ಜಮ್ಮು: ಭಾರತದ ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖ ಗಡಿ ಪ್ರದೇಶವಾದ ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆ 24 ಗಂಟೆಗಳ ಕಾಲ ಕಟ್ಟೆಚ್ಚರದಲ್ಲಿದ್ದರೂ, ಪಾಕಿಸ್ತಾನ ಹಾಗೂ ಅದರ ಬೆಂಬಲಿತ ಉಗ್ರರು ಮಾತ್ರ ಸದಾ ಕಾಲುಕೆರೆದು ಜಗಳಕ್ಕೆ ನಿಲ್ಲುತ್ತಲೇ ಇರುತ್ತಾರೆ. ಇದೀಗ ಭಾರತದ ಗಡಿಯಲ್ಲಿ ಮತ್ತೊಂದು ಭೀಕರ ವಿಧ್ವಂಸಕ ಕೃತ್ಯ ಎಸಗಲು ಪಾಕಿಸ್ತಾನ ಸಂಚು ರೂಪಿಸಿದೆ ಎಂಬ ಭಯಾನಕ ಸತ್ಯವನ್ನು ಕೇಂದ್ರ ಗುಪ್ತಚರ ಇಲಾಖೆ ಬಯಲಿಗೆಳೆದಿದೆ.
ಪೆಹಲ್ಗಾಂ ದಾಳಿ ಮರೆಯುವ ಮುನ್ನವೇ ಬಿಗ್ ಪ್ಲಾನ್!
ಕಳೆದ 2025ರ ಏಪ್ರಿಲ್ ತಿಂಗಳಲ್ಲಿ ನಡೆದ ಪೆಹಲ್ಗಾಂ ದಾಳಿಯ ಆಘಾತ ಇನ್ನು ಮಾಸುವ ಮುನ್ನವೇ, ಭಾರತದ ಮೇಲೆ ಮತ್ತೊಂದು ದೊಡ್ಡ ಮಟ್ಟದ ದಾಳಿ ನಡೆಸಲು ಸಜ್ಜಾಗಿದ್ದು, ಪಾಕಿಸ್ತಾನದ ಕುಮ್ಮಕ್ಕಿನಿಂದ ಉಗ್ರರು ಸ್ಕೆಚ್ ಹಾಕಿದ್ದಾರೆ ಎಂಬ ಸ್ಪೋಟಕ ಮಾಹಿತಿ ಲಭ್ಯವಾಗಿದೆ.
ಪ್ರವಾಸಿ ತಾಣಗಳೇ ಉಗ್ರರ ಟಾರ್ಗೆಟ್: ಗುಪ್ತಚರ ಇಲಾಖೆ ಎಚ್ಚರಿಕೆ
ಗುಪ್ತಚರ ಇಲಾಖೆಯ ವರದಿಯ ಪ್ರಕಾರ, ಜಮ್ಮು-ಕಾಶ್ಮೀರದ ಗಡಿಯ ಮೂಲಕ ಭಾರತದೊಳಗೆ ನುಸುಳಲು ‘ಲಷ್ಕರ್-ಎ-ತೋಯ್ಬಾ’ ಉಗ್ರರು ಹೊಂಚು ಹಾಕಿ ಕುಳಿತಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಕೇವಲ ಭಾರತೀಯ ಸೇನೆಯನ್ನು ಮಾತ್ರವಲ್ಲದೆ, ಕಣಿವೆಯ ಪ್ರಮುಖ ಪ್ರವಾಸಿ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.
ದೇಶಾದ್ಯಂತ ಹೈಅಲರ್ಟ್ ಘೋಷಣೆ; ಗಡಿಯಲ್ಲಿ ಕಾವಲು ಬಲಪಡಿಸಿದ ಸೇನೆ
ಗುಪ್ತಚರ ಇಲಾಖೆಯ ಈ ಗಂಭೀರ ಎಚ್ಚರಿಕೆಯ ಬೆನ್ನಲ್ಲೇ ಜಮ್ಮು-ಕಾಶ್ಮೀರ ಸೇರಿದಂತೆ ದೇಶಾದ್ಯಂತ ಹೈಅಲರ್ಟ್ ಘೋಷಿಸಲಾಗಿದೆ. ಜಮ್ಮುವಿನ ಗಡಿ ನಿಯಂತ್ರಣ ರೇಖೆ (LoC) ಹಾಗೂ ಅಂತರರಾಷ್ಟ್ರೀಯ ಗಡಿಗಳಲ್ಲಿ ಸೇನಾ ಗಸ್ತನ್ನು (Patrolling) ತೀವ್ರಗೊಳಿಸಲಾಗಿದೆ. ಗಡಿ ಭಾಗದಲ್ಲಿ ಅನುಮಾನಾಸ್ಪದವಾಗಿ ಓಡಾಡುವ ಪ್ರತಿಯೊಬ್ಬರ ಮೇಲೂ ಸೇನೆ ಹಾಗೂ ಸ್ಥಳೀಯ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಆಂತರಿಕ ಕಚ್ಚಾಟದಲ್ಲಿದ್ದರೂ ಭಾರತದ ಮೇಲೆ ಪಾಕ್ ಕಣ್ಣು!
ಪ್ರಸ್ತುತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (PoK) ಅಲ್ಲಿನ ಸ್ಥಳೀಯ ನಿವಾಸಿಗಳು ಪಾಕಿಸ್ತಾನ ಸರ್ಕಾರದ ವಿರುದ್ಧವೇ ದೊಡ್ಡ ಮಟ್ಟದ ದಂಗೆ ಎದ್ದಿದ್ದಾರೆ. ಆರ್ಥಿಕ ಬಿಕ್ಕಟ್ಟು ಹಾಗೂ ಆಂತರಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪರದಾಡುತ್ತಿರುವ ಪಾಕಿಸ್ತಾನ, ತನ್ನ ದೇಶದ ಜನರ ಗಮನವನ್ನು ಬೇರೆಡೆ ಸೆಳೆಯಲು ಭಾರತದ ಮೇಲೆ ಕತ್ತಿ ಮಸೆಯುತ್ತಿದೆ. ತನ್ನದೇ ದೇಶದ ಪರಿಸ್ಥಿತಿ ಹದಗೆಟ್ಟಿದ್ದರೂ ಭಾರತದ ವಿರುದ್ಧ ಸದಾ ಸಂಚು ರೂಪಿಸುವ ಪಾಕಿಸ್ತಾನಕ್ಕೆ ಬುದ್ಧಿ ಬರುವುದು ಯಾವಾಗ ಎಂಬುದು ಸದ್ಯದ ಯಕ್ಷಪ್ರಶ್ನೆಯಾಗಿದೆ.





