ಸ್ಯಾಂಡಲ್ವುಡ್ನ ‘ರೊಮ್ಯಾಂಟಿಕ್ ಹೀರೋ’ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಇಂದು ಬರ್ತ್‌ಡೇ ಸಂಭ್ರಮ. 48ನೇ ವಸಂತಕ್ಕೆ ಕಾಲಿಡ್ತಿರೋ ಗಣಿ, ಈ ವಿಶೇಷ ದಿನದಂದೇ ತಮ್ಮ ಅಭಿಮಾನಿಗಳಿಗೆ ಬ್ಯಾಕ್-ಟು-ಬ್ಯಾಕ್ ಎರಡು ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಮಾಡೋ ಮೂಲಕ ಡಬಲ್ ಸರ್ಪ್ರೈಸ್ ಕೊಟ್ಟಿದ್ದಾರೆ. ಗಣಿ ಸಿನಿಮಾಗಳಿಂದ ತುಂಬಿ ತುಳುಕಲಿರೋ ಅಕ್ಟೋಬರ್ ತಿಂಗಳ ಧಮಾಕ ಜೊತೆ ಬರ್ತ್ ಡೇ ಬಾಯ್ ಇಂದು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್‌ಗೆ 48ನೇ ಬರ್ತ್ ಡೇ ಸಂಭ್ರಮ
ತಿಮ್ಮಪ್ಪನ ದರ್ಶನ ಪಡೆದ ಬರ್ತ್‌ಡೇ ಬಾಯ್ ಗಣೇಶ್..!
ಫ್ಯಾನ್ಸ್‌ಗೆ ಡಬಲ್ ಧಮಾಕ.. 14 ದಿನ ಅಂತರ.. 2 ಚಿತ್ರ ತೆರೆಗೆ
ಅಕ್ಟೋಬರ್‌ಗೆ ಪಿನಾಕ, ಸಮೃದ್ಧಿ ಮಂಜುನಾಥ್ ಬೃಂದಾವಿಹಾರಿ
ಸ್ಯಾಂಡಲ್ವುಡ್ ಅಂಗಳದಲ್ಲಿ ಮುಂಗಾರು ಮಳೆಯಾಗಿ ಹನಿ ಹನಿಸಿ, ಪ್ರೇಕ್ಷಕರ ಮನಸ್ಸಿನಲ್ಲಿ ಶಾಶ್ವತವಾಗಿ ಅಚ್ಚುಳಿದ ನಟ ಗೋಲ್ಡನ್ ಸ್ಟಾರ್ ಗಣೇಶ್ ಇಂದು ತಮ್ಮ 48ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕಾಮಿಡಿ ಶೋ ಆ್ಯಂಕರ್ ಆಗಿ ಜರ್ನಿ ಸ್ಟಾರ್ಟ್ ಮಾಡಿ, ಇವತ್ತು ಕನ್ನಡಿಗರ ನೆಚ್ಚಿನ ಗೋಲ್ಡನ್ ಸ್ಟಾರ್ ಆಗಿ ಬೆಳೆದು ನಿಂತಿರೋ ಗಣೇಶ್ ಜನ್ಮದಿನ ಅಂದ್ರೆ ಫ್ಯಾನ್ಸ್‌ಗೆ ದೊಡ್ಡ ಹಬ್ಬ. ಆದರೆ ಈ ಬಾರಿಯ ಬರ್ತ್‌ಡೇ ಬರೀ ಕೇಕ್ ಕತ್ತರಿಸುವುದಕ್ಕೆ ಸೀಮಿತವಾಗಿಲ್ಲ; ಬದಲಿಗೆ ಗಣೇಶ್ ಕೆರಿಯರ್‌ನಲ್ಲೇ ಹಿಂದೆಂದೂ ಕಾಣದ ದೊಡ್ಡ ಅನೌನ್ಸ್‌ಮೆಂಟ್ ಒಂದಕ್ಕೆ ಸಾಕ್ಷಿಯಾಗಿದೆ.
ಪ್ರತಿ ಬಾರಿ ಫ್ಯಾನ್ಸ್ ಜೊತೆ ಅದ್ದೂರಿಯಾಗಿ ಬರ್ತ್‌ಡೇ ಆಚರಿಸಿಕೊಳ್ಳುತ್ತಿದ್ದ ಗಣಿ, ಈ ಬಾರಿ ತಮ್ಮ ಹುಟ್ಟುಹಬ್ಬದ ವಿಶೇಷ ದಿನದಂದು ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದಿದ್ದಾರೆ. ತಿಮ್ಮಪ್ಪನ ಆಶೀರ್ವಾದ ಪಡೆದು ಹೊಸ ಜರ್ನಿಗೆ ರೆಡಿಯಾಗಿದ್ದಾರೆ. ಹೌದು, ಗಣೇಶ್ ಬರ್ತ್‌ಡೇ ದಿನವೇ ಅವರ ಬಹುನಿರೀಕ್ಷಿತ ಪಿನಾಕ ಚಿತ್ರದ ರಿಲೀಸ್ ಡೇಟ್ ಅಧಿಕೃತವಾಗಿ ಹೊರಬಿದ್ದಿದೆ. ಗಣೇಶ್ ಅವರ ರಗಡ್ ಹಾಗೂ ವಿಭಿನ್ನ ಲುಕ್‌ನಿಂದಲೇ ಸಖತ್ ಹೈಪ್ ಕ್ರಿಯೇಟ್ ಮಾಡಿರೋ ಈ ಥ್ರಿಲ್ಲರ್ ಸಿನಿಮಾ ಅಕ್ಟೋಬರ್ 2ರ ಗಾಂಧಿ ಜಯಂತಿಯ ರಜಾದಿನಗಳ ಸದುಪಯೋಗ ಪಡಿಸಿಕೊಳ್ಳಲು ವರ್ಲ್ಡ್ ವೈಡ್ ಗ್ರ್ಯಾಂಡ್ ಆಗಿ ರಿಲೀಸ್ ಆಗ್ತಿದೆ. ಕೊರಿಯೋಗ್ರಫರ್ ಧನಂಜಯ್ ಆ್ಯಕ್ಷನ್ ಕಟ್ ಹೇಳಿರೋ ಈ ಚಿತ್ರವನ್ನು ಪ್ರತಿಷ್ಠಿತ ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ಟಿ.ಜಿ ವಿಶ್ವಪ್ರಸಾದ್ ನಿರ್ಮಿಸಿದ್ದಾರೆ.
