ಮಹಾರಾಷ್ಟ್ರದಲ್ಲಿ ಭಾನುವಾರ (ಜೂನ್ 28) ನಡೆಯಬೇಕಿದ್ದ ಶಿಕ್ಷಕರ ಅರ್ಹತಾ ಪರೀಕ್ಷೆ (TET-2026) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆ ತುರ್ತುವಾಗಿ ಮುಂದೂಡಲಾಗಿದೆ. ಪರೀಕ್ಷೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಪ್ರಶ್ನೆಪತ್ರಿಕೆ ಸೋರಿಕೆಯ ಮಾಹಿತಿ ಬೆಳಕಿಗೆ ಬಂದಿದ್ದು, ರಾಜ್ಯಾದ್ಯಂತ ಪರೀಕ್ಷೆಯನ್ನು ರದ್ದುಗೊಳಿಸಿ ಮುಂದಿನ ದಿನಾಂಕವನ್ನು ಬಳಿಕ ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣದ ತನಿಖೆ ಕೈಗೊಂಡಿರುವ ಭಿವಂಡಿ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಬಿಹಾರ ಮೂಲದ ರಾಜೀವ್ ಶಾ (45), ಆಕಾಶ್ ಕುಮಾರ್ (30) ಹಾಗೂ ಹರಿಯಾಣ ಮೂಲದ ಧೀರಜ್ ಕುಮಾರ್ (28) ಎಂದು ಗುರುತಿಸಲಾಗಿದೆ. ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 318(4), 316(5) ಹಾಗೂ 61(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ಪ್ರಕರಣದ ಪ್ರಮುಖ ಆರೋಪಿ ಇನ್ನೂ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ವಿಶೇಷ ತಂಡಗಳಿಂದ ಶೋಧ ಕಾರ್ಯ ಮುಂದುವರಿದಿದೆ.
ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಆರೋಪಿಗಳು ದೆಹಲಿಯಿಂದ ನಾಲ್ಕು ಸೆಟ್‌ಗಳ TET ಪ್ರಶ್ನೆಪತ್ರಿಕೆಗಳನ್ನು ಮಹಾರಾಷ್ಟ್ರಕ್ಕೆ ತಂದು ಸುಮಾರು 1.5 ಕೋಟಿ ರೂಪಾಯಿಗೆ ಮಾರಾಟ ಮಾಡುವ ಸಂಚು ರೂಪಿಸಿದ್ದರು. ಪ್ರಶ್ನೆಪತ್ರಿಕೆಗಳನ್ನು ಯಾರಿಗೆ ಮಾರಾಟ ಮಾಡಲು ಉದ್ದೇಶಿಸಿದ್ದರು ಹಾಗೂ ಈ ಜಾಲದಲ್ಲಿ ಇನ್ನೂ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದರ ಕುರಿತು ತನಿಖೆ ಮುಂದುವರಿದಿದೆ.
ಈ ಕುರಿತು ಭಿವಂಡಿ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ (ACP) ಅಶೋಕ್ ದುಧೆ ಮಾಹಿತಿ ನೀಡಿ, ಕೆಲವರು TET ಪ್ರಶ್ನೆಪತ್ರಿಕೆಗಳನ್ನು ಮಾರಾಟ ಮಾಡಲು ಬರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೊದಲು ಡಿಸಿಪಿ ಪವನ್ ಬನ್ಸೋದ್ ಅವರಿಗೆ ಲಭಿಸಿತ್ತು. ಈ ಮಾಹಿತಿಯ ಆಧಾರದ ಮೇಲೆ ಕೊಂಗಾವ್ ಪ್ರದೇಶದಲ್ಲಿ ಪೊಲೀಸರು ಬಲೆ ಬೀಸಿ ಕಾರ್ಯಾಚರಣೆ ನಡೆಸಿದರು. ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಅವರಿಂದ ನಾಲ್ಕು ಸೆಟ್‌ಗಳ TET ಪ್ರಶ್ನೆಪತ್ರಿಕೆಗಳು, ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಿಂದ ಸಾವಿರಾರು ಪರೀಕ್ಷಾರ್ಥಿಗಳಿಗೆ ತೀವ್ರ ನಿರಾಸೆಯಾಗಿದೆ. ಪರೀಕ್ಷೆಗಾಗಿ ಹಲವು ತಿಂಗಳುಗಳಿಂದ ಸಿದ್ಧತೆ ನಡೆಸಿದ್ದ ಅಭ್ಯರ್ಥಿಗಳು ಇದೀಗ ಹೊಸ ದಿನಾಂಕಕ್ಕಾಗಿ ಕಾಯುವಂತಾಗಿದೆ. ಈ ಪ್ರಕರಣದ ಸಂಪೂರ್ಣ ಸತ್ಯಾಸತ್ಯತೆ ಹೊರಬರಲು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಪ್ರಮುಖ ಆರೋಪಿಯ ಬಂಧನದ ಬಳಿಕ ಇನ್ನಷ್ಟು ಮಹತ್ವದ ಮಾಹಿತಿ ಬಹಿರಂಗವಾಗುವ ಸಾಧ್ಯತೆ ಇದೆ.
ನೀಟ್ ಪ್ರಕರಣದ ಹಿನ್ನೆಲೆ
ಇದಕ್ಕೂ ಮುನ್ನ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆಯ (NEET) ಪ್ರಶ್ನೆಪತ್ರಿಕೆ ಸೋರಿಕೆಯು ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಇದೀಗTET ಪರೀಕ್ಷೆಯು ಶಿಕ್ಷಕರ ಅರ್ಹತಾ ಪರೀಕ್ಷೆಯಾಗಿದ್ದು, ಇದರಲ್ಲಿ ಮೋಸವು ಮುಂದಿನ ದಿನಗಳಲ್ಲಿ ದೇಶದ ಭವಿಷ್ಯದ ಮೇಲೂ ಪರಿಣಾಮ ಬೀರುವ ಅಪಾಯವಿದೆ.
ಅಭ್ಯರ್ಥಿಗಳಿಗೆ ಮಹತ್ವದ ಮಾಹಿತಿ
-
ಮುಂದೂಡಲಾದ TET ಪರೀಕ್ಷೆಯ ಹೊಸ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.
-
ಹೊಸ ಪರೀಕ್ಷಾ ವೇಳಾಪಟ್ಟಿಯನ್ನು ಅಧಿಕೃತ ವೆಬ್ಸೈಟ್ https://mahatet.in/ ನಲ್ಲಿ ಪ್ರಕಟಿಸಲಾಗುವುದು.
-
ಅಭ್ಯರ್ಥಿಗಳು
MAHA TET exam schedule PDFಲಿಂಕ್ ಮೂಲಕ ವೇಳಾಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.





