ಕನಕಪುರ: ಅಂಗನವಾಡಿ ಸಹಾಯಕಿಯೊಬ್ಬರು ಎರಡೂವರೆ ವರ್ಷದ ಮಗುವಿನ ಮೇಲೆ ಶಾರೀರಿಕ ಹಾಗೂ ಮಾನಸಿಕ ಹಿಂಸೆ ನಡೆಸಿದ ಪ್ರಕರಣ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮಹಾರಾಜರಕಟ್ಟೆ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಈ ಘಟನೆ ಮಂಗಳವಾರ ಸಂಭವಿಸಿದ್ದು, ಗ್ರಾಮಸ್ಥರ ಮಧ್ಯಸ್ಥಿಕೆಯಿಂದ ಪ್ರಕರಣ ಬಹಿರಂಗಗೊಂಡಿದೆ. ಎರಡೂವರೆ ವರ್ಷದ ದೀಕ್ಷಿತ್ ಎಂಬ ಬಾಲಕ ಅಂಗನವಾಡಿ ಕೇಂದ್ರದಲ್ಲಿ ಹಠ ಮಾಡುತ್ತಿದ್ದ ಎಂದು ಅಂಗನವಾಡಿ ಸಹಾಯಕಿ ಚಂದ್ರಮ್ಮ, ಮಗುವಿನ ಎಡ ಕೈ ಮೇಲೆ ಬರೆಹಾಕಿ, ಡೈಪರ್ ಒಳಗೆ ಖಾರದ ಪುಡಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಗುವಿನ ಪೋಷಕರಾದ ರಮೇಶ್ ನಾಯಕ್ ಮತ್ತು ಚೈತ್ರಾಬಾಯಿ ಅವರು ತಮ್ಮ ಮಗುವನ್ನು ಕರೆದುಕೊಂಡು ಹೋಗಲು ಅಂಗನವಾಡಿಗೆ ಭೇಟಿ ನೀಡಿದಾಗ ಮಗುವು ಅಳುತ್ತಿರುವುದನ್ನು ಗಮನಿಸಿದ್ದಾರೆ.
ಮಗುವಿಗೆ ಏನಾಯಿತು ಎಂಬ ಪ್ರಶ್ನೆಗೆ, ದೀಕ್ಷಿತ್ ಖಾರದ ಪುಡಿಯ ನೋವಿನಿಂದ ಅಳುತ್ತಿದ್ದು, ತನ್ನ ಕಷ್ಟವನ್ನು ತೋರಿಸಿಕೊಂಡಿದ್ದಾನೆ. ಮಗುವಿನ ಸ್ಥಿತಿಯನ್ನು ನೋಡಿ ಪೋಷಕರು ತಕ್ಷಣವೇ ಸಿಡಿಪಿಒ (ಮಕ್ಕಳ ಅಭಿವೃದ್ಧಿ ಯೋಜನೆ ಅಧಿಕಾರಿ) ನಾರಾಯಣ್ ಅವರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ನಡೆಸಿ, ಚಂದ್ರಮ್ಮ ಅವರ ವಿರುದ್ಧ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.
ಮಗುವಿನ ತಂದೆ ರಮೇಶ್ ನಾಯಕ್ ಅವರು ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆ, ಚಂದ್ರಮ್ಮ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮಗುವಿನ ಮೇಲೆ ಶಾರೀರಿಕ ಹಿಂಸೆ ನಡೆಸಿದ ಆರೋಪದಲ್ಲಿ ಕಾನೂನು ಕ್ರಮ ಜರುಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.





