ರಾಮ್ ಚರಣ್ ಮತ್ತು ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ಕಾಂಬಿನೇಷನ್‌ನ ‘ಪೆದ್ದಿ’ ಸಿನಿಮಾ ಸದ್ಯ ಬಾಕ್ಸ್ ಆಫೀಸ್ ಸೌಂಡ್ ಮಾಡೋದರ ಜೊತೆಗೆ ವಿವಾದದಲ್ಲೂ ಜೋರಾಗಿಯೇ ಸೌಂಡ್ ಮಾಡ್ತಿದೆ. ಹೌದು, ಸಿನಿಮಾ ನೋಡಿದ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ. ಚಿತ್ರದ ಕಥೆ, ಮೇಕಿಂಗ್, ನಾಯಕಿ ಜಾನ್ವಿ ಕಪೂರ್ ಅವರನ್ನು ತೋರಿಸಿರುವ ರೀತಿಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶದ ಜ್ವಾಲೆ ಭುಗಿಲೆದ್ದಿದೆ. ಹಾಗಾದ್ರೆ ‘ಪೆದ್ದಿ’ ಚಿತ್ರದಲ್ಲಿ ಜಾನ್ವಿ ಪಾತ್ರಕ್ಕೆ ಆಗಿರುವ ಅಪಮಾನವಾದ್ರೂ ಏನು..? ಚಿತ್ರತಂಡದ ವಿರುದ್ಧ ನೆಟ್ಟಿಗರು ಇಷ್ಟೊಂದು ಗರಂ ಆಗಿರೋದು ಯಾಕೆ..? ಹೇಳ್ತೀವಿ ಈ ಸ್ಟೋರಿ ನೋಡಿ.
- ಪೆದ್ದಿ ಮೇಲೆ ಪಬ್ಲಿಕ್ ಪಂಚ್..ಜಾನ್ವಿಗೆ ಜಸ್ಟಿಸ್ ಬೇಕು..!
- ಬುಚ್ಚಿಗೆ ಬಿಗ್ ಬ್ಯಾಕ್‌ಲ್ಯಾಶ್,ಹೀರೋಯಿನ್‌ಗೆ ಗೌರವ ಇಲ್ವಾ..?
- ಸೆನ್ಸಾರ್ ಮಂಡಳಿಯ ದ್ವಂದ್ವ ನೀತಿಗೆ ನೆಟ್ಟಿಗರ ಚಾಟಿ..!
- ಕೇವಲ ಕಾಮದ ದೃಷ್ಟಿ, ಜಾನ್ವಿ ಪಾತ್ರಕ್ಕೆ ಸಿಗದ ಗೌರವ
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಬಾಲಿವುಡ್ ನಟಿ ಜಾನ್ವಿ ಕಪೂರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ‘ಪೆದ್ದಿ’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಭಾರೀ ವಿವಾದಕ್ಕೆ ಸಿಲುಕಿದೆ. ಇಡೀ ಸೌತ್ ಇಂಡಿಯಾದಲ್ಲೇ ದೊಡ್ಡ ಹೈಪ್ ಕ್ರಿಯೇಟ್ ಮಾಡಿದ್ದ ಈ ಸಿನಿಮಾ, ಥಿಯೇಟರ್‌ಗೆ ಬಂದ ಅರ್ಧ ದಿನದ ಒಳಗಾಗಿಯೇ ಪ್ರೇಕ್ಷಕರಿಂದ ತೀವ್ರ ನೆಗೆಟಿವ್ ಪ್ರತಿಕ್ರಿಯೆ ಎದುರಿಸುತ್ತಿದೆ. ಚಿತ್ರದ ಕಥೆ, ಚಿತ್ರಕಥೆ ಅಥವಾ ಮೇಕಿಂಗ್‌ಗಿಂತ ಹೆಚ್ಚಾಗಿ, ನಾಯಕಿ ಜಾನ್ವಿ ಕಪೂರ್ ಅವರನ್ನು ಸಿನಿಮಾದಲ್ಲಿ ತೋರಿಸಿರುವ ಅಸಭ್ಯ ಮತ್ತು ಆಕ್ಷೇಪಾರ್ಹ ರೀತಿಗೆ ಪ್ರೇಕ್ಷಕರು ಹಾಗೂ ಅಭಿಮಾನಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ
ಇಡೀ ಸಿನಿಮಾದಲ್ಲಿ ನಾಯಕಿಗೆ ಯಾವುದೇ ಪ್ರಮುಖ ಅಥವಾ ಗೌರವಾನ್ವಿತ ಪಾತ್ರವನ್ನು ನೀಡದೆ, ಕೇವಲ ಗ್ಲಾಮರ್ ಮತ್ತು ಪುರುಷರ ಕಾಮದ ದೃಷ್ಟಿಯಿಂದ ಮಾತ್ರ ಬಳಸಿಕೊಳ್ಳಲಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಚಿತ್ರತಂಡವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಿನಿಮಾದಲ್ಲಿ ಜಾನ್ವಿ ಕಪೂರ್ ಅವರ ಕ್ಯಾರೆಕ್ಟರ್ ಯಾವುದೇ ಬಲವಾದ ಉದ್ದೇಶವನ್ನು ಹೊಂದಿಲ್ಲ, ಬದಲಿಗೆ ಕೇವಲ ಪುರುಷ ಪಾತ್ರಗಳ ಲೈಂಗಿಕ ಬಯಕೆ ಮತ್ತು ಆಕರ್ಷಣೆಯ ವಸ್ತುವಾಗಿ ಅವರನ್ನು ಇಳಿಸಿಬಿಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಚಿತ್ರದಲ್ಲಿ ನಾಯಕನ ಪಾತ್ರವು ನಾಯಕಿಯ ಮುಖ ಅಥವಾ ಕಣ್ಣುಗಳನ್ನು ಹೊಗಳುವಾಗ, ಕ್ಯಾಮೆರಾ ಆಕೆಯ ದೇಹದ ಇತರೆ ಭಾಗಗಳನ್ನು ಅಸಭ್ಯವಾಗಿ ತೋರಿಸುತ್ತದೆ ಎಂದು ಪ್ರೇಕ್ಷಕರು ಕಿಡಿಕಾರಿದ್ದಾರೆ. ಇಷ್ಟೇ ಅಲ್ಲದೆ, ಮಹಿಳೆಯ ಒಪ್ಪಿಗೆಯಿಲ್ಲದೆ ನಾಯಕ ಬಲವಂತವಾಗಿ ಮುತ್ತು ಕೊಡುವ ದೃಶ್ಯಗಳು ಮತ್ತು ಚುನಾವಣಾ ಪ್ರಚಾರದ ವೇಳೆ ನಾಯಕಿಯನ್ನು ಸಾರ್ವಜನಿಕವಾಗಿ ಅವಮಾನಿಸುವ ದೃಶ್ಯಗಳನ್ನು ರೋಮ್ಯಾಂಟಿಕ್ ಹಿನ್ನೆಲೆ ಸಂಗೀತದೊಂದಿಗೆ ಗ್ಲೋರಿಫೈ ಮಾಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ರಾಮ್ ಚರಣ್ ಪಾತ್ರವು ನಾಯಕಿಯನ್ನು ಕೇವಲ ಪ್ರೀತಿಸುತ್ತಿಲ್ಲ, ಬದಲಿಗೆ ಅತ್ಯಂತ ಲಜ್ಜೆಗೆಟ್ಟು ಕಾಮದ ದೃಷ್ಟಿಯಿಂದ ನೋಡುತ್ತಿದೆ ಎಂದು ಪ್ರೇಕ್ಷಕರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಇದೇ ವೇಳೆ ಇಂತಹ ಅಶ್ಲೀಲ ಮತ್ತು ಮಹಿಳಾ ವಿರೋಧಿ ದೃಶ್ಯಗಳಿಗೆ ಸುಲಭವಾಗಿ ಗ್ರೀನ್ ಸಿಗ್ನಲ್ ನೀಡಿದ ಸೆನ್ಸಾರ್ ಮಂಡಳಿಯ ದ್ವಂದ್ವ ನೀತಿಯನ್ನು ಸಹ ಅಭಿಮಾನಿಗಳು ತೀವ್ರವಾಗಿ ಪ್ರಶ್ನಿಸುತ್ತಿದ್ದಾರೆ. ‘ಅಬ್ಸೆಷನ್’ ನಂತಹ ಸಿನಿಮಾಗಳಲ್ಲಿ ರಕ್ತಪಾತ ಮತ್ತು ಹಿಂಸಾಚಾರದ ದೃಶ್ಯಗಳಿದ್ದಾಗ ತಕ್ಷಣವೇ ಕತ್ತರಿ ಹಾಕುವ ಸೆನ್ಸಾರ್ ಮಂಡಳಿ, ‘ಪೆದ್ದಿ’ ಚಿತ್ರದಲ್ಲಿ ಮಹಿಳೆಯನ್ನು ಇಷ್ಟೊಂದು ಹೀನಾಯವಾಗಿ ಲೈಂಗಿಕ ವಸ್ತುವನ್ನಾಗಿ ಬಿಂಬಿಸುವಾಗ ಯಾಕೆ ಮೌನವಾಗಿತ್ತು ಎಂದು ನೆಟ್ಟಿಗರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಬೆಳ್ಳಿಪರದೆಯ ಮೇಲೆ ಮಹಿಳೆಯರ ಗೌರವವನ್ನು ಕಾಪಾಡಲು ಸೆನ್ಸಾರ್ ಮಂಡಳಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.
ಯಾವುದೇ ಬಲವಾದ ಉದ್ದೇಶವಿಲ್ಲದ ಇಂತಹ ಕೀಳು ಪಾತ್ರಕ್ಕೆ ಒಪ್ಪಿಕೊಂಡ ನಟ ರಾಮ್ ಚರಣ್ ಮತ್ತು ಚಿತ್ರವನ್ನು ನಿರ್ದೇಶಿಸಿದ ಬುಚ್ಚಿ ಬಾಬು ಸನಾ ಇಬ್ಬರನ್ನೂ ಸಿನಿಮಾ ಪ್ರೇಮಿಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕಮರ್ಷಿಯಲ್ ಸಿನಿಮಾದ ಹೆಸರಿನಲ್ಲಿ ಮಹಿಳಾ ಪಾತ್ರವನ್ನು ಇಷ್ಟೊಂದು ಕೀಳಾಗಿ ಚಿತ್ರಿಸಿರುವುದು ಚಿತ್ರಮಂದಿರಕ್ಕೆ ಬರುವ ಮಹಿಳಾ ಪ್ರೇಕ್ಷಕರಿಗೆ ಮಾಡಿದ ಅಲ್ಟಿಮೇಟ್ ಅವಮಾನ ಎಂದು ಸಿನಿಮಾ ಪ್ರೇಮಿಗಳು ಬೇಸರ ವ್ಯಕ್ತಪಡಿಸುತ್ತಿದ್ದು, ಈ ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ.





