ಸಾಮಾನ್ಯವಾಗಿ ಅದ್ದೂರಿ ಪ್ರಚಾರದಿಂದ ದೂರ ಉಳಿಯುವ ನಿರ್ಮಾಪಕಿ ಶಿಲ್ಪಾ ಗಣೇಶ್ ಈಗ ಸ್ಯಾಂಡಲ್‌ವುಡ್ ಹಾಗೂ ಕರಾವಳಿ ಚಿತ್ರರಂಗದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕಿಯಾಗಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಶಿಲ್ಪಾ ಅವರಿಗೆ ತಮ್ಮ ಮಾತೃಭಾಷೆಯಾದ ತುಳುವಿನಲ್ಲಿ ಒಂದು ಸಿನಿಮಾ ಮಾಡಬೇಕೆಂಬ ಹಂಬಲವಿತ್ತು. ಆ ಕನಸು ಈಗ ‘ಪಿಚ್ಚರ್’ ಸಿನಿಮಾ ಮೂಲಕ ನನಸಾಗುತ್ತಿದ್ದು, ಜುಲೈ 24ರಂದು ಈ ಚಿತ್ರ ಅದ್ಧೂರಿಯಾಗಿ ತೆರೆಗೆ ಬರಲು ಸಜ್ಜಾಗಿದೆ. ವಿಶೇಷವೆಂದರೆ ಈ ಚಿತ್ರ ತುಳು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಸಿದ್ಧವಾಗುತ್ತಿದೆ.
ಶಿಲ್ಪಾ ಗಣೇಶ್ ನಿರ್ಮಾಪಕಿ ಮಾತ್ರವಲ್ಲ, ಈಗ ವೃತ್ತಿಪರ ಗಾಯಕಿ!
ಶಿಲ್ಪಾ ಗಣೇಶ್ ಕೇವಲ ಬಂಡವಾಳ ಹೂಡುವ ನಿರ್ಮಾಪಕಿಯಷ್ಟೇ ಅಲ್ಲ, ತಮಗಿರುವ ಕಲಾತ್ಮಕ ಆಸಕ್ತಿಯನ್ನು ಈ ಚಿತ್ರದ ಮೂಲಕ ಅನಾವರಣಗೊಳಿಸಿದ್ದಾರೆ. ‘ಪಿಚ್ಚರ್’ ಚಿತ್ರದ ಮೂಲಕ ಅವರು ಗಾಯಕಿಯಾಗಿಯೂ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಸ್ಯಾಮುವೆಲ್ ಅಬಿ ರಾಗಸಂಯೋಜನೆ ಮಾಡಿರುವ ‘ಗೋಕುಲದ ರಾಧೆ’ ಎಂಬ ಯುಗಳ ಪ್ರೇಮಗೀತೆಯನ್ನು ಅವರು ಜಸ್ಕರಣ್ ಸಿಂಗ್ ಜೊತೆಗೂಡಿ ಹಾಡಿದ್ದಾರೆ. ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿರುವ ಈ ಹಾಡು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡಿಂಗ್‌ನಲ್ಲಿದ್ದು, ಶಿಲ್ಪಾ ಅವರ ವೃತ್ತಿಪರ ಗಾಯನಕ್ಕೆ ಕೇಳುಗರು ಫಿದಾ ಆಗಿದ್ದಾರೆ.

ಕಾಶ್ಮೀರದಲ್ಲಿ ಶೂಟಿಂಗ್ ಆದ ಮೊದಲ ತುಳು ಚಿತ್ರ
ಸೀಮಿತ ಬಂಡವಾಳದ ಕಾರಣಕ್ಕೆ ಈ ತನಕ ಯಾವುದೇ ತುಳು ಚಿತ್ರದ ಶೂಟಿಂಗ್ ಕಾಶ್ಮೀರದಲ್ಲಿ ನಡೆದಿರಲಿಲ್ಲ. ಆದರೆ, ಶಿಲ್ಪಾ ಗಣೇಶ್ ಅವರು ಈ ದಾಖಲೆಯನ್ನು ಮುರಿದಿದ್ದಾರೆ. ‘ಗೋಕುಲದ ರಾಧೆ’ ಹಾಡಿನ ಚಿತ್ರೀಕರಣವನ್ನು ಕಾಶ್ಮೀರದ ಹಿಮದ ಮಡಿಲಲ್ಲಿ ಅದ್ದೂರಿಯಾಗಿ ನಡೆಸಲಾಗಿದೆ. ಸಂದೀಪ್ ಬೆದ್ರ ಕಥೆ ಮತ್ತು ನಿರ್ದೇಶನದ ಈ ಚಿತ್ರದಲ್ಲಿ ನಿತ್ಯಪ್ರಕಾಶ್ ಬಂಟ್ವಾಳ ನಾಯಕನಾಗಿ ನಟಿಸಿದ್ದು, ಅಮೃತ ಸುದು ಜೊತೆಯಾಗಿದ್ದಾರೆ. ಖ್ಯಾತ ಛಾಯಾಗ್ರಾಹಕರಾದ ಸಂತೋಷ್ ರೈ ಪಾತಾಜೆ ಮತ್ತು ಚಂದ್ರಶೇಖರ್ ಕ್ಯಾಮೆರಾ ಕಣ್ಣಿನಲ್ಲಿ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಚಿತ್ರದಲ್ಲಿ ತುಳು ರಂಗಭೂಮಿಯ ದಿಗ್ಗಜರ ಬಳಗವೇ ಇದ್ದು, ‘ಗೋಲ್ಡನ್ ಸ್ಟಾರ್’ ಗಣೇಶ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಚಿತ್ರದ ಮತ್ತೊಂದು ಹೈಲೈಟ್.
ಶಿಲ್ಪಾ ಅವರ ಸಿನಿಮಾ ವಿಷನ್: “ಕನ್ನಡ ಚಿತ್ರಗಳ ಜೊತೆಗೆ ವರ್ಷಕ್ಕೆ ಕನಿಷ್ಠ ಒಂದಾದರೂ ಸದಭಿರುಚಿಯ ಹಾಗೂ ಅದ್ದೂರಿ ತುಳು ಚಿತ್ರವನ್ನು ನಿರ್ಮಿಸಿ, ತುಳು ಚಿತ್ರರಂಗದ ಮಾರುಕಟ್ಟೆಯನ್ನು ಜಾಗತಿಕ ಮಟ್ಟಕ್ಕೆ ವಿಸ್ತರಿಸಬೇಕು ಎನ್ನುವುದು ಶಿಲ್ಪಾ ಗಣೇಶ್ ಅವರ ಯೋಚನೆಯಾಗಿದೆ.”
ಕನ್ನಡ ಚಿತ್ರರಂಗದಲ್ಲಿ ಯಶಸ್ಸಿನ ಹಾದಿ
ನಟ ಗಣೇಶ್ ಅವರ ಪತ್ನಿಯಾಗಿ ಚಿತ್ರರಂಗಕ್ಕೆ ಪರಿಚಿತರಾದರೂ, ಶಿಲ್ಪಾ ತಮ್ಮದೇ ಆದ ಉದ್ಯಮಶೀಲತೆಯಿಂದ ಗುರುತಿಸಿಕೊಂಡವರು. ಗಣೇಶ್ ಅಭಿನಯದ ‘ಮಳೆಯಲಿ ಜೊತೆಯಲಿ’, ‘ಕೂಲ್’, ‘ಮುಗುಳುನಗೆ’ ಮತ್ತು ‘ಗೀತಾ’ ಸಿನಿಮಾಗಳನ್ನು ಇವರೇ ನಿರ್ಮಿಸಿದ್ದರು. ಕೇವಲ ಕಮರ್ಷಿಯಲ್ ಲೇಬಲ್ ಹಚ್ಚದೆ, ಕೌಟುಂಬಿಕ ಮೌಲ್ಯ ಹಾಗೂ ಸಂಗೀತಕ್ಕೆ ಪ್ರಾಮುಖ್ಯತೆ ನೀಡುವ ಕಥೆಗಳನ್ನು ಆಯ್ದುಕೊಳ್ಳುವುದು ಇವರ ವಿಶೇಷತೆ.
