ಕೇರಳ: ಇತ್ತೀಚಿನ ದಿನಗಳಲ್ಲಿ ವೈವಾಹಿಕ ಜೀವನದ ಸಣ್ಣಪುಟ್ಟ ವಿಷಯಗಳಿಗೂ ಜಗಳಗಳು ಮತ್ತು ಮನಸ್ತಾಪಗಳು ಹೆಚ್ಚಾಗುತ್ತಿವೆ, ಇದರಿಂದಾಗಿ ಡಿವೋರ್ಸ್‌ಗೆ ಮೊರೆ ಹೋಗುವ ದಂಪತಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಈ ನಡುವೆ, ವಿಚ್ಛೇದಿತ ಮಹಿಳೆಯರಿಗಾಗಿ ಕೇರಳದ ಕ್ಯಾಲಿಕಟ್‌ನಲ್ಲಿ ಆಯೋಜಿಸಲಾದ ವಿಶೇಷ ಡಿವೋರ್ಸ್ ಕ್ಯಾಂಪ್ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದೆ. ಕಂಟೆಂಟ್ ಕ್ರಿಯೇಟರ್ ರಫಿಯಾ ಅಫಿ (Rafia Afi) ಆಯೋಜಿಸಿದ ಈ ಕ್ಯಾಂಪ್, ಮೊದಲ ಪ್ರಯತ್ನದಲ್ಲೇ ಭಾರೀ ಯಶಸ್ಸು ಕಂಡಿದೆ. ಈ ಕ್ಯಾಂಪ್‌ನ ವಿಡಿಯೋ cookeatburn and breakfree stories ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, 11 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದು ವೈರಲ್ ಆಗಿದೆ.
ಡಿವೋರ್ಸ್ ಕ್ಯಾಂಪ್‌ನ ವಿಶೇಷತೆ ಏನು?
ಈ ಕ್ಯಾಂಪ್ ವಿಚ್ಛೇದಿತ ಮಹಿಳೆಯರಿಗೆ ಮತ್ತು ವಿಧವೆಯರಿಗೆ ಮಾನಸಿಕ ಶಾಂತಿ ಮತ್ತು ಧೈರ್ಯವನ್ನು ನೀಡುವ ಉದ್ದೇಶದಿಂದ ಆಯೋಜಿಸಲಾಗಿದೆ. “ನಾವು ಮಕ್ಕಳಂತೆ ನಕ್ಕಿದ್ದೇವೆ, ಯೋಧರಂತೆ ಅತ್ತಿದ್ದೇವೆ, ಪರ್ವತಗಳ ಮೇಲೆ ಕಿರುಚಿದ್ದೇವೆ, ನಕ್ಷತ್ರಗಳ ಕೆಳಗೆ ಕುಣಿದಿದ್ದೇವೆ, ಅಪರಿಚಿತರೊಂದಿಗೆ ಸಹೋದರಿಯರಂತೆ ಕಥೆಗಳನ್ನು ಹಂಚಿಕೊಂಡಿದ್ದೇವೆ” ಎಂದು ವಿಡಿಯೋದ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ಕ್ಯಾಂಪ್‌ನಲ್ಲಿ ಭಾಗವಹಿಸಿದ ಮಹಿಳೆಯರು ತಮ್ಮ ನೋವು, ಅನುಭವಗಳನ್ನು ಹಂಚಿಕೊಂಡು, ಹೊಸ ಸ್ನೇಹ ಬೆಳೆಸಿಕೊಂಡು, ಹಾಡು-ಕುಣಿತ, ಪ್ರಕೃತಿಯ ಸೌಂದರ್ಯವನ್ನು ಸವಿಯುವ ಮೂಲಕ ತಮ್ಮ ಬದುಕಿಗೆ ಹೊಸ ಆಯಾಮವನ್ನು ಕಂಡುಕೊಂಡಿದ್ದಾರೆ.
ಕ್ಯಾಂಪ್‌ನ ಉದ್ದೇಶವೇನು?
ವಿಚ್ಛೇದಿತ ಮಹಿಳೆಯರಿಗೆ ಮಾನಸಿಕ ಒತ್ತಡದಿಂದ ಮುಕ್ತಿಯನ್ನು ನೀಡುವುದು, ಹೊಸ ಜನರೊಂದಿಗೆ ಸಂಪರ್ಕ ಸಾಧಿಸುವುದು, ಮತ್ತು ಜೀವನದಲ್ಲಿ ಮುಂದುವರಿಯಲು ಧೈರ್ಯವನ್ನು ಒಡ್ಡುವುದೇ ಈ ಕ್ಯಾಂಪ್‌ನ ಮುಖ್ಯ ಗುರಿಯಾಗಿದೆ. ಹಾಡು, ಕುಣಿತ, ಸಂಭಾಷಣೆ, ಮತ್ತು ಪ್ರಕೃತಿಯೊಂದಿಗೆ ಸಮಯ ಕಳೆಯುವ ಮೂಲಕ ಈ ಮಹಿಳೆಯರು ತಮ್ಮ ನೋವನ್ನು ಮರೆತು, ಸಂಭ್ರಮದಿಂದ ಬದುಕನ್ನು ಆಚರಿಸಿದ್ದಾರೆ.
ಈ ವಿಡಿಯೋಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಬ್ಬ ಬಳಕೆದಾರರು, “ವೈವಾಹಿಕ ಜೀವನದಿಂದ ನೊಂದ ಮಹಿಳೆಯರಿಗೆ ಇಂತಹ ಕ್ಯಾಂಪ್‌ಗಳು ಧೈರ್ಯದೊಂದಿಗೆ ಬದುಕನ್ನು ಸಂಭ್ರಮಿಸಲು ಕಲಿಸುತ್ತವೆ” ಎಂದಿದ್ದಾರೆ. ಇನ್ನೊಬ್ಬರು, “ರಾಜ್ಯದ ವಿವಿಧ ಭಾಗಗಳಿಂದ ಮಹಿಳೆಯರು ಭಾಗವಹಿಸಿರುವುದು ಖುಷಿಯ ವಿಚಾರ. ಇಂತಹ ಕಾರ್ಯಕ್ರಮಗಳು ಮಾನಸಿಕ ಆರೋಗ್ಯವನ್ನು ಬಲಪಡಿಸುತ್ತವೆ” ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, “ನೊಂದ ಮಹಿಳೆಯರಿಗೆ ಧೈರ್ಯವನ್ನು ನೀಡುವ ಈ ಕೆಲಸ ಮುಂದುವರಿಯಲಿ” ಎಂದು ಶ್ಲಾಘಿಸಿದ್ದಾರೆ.