ದೆಹಲಿ, ಜೂನ್ 19: ಹೆಚ್ಚಾಗುತ್ತಿರುವ ವಾಹನಗಳ ಒಡಾಟ, ಕಾರ್ಖಾನೆಗಳಿಂದ ಹೊರಬರುತ್ತಿರುವ ಹೊಗೆ, ತ್ಯಾಜ್ಯಗಳನ್ನು ಸುಡುವುದು ಹೀಗೆ ಅನೇಕ ಕಡೆಗಳಿಂದ ವಾಯು ಮಾಲಿನ್ಯ ಉಂಟಾಗಿ ಜನರಿಗೆ ಉಸಿರಾಟಕ್ಕೆ ಸಂಬಂಧಿಸಿದ ಅನೇಕ ರೀತಿಯ ಕಾಯಿಲೆಗಳು ಹೆಚ್ಚಾಗುತ್ತಿದೆ. ಇನ್ನು ಚಳಿಗಾಲ ಆರಂಭವಾದಾಗ ದೆಹಲಿಯಲ್ಲಿ ಹೆಚ್ಚಾಗುವ ವಾಯುಮಾಲಿನ್ಯ ಸಮಸ್ಯೆಯನ್ನು ನಿಯಂತ್ರಿಸಲು ದೆಹಲಿ ಸರ್ಕಾರ ಈಗಿನಿಂದಲೇ ಸಿದ್ಧತೆ ಆರಂಭ ಮಾಡಿದೆ. ಪ್ರತಿ ವರ್ಷ ಮಾಲಿನ್ಯ ಪ್ರಮಾಣ ಗರಿಷ್ಠ ಮಟ್ಟ ತಲುಪಿದ ನಂತರ ನಿರ್ಬಂಧ ವಿಧಿಸುವ ಬದಲು, ಈ ಬಾರಿ ಮುಂಚಿತವಾಗಿಯೇ ನಿಯಂತ್ರಣ ಕ್ರಮಗಳನ್ನು ಜಾರಿಗೆ ತರಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.
ನವೆಂಬರ್ನಿಂದ ಫೆಬ್ರವರಿವರೆಗೆ ಚಳಿಗಾಲದ ವಾಯುಗುಣಮಟ್ಟವನ್ನು ಕಾಪಾಡಲು ವಿಶೇಷ ನಿರ್ವಹಣಾ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ವಾಹನ ಸಂಚಾರ, ನಿರ್ಮಾಣ ಚಟುವಟಿಕೆ, ಪಾರ್ಕಿಂಗ್, ಕಚೇರಿ ನಿರ್ವಹಣೆ ಹಾಗೂ ತೆರೆದ ಪ್ರದೇಶಗಳಲ್ಲಿ ತ್ಯಾಜ್ಯ ಸುಡುವಂತಹ ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಇರಲು ಮುಂದಾಗಿದೆ.
ಹೊಸ ನಿಯಮಗಳ ಪ್ರಕಾರ, ಮಾನ್ಯ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಹೊಂದಿರುವ ವಾಹನಗಳಿಗೆ ಮಾತ್ರ ಪೆಟ್ರೋಲ್ ಪಂಪ್ಗಳಲ್ಲಿ ಇಂಧನ ನೀಡಲಾಗುತ್ತದೆ. ಇದರ ಜೊತೆಗೆ ದೆಹಲಿಯ ಹೊರಭಾಗದಲ್ಲಿ ನೋಂದಾಯಿತ ಬಿಎಸ್-6 ಅಲ್ಲದ ವಾಣಿಜ್ಯ ವಾಹನಗಳ ಪ್ರವೇಶಕ್ಕೆ ನವೆಂಬರ್ 1ರಿಂದ ಜನವರಿ 31ರವರೆಗೆ ನಿರ್ಬಂಧ ವಿಧಿಸಲಾಗುತ್ತದೆ. ಆದರೆ ಸಿಎನ್ಜಿ ವಾಹನಗಳು, ಎಲೆಕ್ಟ್ರಿಕ್ ವಾಹನಗಳು, ತುರ್ತು ಸೇವಾ ವಾಹನಗಳು ಮತ್ತು ಸರ್ಕಾರಿ ವಾಹನಗಳಿಗೆ ವಿನಾಯಿತಿ ನೀಡಲಾಗುತ್ತದೆ.
