ರಾಯಚೂರು:ಕಳ್ಳತನವನ್ನೇ ಕಾಯಕ ಮಾಡಿಕೊಂಡಿರುವ ಖದೀಮರು ಏನೆಲ್ಲ ವೇಷ ಹಾಕಿ ಕೈಚಳಕ ತೋರುತ್ತಾರೆ ಎಂಬುದಕ್ಕೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆದ ಘಟನೆಯೇ ಸಾಕ್ಷಿ. ಸಾಧು-ಸಂತರ ವೇಷದಲ್ಲಿ ಬಂದ ಖದೀಮರ ಗ್ಯಾಂಗ್‌ವೊಂದು ಜನರನ್ನು ಮಂತ್ರಮುಗ್ಧರನ್ನಾಗಿ ಮಾಡಲು ಹೂವಿನ ವಾಸನೆ ತೋರಿಸಿ, ಪ್ರಸಾದ ನೀಡಿ ಹಣ ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರು ನಗರದ ‘ಸಾಯಿ ಮೆಡಿಕಲ್ಸ್’ ಎಂಬ ಫಾರ್ಮಸಿ ಅಂಗಡಿಯಲ್ಲಿ ಈ ವಂಚನೆ ನಡೆದಿದೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಈಗ ಆರೋಪಿಗಳಿಗಾಗಿ ತೀವ್ರ ಹುಡುಕಾಟ ಆರಂಭಿಸಿದ್ದಾರೆ. ಸಾಧುವೊಬ್ಬರು ಅಂಗಡಿಗೆ ಬಂದು, ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದು ಕುಡಿಯಲು ನೀರು ಕೇಳಿದರು. ಮೆಡಿಕಲ್ ಅಂಗಡಿಯ ಮಾಲೀಕರಾದ ವಿಷ್ಣುದತ್ತು ಅವರು ಸಾಧುವಿನ ಬಗ್ಗೆ ಭಕ್ತಿ ಭಾವದಿಂದ ತಣ್ಣನೆಯ ನೀರನ್ನು ತಂದುಕೊಟ್ಟರು.
ನೀರು ಕುಡಿದ ನಂತರ, ಆ ನಕಲಿ ಸಾಧು ಧನ್ಯವಾದ ಹೇಳುವ ರೀತಿಯಲ್ಲಿ ವರ್ತಿಸಿ, ಆಶೀರ್ವಾದ ನೀಡುವಂತೆ ನಟಿಸಿದ್ದಾನೆ. “ನಿನಗೆ ಹಾಗೂ ನಿನ್ನ ಕುಟುಂಬಕ್ಕೆ ಒಳಿತಾಗುತ್ತದೆ, ಎಲ್ಲಾ ಸಂಕಷ್ಟಗಳು ದೂರವಾಗುತ್ತವೆ” ಎಂದು ಹೇಳಿ ತನ್ನ ಕೈಯಲ್ಲಿದ್ದ ಸಣ್ಣ ಪೊಟ್ಟಣ ಹಾಗೂ ಎರಡು ಹೂವುಗಳನ್ನು ಮಾಲೀಕರಿಗೆ ನೀಡಿದ್ದಾನೆ. ಈ ಹೂವಿನ ವಾಸನೆ ತಗುಲಿದ ಕೆಲವೇ ಕ್ಷಣಗಳಲ್ಲಿ ಮಾಲೀಕನಿಗೆ ಮಂಕು ಬಡಿದಂತಾಯಿತು. ಅವರು ತಮ್ಮ ಅರಿವಿಲ್ಲದೆಯೇ ಮಂಕಾಗಿ, ನಿಯಂತ್ರಣ ತಪ್ಪಿದ್ದಾರೆ. ಆ ಸ್ಥಿತಿಯಲ್ಲಿದ್ದ ಮಾಲೀಕ ತಮ್ಮ ಜೇಬಿನಲ್ಲಿದ್ದ 10,000 ರೂಪಾಯಿ ನಗದು ಮತ್ತು ಕೈಯಲ್ಲಿದ್ದ ಬೆಲೆಬಾಳುವ ಚಿನ್ನದ ಉಂಗುರವನ್ನು ತಾವೇ ಬಿಚ್ಚಿ ಸಾಧುವಿನ ಕೈಗೆ ಕೊಟ್ಟಿದ್ದು, ಬಳಿಕ ಆರೋಪಿಯು ಕ್ಷಣಾರ್ಧದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಕೆಲ ಹೊತ್ತಿನ ಬಳಿಕ ವಿಷ್ಣುದತ್ತು ಅವರಿಗೆ ಸಂಪೂರ್ಣ ಪ್ರಜ್ಞೆ ಬಂದಾಗ, ತಾವು ವಂಚನೆಗೆ ಒಳಗಾಗಿರುವುದು ತಿಳಿದು ಬಂದಿದೆ. ಕೂಡಲೇ ಅವರು ಸಿಂಧನೂರು ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಅಂಗಡಿಯ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ದೃಶ್ಯಗಳಲ್ಲಿ ಸಾಧುಗಳ ವೇಷದಲ್ಲಿದ್ದ ಅನುಮಾನಾಸ್ಪದ ವ್ಯಕ್ತಿಗಳು ನಗರದಲ್ಲಿ ಹಲವೆಡೆ ಸಂಚರಿಸಿರುವುದು ಕಂಡುಬಂದಿದೆ.





