ಡಿ ಬಾಸ್ ದರ್ಶನ್ ಸದ್ಯ ಒಂದು ವರ್ಷ ಜೈಲಿಂದ ಹೊರಗೆ ಬರೋ ಯಾವುದೇ ಲಕ್ಷಣ ಕಾಣ್ತಿಲ್ಲ. ಇಂತಹ ಕಷ್ಟ ಕಾಲದಲ್ಲೂ ದಚ್ಚು ಫ್ಯಾನ್ಸ್ ಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಬಹಳ ದಿನಗಳಿಂದ ಡೆವಿಲ್ ಓಟಿಟಿ ಪ್ರಸಾರ ಯಾವಾಗ ಅಂತ ಕೇಳ್ತಿದ್ದ ಫ್ಯಾನ್ಸ್ ಗೆ ಈಗ ಉತ್ತರ ಕೊಡುವ ಸಮಯ ಬಂದಿದೆ.
ಕೊನೆಗೂ OTT ದರ್ಶನಕ್ಕೆ ರೆಡಿ ಡಿಬಾಸ್ ಡೆವಿಲ್ ಚಿತ್ರ
ಜುಲೈ 17ರಿಂದ ಝೀ-5 ಕನ್ನಡದಲ್ಲಿ ಡೆವಿಲ್ ಸ್ಟ್ರೀಮಿಂಗ್
5.4ಕೋಟಿ ಕಡಿಮೆ ಬೆಲೆಗೆ ಟಿವಿ, ಓಟಿಟಿ ರೈಟ್ಸ್ ಸೇಲ್..!
ಡೆವಿಲ್.. ಕಳೆದ ವರ್ಷ ಡಿಸೆಂಬರ್ 11ರಂದು ತೆರೆಕಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಸಿನಿಮಾ. ಮಿಲನ ಪ್ರಕಾಶ್ ನಿರ್ದೇಶಿಸಿ, ನಿರ್ಮಿಸಿದ್ದ ಈ ಸಿನಿಮಾದಲ್ಲಿ ದರ್ಶನ್ ಒಂದಲ್ಲ ಎರಡೆರಡು ಪಾತ್ರಗಳಲ್ಲಿ ನೋಡುಗರನ್ನ ರಂಜಿಸಿದ್ರು. ಬ್ಯಾಡ್ ಟೈಂ ಅಂದ್ರೆ ಈ ಸಿನಿಮಾ ರಿಲೀಸ್ಗೆ ದರ್ಶನ್ ಹೊರಗೆ ಇರೋದ್ರ ಬದಲಿಗೆ ಜೈಲೊಳಗಿದ್ರು. ಆದ್ರೂ ಸಹ ಫ್ಯಾನ್ಸ್ ದೊಡ್ಡ ಮಟ್ಟದಲ್ಲಿ ಪ್ರಮೋಷನ್ಸ್ ಮಾಡಿ, ಥಿಯೇಟರ್ಗಳ ಬಳಿ ಹಬ್ಬದ ವಾತಾವರಣ ಸೃಷ್ಟಿಸಿ, ಡೆವಿಲ್ ಚಿತ್ರವನ್ನ ಬರಮಾಡಿಕೊಂಡಿದ್ರು.
ಸಿನಿಮಾ ತೆರೆಕಂಡು ಆರೇಳು ತಿಂಗಳಾದ್ರೂ ಸಿನಿಮಾದ ಓಟಿಟಿ ಹಾಗೂ ಸ್ಯಾಟಲೈಟ್ ರೈಟ್ಸ್ ಮಾತ್ರ ಮಾರಾಟ ಆಗದೆ ಹಾಗೆಯೇ ಉಳಿದುಬಿಟ್ಟಿತ್ತು. ಇದೀಗ ಫೈನಲಿ ಡೆವಿಲ್ ಸಿನಿಮಾ ಓಟಿಟಿ ಪ್ಲಾಟ್ಫಾರ್ಮ್ಗೆ ಲಗ್ಗೆ ಇಡೋಕೆ ತುದಿಗಾಲಲ್ಲಿ ನಿಂತಿದೆ. ಹೌದು.. ಇದೇ ಜುಲೈ 17ರಿಂದ ಝೀ-5 ಕನ್ನಡದಲ್ಲಿ ಡೆವಿಲ್ ಚಿತ್ರ ಸ್ಟ್ರೀಮಿಂಗ್ ಆಗಲಿದೆ. ಸಿನಿಮಾ ನಿರೀಕ್ಷಿತ ಗೆಲುವು ಕಾಣದ ಹಿನ್ನೆಲೆ, ಓಟಿಟಿ ಹಾಗೂ ಟಿವಿ ಹಕ್ಕುಗಳು ಮಾರಾಟವಾಗದೆ ಹಾಗೆಯೇ ಉಳಿದಿದ್ದವು. ಆದ್ರೀಗ ಝೀ-5 ಕನ್ನಡದ ಎರಡೂ ಹಕ್ಕುಗಳನ್ನ 5 ಕೋಟಿ 40ಲಕ್ಷಕ್ಕೆ ಖರೀದಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಂಬಿಎಣಿಸುತ್ತಿರೋ ನಟ ದರ್ಶನ್ಗೆ ಸುಪ್ರೀಂ ಕೋರ್ಟ್ ಆದೇಶದಂತೆ ಇನ್ನೂ ಒಂದು ವರ್ಷ ಬೇಲ್ ಸಿಗೋದು ಕಷ್ಟಸಾಧ್ಯ. ಅಲ್ಲದೆ, ಸಾಕ್ಷ್ಯನಾಶ ಪ್ರಕರಣವೊಂದು ಅವರಿಗೆ ಹೊಸದಾಗಿ ತಗ್ಲಾಕಿಕೊಂಡಿದ್ದು, ಆ ಸುಳಿಯಿಂದ ಹೊರಬರಲಾಗದೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕೋ ಸಾಧ್ಯತೆಯಿದೆ ನಟ ದರ್ಶನ್.