ವಾಹನಗಳ ಬಳಕೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ನವೆಂಬರ್ 1ರಿಂದ ಫೆಬ್ರವರಿ 28ರವರೆಗೆ ಅಧಿಕೃತ ವಾಹನ ಪಾರ್ಕಿಂಗ್ ಸ್ಥಳಗಳಲ್ಲಿ ಶುಲ್ಕವನ್ನು ದ್ವಿಗುಣಗೊಳಿಸುವ ಯೋಜನೆಯನ್ನು ಸರ್ಕಾರ ರೂಪಿಸಿದೆ. ಸಂಚಾರ ಒತ್ತಡ ಕಡಿಮೆ ಮಾಡಲು ಕಚೇರಿ ಸಮಯ ಬದಲಾವಣೆ ಹಾಗೂ ಕಚೇರಿ ಕೆಲಸದ ವ್ಯವಸ್ಥೆಯನ್ನೂ ಪರಿಗಣಿಸಲಾಗುತ್ತಿದೆ. ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಶೇ.50ರಷ್ಟು ಉದ್ಯೋಗಿಗಳು ಮಾತ್ರ ಕಚೇರಿಯಿಂದ ಕೆಲಸ ಮಾಡುವಂತೆ ಅವಕಾಶ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ದೆಹಲಿಯ ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾದ ನಿರ್ಮಾಣ ಮತ್ತು ಕಟ್ಟಡ ಕೆಡವುವಿಕೆ ಕಾಮಗಾರಿಗಳ ಧೂಳನ್ನು ನಿಯಂತ್ರಿಸಲು ಸರ್ಕಾರ ವಿಶೇಷ ಕ್ರಮ ಕೈಗೊಂಡಿದೆ. ನಿರ್ಮಾಣ ಸಂಸ್ಥೆಗಳು ಮುಂಚಿತವಾಗಿ ಯೋಜನೆ ರೂಪಿಸಿ, ಪರಿಸರ ನಿಯಮಗಳು ಮತ್ತು ಧೂಳು ನಿಯಂತ್ರಣ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ನವೆಂಬರ್ 1ರಿಂದ ಜನವರಿ 31ರವರೆಗೆ ನಿರ್ಮಾಣ ಸ್ಥಳಗಳಲ್ಲಿ ಧೂಳು ನಿಯಂತ್ರಣ ವ್ಯವಸ್ಥೆ, ಹೊಗೆ ನಿರೋಧಕ ಗನ್ಗಳು ಹಾಗೂ ಮಂಜು ಸಿಂಪಡಣೆ ತಂತ್ರಜ್ಞಾನ ಬಳಸಬೇಕಾಗುತ್ತದೆ. ಮಾಲಿನ್ಯ ಮಟ್ಟ ಹೆಚ್ಚಾಗುವ ಡಿಸೆಂಬರ್ 10ರಿಂದ ಜನವರಿ 20ರ ಅವಧಿಯಲ್ಲಿ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆಯಿದೆ.
ಇದರ ಜೊತೆಗೆ ದೆಹಲಿ ಸರ್ಕಾರವು ಕೃಷಿ ತ್ಯಾಜ್ಯ, ಒಣ ಎಲೆಗಳು ಹಾಗೂ ಇತರ ವಸ್ತುಗಳನ್ನು ತೆರೆದ ಜಾಗದಲ್ಲಿ ಸುಡುವುದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಯಂತ್ರಣ ವ್ಯವಸ್ಥೆ ಪ್ರತಿ ವರ್ಷ ನವೆಂಬರ್ 1ರಿಂದ ಫೆಬ್ರವರಿ 28ರವರೆಗೆ ಜಾರಿಯಲ್ಲಿರಲಿದೆ.





