ಆನೇಕಲ್: ಬೆಂಗಳೂರು ಹೊರವಲಯದ ಜಿಗಣಿಯ ಪಟಾಲಮ್ಮ ಬಡಾವಣೆಯಲ್ಲಿ ವಿವಾಹಿತ ಮಹಿಳೆಯೊಬ್ಬರ ನಿಗೂಢ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಗಂಡ ಮತ್ತು ಇಬ್ಬರು ಮಕ್ಕಳನ್ನು ಬಿಟ್ಟು ಪ್ರಿಯಕರನೊಂದಿಗೆ ಬಂದಿದ್ದ ಮಹಿಳೆ ಮನೆಯೊಳಗೆ ಕೊಳೆತ ಸ್ಥಿತಿಯಲ್ಲಿ ಆಕೆಯ ಶವ ಪತ್ತೆಯಾಗಿದೆ. ಆರೋಪಿ ಪ್ರಿಯಕರ ಪರಾರಿಯಾಗಿದ್ದು, ಪೊಲೀಸರು ಬಲೆ ಬೀಸಿದ್ದಾರೆ.
ಬೆಂಗಳೂರು ಹೊರವಲಯದ ಜಿಗಣಿಯ ಪಟಾಲಮ್ಮ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಇಳಕಲ್ ಮೂಲದ ಅಕ್ಷತಾ (30) ಅವರು ಕೊಲೆಯಾದ ದುರ್ದೈವಿ. ಸದ್ಯ ಕೊಲೆಯ ಆರೋಪಿಯಾಗಿ ನಾನಾ ಸಾಹೇಬ್ ಎಂಬಾತ ತಲೆಮರೆಸಿಕೊಂಡಿದ್ದು, ಜಿಗಣಿ ಪೊಲೀಸರು ಆತನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಅಕ್ಷತಾ ಮತ್ತು ನಾನಾ ಸಾಹೇಬ್ ಕಳೆದ ನವೆಂಬರ್ ತಿಂಗಳಲ್ಲಿ ಪಟಾಲಮ್ಮ ಬಡಾವಣೆಯಲ್ಲಿ ಬಾಡಿಗೆ ಮನೆ ಪಡೆದು ಗಂಡ-ಹೆಂಡತಿಯಂತೆ ವಾಸಿಸುತ್ತಿದ್ದರು ಎನ್ನಲಾಗಿದೆ.
ಕೊಳೆತ ಶವ ಪತ್ತೆಯಾದ ಬಗೆ
ಇದೇ ತಿಂಗಳ (ಜೂನ್) 20ರಂದು ಜಿಗಣಿಯ ಪಟಾಲಮ್ಮ ಬಡಾವಣೆಯ ಬಾಡಿಗೆ ಮನೆಯಿಂದ ವಿಪರೀತ ದುರ್ವಾಸನೆ ಬರಲಾರಂಭಿಸಿತ್ತು. ಸುತ್ತಮುತ್ತಲಿನ ಮನೆಗಳ ಜನರು ತೀವ್ರ ಅಸ್ವಸ್ಥರಾದ ಬೆನ್ನಲ್ಲೇ ಮನೆ ಮಾಲೀಕರು ಕಿಟಕಿ ತೆರೆದು ನೋಡಿದಾಗ ಅಕ್ಷತಾ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಕ್ಷಣವೇ ಜಿಗಣಿ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ಆರಂಭದಲ್ಲಿ ಅಸಹಜ ಸಾವು (UDR) ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಆದರೆ, ಅಕ್ಷತಾ ಅವರ ಮರಣೋತ್ತರ ಪರೀಕ್ಷೆಯ ವರದಿ ಬಂದಾಗ ಆಘಾತಕಾರಿ ಸಂಗತಿ ಹೊರಬಿದ್ದಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದು ದೃಢಪಟ್ಟಿದೆ. ಈ ವರದಿಯ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಿ ತನಿಖೆ ತೀವ್ರಗೊಳಿಸಿದ್ದಾರೆ. ಬಕೆಟ್‌ನಿಂದ ತಲೆಗೆ ಹೊಡೆದು, ಕಂಬಿಯಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಅಕ್ಷತಾ ಕುಟುಂಬದ ಬಗ್ಗೆ ಮಾಹಿತಿ