ಪಿನಾಕ ರಿಲೀಸ್ ಆದ ಬೆನ್ನಲ್ಲೇ, ಅಂದ್ರೆ ಕೇವಲ ಎರಡು ವಾರ ಕಳೆಯುವುದರೊಳಗೆ ಗಣೇಶ್ ಅವರ ಮತ್ತೊಂದು ಮೋಸ್ಟ್ ಅವೇಟೆಡ್ ಸಿನಿಮಾ ಬೃಂದಾವಿಹಾರಿ ಚಿತ್ರಮಂದಿರಗಳಿಗೆ ಅಪ್ಪಳಿಸಲಿದೆ. ಅಕ್ಟೋಬರ್ 16ರಂದು ಈ ಚಿತ್ರ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ‘ಕೃಷ್ಣಂ ಪ್ರಣಯಸಖಿ’ಯಂತಹ ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟ ನಿರ್ದೇಶಕ ಶ್ರೀನಿವಾಸ್ ರಾಜು ಹಾಗೂ ಗಣೇಶ್ ಕಾಂಬಿನೇಷನ್‌ನಲ್ಲೇ ಈ ಚಿತ್ರ ಮೂಡಿಬರುತ್ತಿದ್ದು, ಕೆವಿಎನ್ ಪ್ರೊಡಕ್ಷನ್ಸ್ ಕರ್ನಾಟಕದಾದ್ಯಂತ ಅದ್ಧೂರಿಯಾಗಿ ರಿಲೀಸ್ ಮಾಡುತ್ತಿದೆ. ಸಮೃದ್ಧಿ ಮಂಜುನಾಥ್ ನಿರ್ಮಾಣದ ಬೃಂದಾವಿಹಾರಿ ಸಾಂಗ್ಸ್‌ನಿಂದ ಸಖತ್ ಸೌಂಡ್ ಮಾಡ್ತಿದೆ.
ಒಂದೇ ತಿಂಗಳಲ್ಲಿ ಗಣೇಶ್ ಅವರ ಎರಡು ಬಿಗ್ ಬಜೆಟ್ ಸಿನಿಮಾಗಳು ಬ್ಯಾಕ್-ಟು-ಬ್ಯಾಕ್ ರಿಲೀಸ್ ಆಗುತ್ತಿರುವುದನ್ನು ಕೇಳಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.ಕೃಷ್ಣಂ ಪ್ರಣಯಸಖಿ ಸೂಪರ್ ಸಕ್ಸಸ್ ಆದ ಬಳಿಕ ಹೆಚ್ಚು ಕಡಿಮೆ ಎರಡು ವರ್ಷ ಗಣೇಶ್ ಯಾವುದೇ ಸಿನಿಮಾಗಳನ್ನು ರಿಲೀಸ್ ಮಾಡಿರಲಿಲ್ಲ. ಆದರೆ ಈಗ ಒಟ್ಟೊಟ್ಟಿಗೆ ಸಿನಿಮಾಗಳನ್ನು ಒಪ್ಪಿಕೊಂಡಿರೋ ಗಣಿ, ತಿಮ್ಮಪ್ಪನ ದರ್ಶನ ಪಡೆದು ಬ್ಲಾಕ್‌ಬಸ್ಟರ್ ಲಕ್ ಬೆನ್ನಿಗಿಟ್ಟುಕೊಂಡು ಬಂದಿದ್ದಾರೆ. ಅಕ್ಟೋಬರ್ ಹಬ್ಬದ ಸೀಸನ್‌ನಲ್ಲೇ ಪ್ರೇಕ್ಷಕರ ಮುಂದೆ ಬರಲಿರೋ ಈ ಎರಡು ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಯಾವ ರೀತಿ ಧೂಳ್ ಎಬ್ಬಿಸಲಿವೆ ಅನ್ನೋದನ್ನ ನೋಡಲು ಸ್ಯಾಂಡಲ್ವುಡ್ ಪ್ರೇಕ್ಷಕರು ಸದ್ಯಕ್ಕಂತೂ ಕಾತುರದಿಂದ ಕಾಯುತ್ತಿದ್ದಾರೆ.
ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್





