ತಮಿಳುನಾಡು ರಾಜಕೀಯದಲ್ಲಿ ಈಗ ‘ದಳಪತಿ’ ವಿಜಯ್ ಅವರದ್ದೇ ಹವಾ. ತಮ್ಮ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಮೂಲಕ ಮೊದಲ ಚುನಾವಣೆಯಲ್ಲೇ 108 ಸ್ಥಾನಗಳನ್ನು ಗೆದ್ದು ಬೀಗುತ್ತಿರುವ ವಿಜಯ್, ಈಗ ಮುಖ್ಯಮಂತ್ರಿ ಗಾದಿಯತ್ತ ಹೆಜ್ಜೆ ಇಡುತ್ತಿದ್ದಾರೆ. ಆದರೆ, ಒಂದು ಕಡೆ ರಾಜಕೀಯ ಯಶಸ್ಸಿನ ಶಿಖರ ಏರುತ್ತಿದ್ದರೆ, ಇನ್ನೊಂದೆಡೆ ಅವರ ವೈಯಕ್ತಿಕ ಜೀವನದ ಬಿರುಗಾಳಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ಒಂದು ಸಿನಿಮಾದಿಂದ ಶುರುವಾದ ಪ್ರೇಮಕಥೆ :
ವಿಜಯ್ ಮತ್ತು ಸಂಗೀತಾ ಅವರ ಭೇಟಿಗೆ ಕಾರಣವಾಗಿದ್ದು 1996ರಲ್ಲಿ ತೆರೆಕಂಡ ‘ಪೂವೆ ಉನಕ್ಕಾಗ’ ಸಿನಿಮಾ. ಈ ಚಿತ್ರದಲ್ಲಿ ವಿಜಯ್ ನಟನೆಯನ್ನು ಮೆಚ್ಚಿದ ಲಂಡನ್ ಮೂಲದ ಶ್ರೀಲಂಕಾ ಉದ್ಯಮಿಯ ಪುತ್ರಿ ಸಂಗೀತಾ ಸ್ವರ್ಣಲಿಂಗಂ, ವಿಜಯ್ ಅವರಿಗೆ ದೊಡ್ಡ ಅಭಿಮಾನಿಯಾದರು. ಲಂಡನ್‌ನಿಂದ ಭಾರತಕ್ಕೆ ಬಂದು ವಿಜಯ್‌ರನ್ನು ಭೇಟಿಯಾಗಿ ಅಭಿನಂದಿಸಿದ್ದರು. ಅಂದಿನಿಂದ ಶುರುವಾದ ಇವರ ಸ್ನೇಹ, ಪತ್ರ ವ್ಯವಹಾರಗಳ ಮೂಲಕ ಪ್ರೇಮಕ್ಕೆ ತಿರುಗಿ, ದಾಂಪತ್ಯ ಜೀವನಕ್ಕೆ ನಾಂದಿ ಹಾಡಿತ್ತು.
ದಾಂಪತ್ಯದಲ್ಲಿ ಬಿರುಕು?
ಸುಮಾರು ಎರಡು ದಶಕಗಳ ಕಾಲ ಸುಂದರ ಸಂಸಾರ ನಡೆಸಿದ ಈ ಜೋಡಿಗೆ ಒಬ್ಬ ಮಗ ಮತ್ತು ಮಗಳಿದ್ದಾರೆ. ಮಗ ಈಗಾಗಲೇ ಸಿನಿಮಾ ನಿರ್ದೇಶನಕ್ಕೆ ಸಜ್ಜಾಗುತ್ತಿದ್ದಾರೆ. ಇಷ್ಟೆಲ್ಲಾ ಸುಖ ಸಂಸಾರದ ನಡುವೆ, ಕಳೆದ ಕೆಲವು ದಿನಗಳಿಂದ ವಿಜಯ್ ಮತ್ತು ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ರಾಜಕೀಯವಾಗಿ ವಿಜಯ್ ಮೈಲಿಗಲ್ಲು ಸ್ಥಾಪಿಸುತ್ತಿರುವಾಗಲೇ ಈ ವೈಯಕ್ತಿಕ ಏರಿಳಿತಗಳು ಚರ್ಚೆಗೆ ಗ್ರಾಸವಾಗಿವೆ.