ಪಾರ್ವತಮ್ಮ ರಾಜ್‌ಕುಮಾರ್, ಗೀತಾ ಶಿವರಾಜ್‌ಕುಮಾರ್ ಹಾದಿಯಲ್ಲಿ ಶಿಲ್ಪಾ ಗಣೇಶ್
ಸಿನಿಮಾ ಉದ್ಯಮದಲ್ಲಿ ತಾರೆಗಳ ಸಂಭಾವನೆ ಹಾಗೂ ಶಿಸ್ತನ್ನು ಕಾಪಾಡುವುದು ಸುಲಭದ ಮಾತಲ್ಲ. ಹಿಂದೆ ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ಪ್ರಸ್ತುತ ಗೀತಾ ಶಿವರಾಜ್‌ಕುಮಾರ್ ಅವರು ಹೆಗಲಿಗೆ ಹೆಗಲು ಕೊಟ್ಟು ಗಂಡನ ತಾರಾ ವರ್ಚಸ್ಸನ್ನು ಮ್ಯಾನೇಜ್ ಮಾಡಿದಂತೆ, ಶಿಲ್ಪಾ ಕೂಡ ಗಣೇಶ್ ಅವರ ವೃತ್ತಿಬದುಕಿನ ತಳಹದಿಯಾಗಿದ್ದಾರೆ. ಸಿನಿಮಾ ಉದ್ಯಮದ ಏಳುಬೀಳುಗಳನ್ನು ಶಿಸ್ತುಬದ್ಧವಾಗಿ ನಿಭಾಯಿಸುವಾಗ ಕೆಲವರ ಟೀಕೆಗಳಿಗೆ ಒಳಗಾಗಬೇಕಾಗಿ ಬಂದರೂ, ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಮೌನವಾಗಿ ಸಾಧಿಸಿ ತೋರಿಸಿದ ಹೆಗ್ಗಳಿಕೆ ಇವರದ್ದು.
ರಾಜರಾಜೇಶ್ವರಿ ನಗರದ ಭವ್ಯ ಬಂಗಲೆಯಲ್ಲಿ ಜಿಮ್, ಮಿನಿ ಥಿಯೇಟರ್, ಈಜುಕೊಳದ ಸೌಲಭ್ಯಗಳೊಂದಿಗೆ ಸ್ಟಾರ್ ಕುಟುಂಬವನ್ನು ಮುನ್ನಡೆಸುತ್ತಿರುವ ಇವರಿಗೆ ಚಾರಿತ್ರ್ಯ ಹಾಗೂ ವಿಹಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಮಗ ವಿಹಾನ್ ಈಗಾಗಲೇ ಅಪ್ಪನ ಜೊತೆ ನಟಿಸಿದ್ದು, ಪ್ರಸ್ತುತ ‘ಡಿ ಡಿ ಢಿಕ್ಕಿ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾನೆ. ಗ್ಲಾಮರ್ ಪ್ರಪಂಚದಲ್ಲಿದ್ದರೂ ಸರಳತೆ ಹಾಗೂ ಕೌಟುಂಬಿಕ ಮೌಲ್ಯಗಳನ್ನು ಸಮತೋಲನದಲ್ಲಿ ಕಾಯ್ದುಕೊಂಡಿರುವ ಶಿಲ್ಪಾ ಗಣೇಶ್ ಅವರ ಪಯಣ ನಿಜಕ್ಕೂ ಶ್ಲಾಘನೀಯ.





