ಬೆಂಗಳೂರು (ಜೂನ್ 20): ರಾಜ್ಯದ ಜನಸಾಮಾನ್ಯರ ಕುಂದುಕೊರತೆಗಳಿಗೆ ತ್ವರಿತವಾಗಿ ಸ್ಪಂದಿಸಿ ನ್ಯಾಯ ಒದಗಿಸುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಪರಿಹರಿಸಲು ವಿಶೇಷವಾಗಿ ‘ಪ್ರಜಾಸೇವೆ ಇಲಾಖೆ’ ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಶನಿವಾರ (ಜೂನ್ 20) ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಎರಡನೇ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಬಳಿಕ ಸುದ್ದಿಗೋಷ್ಠಿಯಲ್ಲಿ ಸಿಎಂ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದರು.
ಪ್ರತ್ಯೇಕ ಸಚಿವರು ಮತ್ತು ಹಿರಿಯ ಐಎಎಸ್ ಅಧಿಕಾರಿ
ಹೊಸದಾಗಿ ರಚನೆಯಾಗಲಿರುವ ಪ್ರಜಾಸೇವೆ ಇಲಾಖೆಗೆ ಪ್ರತ್ಯೇಕ ಸಚಿವರು ಹಾಗೂ ಹಿರಿಯ ಐಎಎಸ್ ಅಧಿಕಾರಿಯನ್ನು ನೇಮಿಸಲಾಗುವುದು. ಈ ಇಲಾಖೆ ಕೇವಲ ಅಹವಾಲುಗಳನ್ನು ಸ್ವೀಕರಿಸುವ ಕೇಂದ್ರವಾಗಿರದೇ, ಜನರ ಸಮಸ್ಯೆಗಳಿಗೆ ನ್ಯಾಯ ಒದಗಿಸುವ ಜವಾಬ್ದಾರಿಯನ್ನು ಹೊತ್ತು ಕಾರ್ಯನಿರ್ವಹಿಸಲಿದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
224 ಕ್ಷೇತ್ರಗಳಲ್ಲಿ ಸಚಿವರ ಸಭೆ
ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಚಿವರು ಸ್ಥಳೀಯ ಶಾಸಕರೊಂದಿಗೆ ವಾರಕ್ಕೊಮ್ಮೆ ಸಭೆ ನಡೆಸಲಿದ್ದಾರೆ. ಈ ಸಭೆಗಳಲ್ಲಿ ಜನಸಾಮಾನ್ಯರ ಅಹವಾಲುಗಳನ್ನು ಆಲಿಸಿ, ಅವುಗಳನ್ನು ಪ್ರಜಾಸೇವೆ ಇಲಾಖೆಯ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪಿಸಿ ಪರಿಹಾರ ಕಲ್ಪಿಸಲಾಗುವುದು.
ಸಚಿವರು ಕ್ಷೇತ್ರಗಳಿಗೆ ಭೇಟಿ ನೀಡಿ ಜನಸ್ಪಂದನ ಸಭೆಗಳನ್ನು ನಡೆಸಲಿದ್ದು, ಅಲ್ಲಿನ ಸಮಸ್ಯೆಗಳು ಹಾಗೂ ಸಾರ್ವಜನಿಕರ ಅಭಿಪ್ರಾಯಗಳನ್ನು ಸರ್ಕಾರದ ಗಮನಕ್ಕೆ ತರಲಿದ್ದಾರೆ. ನಂತರ ಅವುಗಳಿಗೆ ಸೂಕ್ತ ಪರಿಹಾರ ಒದಗಿಸುವ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಿಎಂ ತಿಳಿಸಿದರು.
ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ
ಸಾರ್ವಜನಿಕರು ತಮ್ಮ ಸಮಸ್ಯೆಗಳು ಹಾಗೂ ಕುಂದುಕೊರತೆಗಳನ್ನು ಅರ್ಜಿಯ ಮೂಲಕ ಪ್ರಜಾಸೇವೆ ಇಲಾಖೆಗೆ ಸಲ್ಲಿಸಿ ಪರಿಹಾರ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ. ಈ ಇಲಾಖೆಯ ಕಾರ್ಯವಿಧಾನ, ಅಹವಾಲು ಸಲ್ಲಿಸುವ ವಿಧಾನ, ಸಂಬಂಧಿತ ಅಧಿಕಾರಿಗಳು ಹಾಗೂ ಸಚಿವರ ಜವಾಬ್ದಾರಿಗಳ ಕುರಿತು ಮುಂದಿನ ದಿನಗಳಲ್ಲಿ ಸರ್ಕಾರ ಮಾರ್ಗಸೂಚಿಗಳನ್ನು ಪ್ರಕಟಿಸುವ ಸಾಧ್ಯತೆ ಇದೆ.
ಪ್ರತಿಭಟನೆಗಳ ಹಿಂದಿನ ಸಮಸ್ಯೆಗಳಿಗೂ ಸ್ಪಂದನೆ
ಇತ್ತೀಚೆಗೆ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಲು ಪ್ರತ್ಯೇಕ ಸಚಿವಾಲಯದ ಅಗತ್ಯದ ಕುರಿತು ಚರ್ಚೆ ನಡೆದಿತ್ತು. ಪ್ರತಿದಿನ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆಗಳು ನಡೆಯುತ್ತಿದ್ದು, ಅವುಗಳ ಹಿಂದಿನ ಕಾರಣಗಳು, ಸಮಸ್ಯೆಗಳು ಮತ್ತು ಜನರ ಬೇಡಿಕೆಗಳನ್ನು ತಿಳಿದುಕೊಂಡು ಸ್ಪಂದಿಸಲು ಪ್ರತ್ಯೇಕ ವ್ಯವಸ್ಥೆ ಅಗತ್ಯವಾಗಿದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟಿದ್ದರು. ಅದೇ ಹಿನ್ನೆಲೆಯಲ್ಲಿ ಇದೀಗ ‘ಪ್ರಜಾಸೇವೆ ಇಲಾಖೆ’ ಸ್ಥಾಪನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಸಚಿವರಾದ ಈಶ್ವರ್ ಖಂಡ್ರೆ, ಪ್ರಿಯಾಂಕ್ ಖರ್ಗೆ ಹಾಗೂ ಯು.ಟಿ. ಖಾದರ್ ಉಪಸ್ಥಿತರಿದ್ದರು.





