ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ (Pawan Kalyan) ಕರ್ನಾಟಕಕ್ಕೆ ಭೇಟಿ ನೀಡಿದ್ದು, ವಿಧಾನಸೌಧದ ಮೆಟ್ಟಿಲುಗಳಲ್ಲಿ ರಾಜ್ಯದ ಅರಣ್ಯ ಇಲಾಖೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶಕ್ಕೆ 4 ಕುಮ್ಕಿ ಆನೆಗಳನ್ನು ಹಸ್ತಾಂತರಿಸಲಾಗಿದೆ. ಈ ಸಂದರ್ಭದಲ್ಲಿ ಪವನ್ ಕಲ್ಯಾಣ್ ಕನ್ನಡದಲ್ಲಿ ಭಾಷಣ ಮಾಡಿ, “ಜಯಹೇ ಕರ್ನಾಟಕ ಮಾತೆ” ಎಂದು ಆರಂಭಿಸಿ ಎಲ್ಲರ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಈಶ್ವರ್ ಖಂಡ್ರೆ, ದಿನೇಶ್ ಗುಂಡೂರಾವ್, ಕೆ.ಜೆ. ಜಾರ್ಜ್, ಬೈರತಿ ಸುರೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು. ತಮ್ಮ ಭಾಷಣದಲ್ಲಿ ಪವನ್ ಕಲ್ಯಾಣ್, “ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ” ಎಂದು ಕುವೆಂಪುರವರ ಸಾಲುಗಳನ್ನು ಉಲ್ಲೇಖಿಸಿ, ಕರ್ನಾಟಕದ ಪುಣ್ಯಭೂಮಿ ಮತ್ತು ಜನತೆಗೆ ನಮನ ಸಲ್ಲಿಸಿದರು. ಭಾಷಣದುದ್ದಕ್ಕೂ ಕನ್ನಡವನ್ನೇ ಹೆಚ್ಚಾಗಿ ಬಳಸಿ, ಕರ್ನಾಟಕದೊಂದಿಗಿನ ಬಾಂಧವ್ಯವನ್ನು ಶ್ಲಾಘಿಸಿದರು.
ಆಂಧ್ರಕ್ಕೆ ಕುಮ್ಕಿ ಆನೆ ಹಸ್ತಾಂತರ
ಪವನ್ ಕಲ್ಯಾಣ್ ತಮ್ಮ ಭಾಷಣದಲ್ಲಿ, “ಕಳೆದ ವರ್ಷ ನಾನು ಕರ್ನಾಟಕಕ್ಕೆ ಭೇಟಿ ನೀಡಿದಾಗ ಸಿಎಂ ಸಿದ್ದರಾಮಯ್ಯರೊಂದಿಗೆ ಕುಮ್ಕಿ ಆನೆಗಳ ಹಸ್ತಾಂತರದ ಬಗ್ಗೆ ಚರ್ಚಿಸಿದ್ದೆವು. ಆ ಭರವಸೆಯಂತೆ ಇಂದು ಆನೆಗಳನ್ನು ಹಸ್ತಾಂತರಿಸಿದ್ದಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಮತ್ತು ಸಚಿವ ಈಶ್ವರ್ ಖಂಡ್ರೆ ಅವರಿಗೆ ಕನ್ನಡದಲ್ಲೇ ಧನ್ಯವಾದ ಹೇಳುತ್ತೇನೆ” ಎಂದರು. ಕುಮ್ಕಿ ಆನೆಗಳ ಜೊತೆಗೆ ತರಬೇತಿ ಸೇರಿದಂತೆ ಒಪ್ಪಂದಗಳನ್ನು ಕರ್ನಾಟಕದೊಂದಿಗೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕರ್ನಾಟಕ-ಆಂಧ್ರ ಬಾಂಧವ್ಯ
ಪವನ್ ಕಲ್ಯಾಣ್, “ಸಿಎಂ ಸಿದ್ದರಾಮಯ್ಯ ರಾಜಕೀಯವಾಗಿ ಎಂದಿಗೂ ವಿಭಿನ್ನವಾಗಿ ಮಾತನಾಡಿಲ್ಲ. ರಾಜಕೀಯವಾಗಿ ನಾವು ಬೇರೆ ಕಡೆ ಇದ್ದರೂ, ಜನರ ಕಲ್ಯಾಣಕ್ಕಾಗಿ ಒಂದೇ ಎಂದಿದ್ದಾರೆ. ಕರ್ನಾಟಕ ಸಹೋದರ ರಾಜ್ಯದಂತೆ ನಮ್ಮ ಜೊತೆ ನಿಂತಿದೆ. ಕುಮ್ಕಿ ಆನೆಗಳನ್ನು ನೀಡಿದ ಕರ್ನಾಟಕ ಜನತೆಗೆ ಧನ್ಯವಾದ” ಎಂದರು. ಆನೆಗಳ ಸಂಪೂರ್ಣ ಜವಾಬ್ದಾರಿಯನ್ನು ಆಂಧ್ರಪ್ರದೇಶ ಸರ್ಕಾರ ತೆಗೆದುಕೊಳ್ಳಲಿದೆ ಎಂದು ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಭರವಸೆ ನೀಡಿದರು.
ರಕ್ತಚಂದನ ಕಳ್ಳಸಾಗಣೆಗೆ ಕಡಿವಾಣ
ರಕ್ತಚಂದನ ಕಳ್ಳಸಾಗಣೆಯಂತಹ ಅಕ್ರಮಗಳಿಗೆ ಕಡಿವಾಣ ಹಾಕುವ ಜವಾಬ್ದಾರಿಯನ್ನು ಆಂಧ್ರಪ್ರದೇಶ ಸರ್ಕಾರ ತೆಗೆದುಕೊಂಡಿದೆ ಎಂದು ಪವನ್ ಕಲ್ಯಾಣ್ ಹೇಳಿದರು. “ಈ ಕುಮ್ಕಿ ಆನೆಗಳ ಹಸ್ತಾಂತರವು ಕರ್ನಾಟಕ ಮತ್ತು ಆಂಧ್ರಪ್ರದೇಶದ ನಡುವಿನ ಬಾಂಧವ್ಯಕ್ಕೆ ಮೊದಲ ಹೆಜ್ಜೆ” ಎಂದರು. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಪರವಾಗಿಯೂ ಕರ್ನಾಟಕಕ್ಕೆ ಧನ್ಯವಾದ ಸಲ್ಲಿಸಿದರು.
ಭಾಷಣದ ಕೊನೆಯಲ್ಲಿ
ತಮ್ಮ ಭಾಷಣವನ್ನು “ಜೈ ಕರ್ನಾಟಕ, ಜೈ ಆಂಧ್ರ, ಜೈ ಭಾರತ” ಎಂದು ಕೊನೆಗೊಳಿಸಿದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್, ಕರ್ನಾಟಕದ ಜನತೆಯ ಆತಿಥ್ಯವನ್ನು ಶ್ಲಾಘಿಸಿದರು.