ಮೃತ ಅಕ್ಷತಾಗೆ 2014ರಲ್ಲಿ ಕೃಷ್ಣ ಎಂಬುವವರ ಜೊತೆ ಮದುವೆಯಾಗಿತ್ತು. ಈ ದಂಪತಿಗೆ ಒಂದು ಹೆಣ್ಣು ಮತ್ತು ಒಂದು ಗಂಡು ಮಗು ಇದೆ. ಪತಿ ಕೃಷ್ಣ ವುಡ್ ವರ್ಕ್ (ಮರದ ಕೆಲಸ) ಮಾಡುತ್ತಿದ್ದರೆ, ಅಕ್ಷತಾ ಸೀರೆ ನೇಯ್ಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಳು. ಇದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ನಾನಾ ಸಾಹೇಬ್ ಎಂಬಾತನ ಪರಿಚಯವಾಗಿತ್ತು. ದಿನಗಳು ಕಳೆದಂತೆ ಇವರಿಬ್ಬರ ನಡುವೆ ಅಕ್ರಮ ಪ್ರೇಮಸಂಬಂಧ ಬೆಳೆದಿತ್ತು. ಪ್ರಿಯಕರನಲ್ಲಿ ಅತೀವ ಆಸಕ್ತಿ ಹೊಂದಿದ್ದ ಅಕ್ಷತಾ ತನ್ನ ಇಬ್ಬರು ಮಕ್ಕಳು ಮತ್ತು ಪತಿಯನ್ನು ಬಿಟ್ಟು ನಾನಾ ಸಾಹೇಬ್ ಜೊತೆ ಜಿಗಣಿಗೆ ಬಂದು ವಾಸಿಸುತ್ತಿದ್ದಳು.
ಲವ್ ಜಿಹಾದ್ ಆರೋಪ
ಈ ಪ್ರಕರಣವು ಲವ್ ಜಿಹಾದ್ ಪ್ರಕರಣವೆಂದು ಹಿಂದೂ ಕಾರ್ಯಕರ್ತರು ಆರೋಪಿಸಿದ್ದು, ರಾಜ್ಯದಲ್ಲಿ ಪದೇ ಪದೇ ಇಂತಹ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಎಂದು ತಿಳಿಸಿದ್ದಾರೆ. ಮದುವೆಯಾಗಿ ಇಬ್ಬರು ಮಕ್ಕಳಿರುವ ಹಿಂದೂ ಮಹಿಳೆಯನ್ನು ಪ್ರೀತಿಯ ಹೆಸರಿನಲ್ಲಿ ತಲೆಕೆಡಿಸಿ, ಕರೆತಂದು ನಂತರ ಕೊಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಪ್ರೀತಿ ಎನ್ನುವ ಹೆಸರಿನಲ್ಲಿ ಅಮಾಯಕ ಹೆಣ್ಣುಮಕ್ಕಳು ಲವ್ ಜಿಹಾದ್ಗೆ ಬಲಿಯಾಗುತ್ತಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಕಾರ್ಯಾಚರಣೆ
ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿ ನಾನಾ ಸಾಹೇಬ್ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ಬಲೆ ಬೀಸಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದ್ದು, ಆರೋಪಿಯ ಮೊಬೈಲ್ ಫೋನ್ ಸಿಗ್ನಲ್‌ಗಳನ್ನು ಟ್ರೇಸ್ ಮಾಡಲು ತಂತ್ರಜ್ಞಾನದ ನೆರವನ್ನು ಪಡೆಯಲಾಗಿದೆ. ಅಷ್ಟೇ ಅಲ್ಲ, ಆರೋಪಿಯ ಸ್ನೇಹಿತರು, ಸಂಬಂಧಿಕರು ಮತ್ತು ಸಂಭಾವ್ಯ ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ.
ಘಟನೆಯಿಂದ ಕೆರಳಿದ ಹಿಂದೂ ಕಾರ್ಯಕರ್ತರು ಜಿಗಣಿ ಪೊಲೀಸ್ ಠಾಣೆ ಮುಂಭಾಗ ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.





