿಕ ಮೊದಲ ಬಾರಿಗೆ ಫಿಫಾ ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸುವ ಸಾಧನೆ ಮಾಡಿತು. ಈ ಗೆಲುವಿನೊಂದಿಗೆ ತಂಡದ ಪ್ರಶಸ್ತಿ ಕನಸು ಮತ್ತಷ್ಟು ಬಲಗೊಂಡಿದೆ.
ಇದೀಗ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವು ಅರ್ಜೆಂಟೀನಾ ಮತ್ತು ಸ್ವಿಟ್ಜರ್ಲೆಂಡ್ ನಡುವಿನ ಕ್ವಾರ್ಟರ್ ಫೈನಲ್ ಪಂದ್ಯದ ವಿಜೇತರನ್ನು ಎದುರಿಸಲಿದೆ. ಜೂಡ್ ಬೆಲ್ಲಿಂಗ್‌ಹ್ಯಾಮ್ ಅವರ ಫಾರ್ಮ್ ಮುಂದುವರಿದರೆ ಇಂಗ್ಲೆಂಡ್ ಪ್ರಶಸ್ತಿ ರೇಸ್‌ನಲ್ಲಿ ಮತ್ತಷ್ಟು ಬಲಿಷ್ಠ ಸ್ಪರ್ಧಿಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ.





