ರಾಜ್ಯಾದ್ಯಂತ ಸಾರಿಗೆ ನೌಕರರು ನಾಳೆ (ಮೇ 20) ಹಮ್ಮಿಕೊಂಡಿದ್ದ ಬೃಹತ್ ಬಸ್ ಮುಷ್ಕರಕ್ಕೆ ಕರ್ನಾಟಕ ಹೈಕೋರ್ಟ್ ತಡೆಯೊಡ್ದಿದೆ. ಮುಷ್ಕರ ನಡೆಸಬಾರದು ಎಂದು ಸಾರಿಗೆ ನೌಕರರ ಸಂಘಟನೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ನ್ಯಾಯಾಲಯ, ಸಾರ್ವಜನಿಕರ ಹಿತದೃಷ್ಟಿಯಿಂದ ಈ ಮಹತ್ವದ ಆದೇಶ ಹೊರಡಿಸಿದೆ.
ಇದರಿಂದಾಗಿ ನಾಳೆ ಬಸ್ ಸಂಚಾರ ಸ್ಥಗಿತಗೊಳ್ಳುವ ಆತಂಕದಲ್ಲಿದ್ದ ಲಕ್ಷಾಂತರ ಪ್ರಯಾಣಿಕರು ಮತ್ತು ಸಾಮಾನ್ಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ನಾಳೆ ಎಂದಿನಂತೆ ಬಸ್ ಸಂಚಾರ ಆರಂಭವಾಗುವ ಸಾಧ್ಯತೆ ಹೆಚ್ಚಿದೆ.
PIL ಸಲ್ಲಿಕೆಯಿಂದ ನ್ಯಾಯಾಲಯದ ಕ್ರಮ
ಸಾರಿಗೆ ನೌಕರರ ದಿಢೀರ್ ಮುಷ್ಕರ ನಿರ್ಧಾರವನ್ನು ಪ್ರಶ್ನಿಸಿ ನಿನ್ನೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆಯಾಗಿತ್ತು. ವೇದಾವತಿ ಮತ್ತು ಲೆಕ್ಕಸಂದ್ರದ ಶ್ರೀಧರ್ ಎಂಬ ಮನೆಗೆಲಸದ ಮಹಿಳೆ ಹಾಗೂ ಕಟ್ಟಡ ಕಾರ್ಮಿಕರು ಈ ಅರ್ಜಿ ಸಲ್ಲಿಸಿದ್ದರು.
ಇಂದು ನ್ಯಾಯಮೂರ್ತಿ ಗೋವಿಂದರಾಜ ಅವರ ನೇತೃತ್ವದ ಪೀಠದಲ್ಲಿ ವಿಚಾರಣೆ ನಡೆದಿದ್ದು, ಅರ್ಜಿದಾರರ ಪರ ವಕೀಲ ವಿಕ್ರಂ ಹುಯಿಲಗೊಳ ಅವರು ಪ್ರಬಲ ವಾದ ಮಂಡಿಸಿದರು. ಸಮಾಜದ ಕೆಳಸ್ತರದ ದುಡಿಯುವ ವರ್ಗದವರು ಸಾರ್ವಜನಿಕ ಹಿತದೃಷ್ಟಿಯಿಂದ ಅರ್ಜಿ ಸಲ್ಲಿಸಿರುವುದನ್ನು ನ್ಯಾಯಾಲಯವು ಬಹಳ ಮೆಚ್ಚುಗೆ ವ್ಯಕ್ತಪಡಿಸಿತು.
ಹೈಕೋರ್ಟ್‌ನ ಮುಖ್ಯ ನಿರ್ದೇಶನಗಳು
- ನಾಳೆ ಯಾವುದೇ ಕಾರಣಕ್ಕೂ ಮುಷ್ಕರ ನಡೆಸಬಾರದು
- ಸಾರಿಗೆ ನೌಕರರ ಸಮಸ್ಯೆಗಳ ಬಗ್ಗೆ ಸರ್ಕಾರವು ತಕ್ಷಣ ಸಂಘಟನೆಗಳೊಂದಿಗೆ ಮುಖಾಮುಖಿ ಚರ್ಚೆ ನಡೆಸಬೇಕು
- ಸಾರಿಗೆ ಸಚಿವರ ನೇತೃತ್ವದಲ್ಲಿ ತುರ್ತು ಸಭೆ ಕರೆಯಬೇಕು
- ಉಭಯ ಪಕ್ಷಗಳಿಗೆ ನೋಟಿಸ್ ಜಾರಿ
ಪ್ರಕರಣದ ಮುಂದಿನ ವಿಚಾರಣೆ
ಹೈಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ. ಅಲ್ಲಿಯವರೆಗೆ ಮುಷ್ಕರ ನಡೆಸದಂತೆ ಕಠಿಣ ನಿರ್ದೇಶನ ನೀಡಿದೆ.
ಈ ಆದೇಶದಿಂದ ರಾಜ್ಯದ ದೈನಂದಿನ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ರೋಗಿಗಳು ಮತ್ತು ಸಾಮಾನ್ಯ ಪ್ರಯಾಣಿಕರಿಗೆ ದೊಡ್ಡ ನಿರಾಳತೆ ದೊರೆತಿದೆ. ಆದರೆ ಸಾರಿಗೆ ನೌಕರರ ಬೇಡಿಕೆಗಳು ಇನ್ನೂ ಬಗೆಹರಿಯಬೇಕಿದೆ.
ಸರ್ಕಾರ ಮತ್ತು ಸಂಘಟನೆಗಳ ನಡುವಿನ ಮಾತುಕತೆಯಲ್ಲಿ ಶೀಘ್ರ ಪರಿಹಾರ ಹೊರಬರುವ ನಿರೀಕ್ಷೆ ಇದೆ.





