ದಾವಣಗೆರೆ: ಹರಿಹರ ತಾಲೂಕಿನ ಹನಗವಾಡಿ ಬಳಿಯ ಗುರಪೀಠದಲ್ಲಿ ನಡೆದ ಧರ್ಮದರ್ಶಿ ಸಭೆಯಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಿಂದ ವಚನಾನಂದ ಶ್ರೀ ಅವರನ್ನು ಉಚ್ಛಾಟನೆ (ಪದಚ್ಯುತಿ) ಮಾಡಲಾಗಿದೆ.
ಹರಿಹರ ಪಂಚಮಸಾಲಿ ಪೀಠದ ಟ್ರಸ್ಟಿ ಬಸವರಾಜ ದಿಂಡೂರ ಅವರು ನೀಡಿದ ಮಾಹಿತಿ ಪ್ರಕಾರ, 12 ಜನ ಧರ್ಮದರ್ಶಿಗಳು ಒಂದುಗೂಡಿ ಅಂತಿಮ ನಿರ್ಧಾರ ಕೈಗೊಂಡಿದ್ದಾರೆ. ಸಭೆಯಲ್ಲಿ ವಚನಾನಂದ ಶ್ರೀ ಅವರಿಗೆ ಶ್ವಾಸಪೀಠ ಅಥವಾ ಹರಿಹರ ಪಂಚಮಸಾಲಿ ಪೀಠ ಇವುಗಳಲ್ಲಿ ಒಂದನ್ನು ಆಯ್ಕೆ ಮಾಡುವಂತೆ ಸೂಚಿಸಲಾಗಿತ್ತು. ಆದರೆ ಅವರು ಇದಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಟ್ರ ಸ್ಟಿಗಳು ಆರೋಪಿಸಿದ್ದಾರೆ.
ಟ್ರಸ್ಟಿ ಜಿ.ಪಿ. ಪಾಟೀಲ್ ಅವರು ಹೇಳಿದ್ದಾರೆ, “ಇದು ಟ್ರಸ್ಟ್‌ನ ವೈಯಕ್ತಿಕ ನಿರ್ಧಾರವಲ್ಲ, ಸಮಾಜದ ನಿರ್ಧಾರ. ಸ್ವಾಮೀಜಿಗಳು ನಮ್ಮನ್ನು ಒಳಗೆ ಕರೆಯಲು ತಯಾರಿಲ್ಲ. ಶ್ವಾಸಗುರು ಪೀಠವನ್ನು ಬಿಡದೇ ಇರುವುದು ಮುಖ್ಯ ಕಾರಣ. ಉಳಿದ ಕಾರಣಗಳನ್ನು ಸದ್ಯದಲ್ಲೇ ವಿವರಿಸುತ್ತೇವೆ.”
ಈ ನಿರ್ಧಾರದ ಬಗ್ಗೆ ವಚನಾನಂದ ಶ್ರೀ ಅವರು ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಅವರು ಈ ನಿರ್ಧಾರವನ್ನು ಒಪ್ಪುತ್ತಾರೋ ಅಥವಾ ಕಾನೂನು ಹೋರಾಟಕ್ಕೆ ತಯಾರಾಗುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.
ಇತ್ತೀಚೆಗಷ್ಟೇ ಕೂಡಲಸಂಗಮದ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್‌ನಿಂದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರನ್ನು ಉಚ್ಛಾಟನೆ ಮಾಡಲಾಗಿತ್ತು. ಈಗ ಹರಿಹರ ಪೀಠದಲ್ಲಿ ನಡೆದ ಘಟನೆ ಲಿಂಗಾಯತ ಪಂಚಮಸಾಲಿ ಸಮಾಜದಲ್ಲಿ ಗೊಂದಲ ಮತ್ತು ಚರ್ಚೆಗೆ ಕಾರಣವಾಗಿದೆ.
ಪ್ರಸ್ತುತ ಪಂಚಮಸಾಲಿ ಪೀಠದಲ್ಲಿ ಹಣದ ಅವ್ಯವಹಾರ, ಅನುದಾನ ದುರುಪಯೋಗದ ಆರೋಪಗಳು ಹಾಗೂ ಲೆಕ್ಕಪತ್ರದ ಬಗ್ಗೆ ಭಕ್ತರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ವಚನಾನಂದ ಶ್ರೀ ಅವರು ಲೆಕ್ಕಪತ್ರದ ಪಾರದರ್ಶಕತೆಯ ಬಗ್ಗೆ ಪ್ರಶ್ನಿಸಿದ್ದೇ ಈ ವಿವಾದಕ್ಕೆ ಕಾರಣವಾಗಿರಬಹುದು ಎಂಬ ಊಹೆಗಳೂ ಇವೆ.




