ಮುಂಬೈ: ದಕ್ಷಿಣ ಮುಂಬೈನಲ್ಲಿ ಕಲ್ಲಂಗಡಿ ಹಣ್ಣು ಸೇವಿಸಿದ ಬೆನ್ನಲ್ಲೇ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಭಯಾನಕ ಘಟನೆ ನಡೆದಿದೆ. ದಂಪತಿ ಹಾಗೂ ಅವರ ಇಬ್ಬರು ಹೆಣ್ಣುಮಕ್ಕಳು ಮೃತಪಟ್ಟಿದ್ದು, ಹಣ್ಣು ವಿಷಪೂರಿತವಾಗಿತ್ತೇ ಎಂಬ ಅನುಮಾನ ವ್ಯಕ್ತವಾಗಿದೆ.
ಘಟನೆಯ ಹಿನ್ನೆಲೆ :
ಏಪ್ರಿಲ್ 25ರಂದು ಜೆ.ಜೆ. ಮಾರ್ಗ್ ನಿವಾಸದಲ್ಲಿ ಅಬ್ದುಲ್ಲಾ (40) ಅವರ ಕುಟುಂಬವು ಅತಿಥಿಗಳೊಂದಿಗೆ ರಾತ್ರಿ ಊಟಕ್ಕೆ ‘ಚಿಕನ್ ಪುಲಾವ್’ ಸೇವಿಸಿತ್ತು. ಊಟದ ನಂತರ ಅತಿಥಿಗಳು ತೆರಳಿದ ಬಳಿಕ, ಅಬ್ದುಲ್ಲಾ, ಅವರ ಪತ್ನಿ ನಸೀನ್ (35), ಪುತ್ರಿಯರಾದ ಜೈನಾಬ್ (13) ಮತ್ತು ಆಯೇಷಾ (16) ಮನೆಯಲ್ಲಿದ್ದ ಕಲ್ಲಂಗಡಿ ಹಣ್ಣನ್ನು ಸೇವಿಸಿದ್ದಾರೆ.
ವಾಂತಿ, ತಲೆಸುತ್ತು ಮತ್ತು ಸಾವು :
ಹಣ್ಣು ತಿಂದ ಕೆಲವೇ ಕ್ಷಣಗಳಲ್ಲಿ ನಾಲ್ವರಿಗೂ ತೀವ್ರವಾಗಿ ವಾಂತಿ ಮತ್ತು ತಲೆಸುತ್ತು ಆರಂಭವಾಗಿದೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಜೆಜೆ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕುಟುಂಬದ ನಾಲ್ವರೂ ಮೃತಪಟ್ಟಿದ್ದಾರೆ.
ತನಿಖೆಯಲ್ಲಿ ಬಯಲಾದ ಅಂಶ :
ಪ್ರಾಥಮಿಕ ತನಿಖೆಯ ಪ್ರಕಾರ, ಅಂದು ರಾತ್ರಿ ಪುಲಾವ್ ಸೇವಿಸಿದ ಅತಿಥಿಗಳಿಗೆ ಯಾವುದೇ ಆರೋಗ್ಯ ಸಮಸ್ಯೆಗಳಾಗಿಲ್ಲ. ಆದರೆ ಊಟದ ನಂತರ ಕಲ್ಲಂಗಡಿ ತಿಂದ ನಾಲ್ವರು ಮಾತ್ರ ಮೃತಪಟ್ಟಿದ್ದಾರೆ. ಹೀಗಾಗಿ ಕಲ್ಲಂಗಡಿ ಹಣ್ಣು ವಿಷಪೂರಿತವಾಗಿರುವ ಸಾಧ್ಯತೆ ಹೆಚ್ಚಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಪ್ರಸ್ತುತ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸಾವಿನ ನಿಖರ ಕಾರಣ ತಿಳಿಯಲು ‘ಹಿಸ್ಟೋಪಾಥಾಲಜಿ’ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.





