ಬಿಯರ್‌ ಬಾಟಲ್‌‌ನಲ್ಲಿ ಕಾಂಡೋಮ್ ಪ್ಯಾಕೆಟ್ ಪತ್ತೆ.! ಗ್ರಾಹಕ ಶಾಕ್‌

Untitled design 2026 05 20T205214.166

ತೆಲಂಗಾಣ: ಬೇಸಿಗೆಯ ಬಿಸಿಲಿಗೆ ತಂಪಾದ ಬಿಯರ್‌‌ ಸೇವಿಸಬೇಕೆಂದುಕೊಂಡ ಗ್ರಾಹಕನೊಬ್ಬನಿಗೆ ಎದುರಾದ ಅನುಭವ ನಿಜಕ್ಕೂ ಆಘಾತ ತಂದಿದೆ. ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ವೈನ್ ಶಾಪ್‌ನಲ್ಲಿ ಖರೀದಿಸಿದ ಬೀರ್ ಬಾಟಲಿಯನ್ನು ತೆರೆದಾಗ, ಒಳಗೆ ಕಾಂಡೋಮ್ ಪ್ಯಾಕೆಟ್ ಪತ್ತೆಯಾಗಿದೆ. ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ಸಿದ್ದಿಪೇಟೆ ಜಿಲ್ಲೆಯ ಭೂಂಪಲ್ಲಿ ಪ್ರದೇಶದ ನಿವಾಸಿಯೊಬ್ಬರು ಮಂಗಳವಾರ ಸ್ಥಳೀಯ ವೈನ್ ಶಾಪ್‌ಗೆ ತೆರಳಿ ಕಿಂಗ್‌ಫಿಷರ್ ಬೀರ್ ಬಾಟಲಿಯನ್ನು ಖರೀದಿಸಿದ್ದರು. ಮನೆಗೆ ತೆರಳಿ ಬೀರ್ ಕುಡಿಯಲು ಬಾಟಲಿಯನ್ನು ತೆರೆಯುವ ವೇಳೆ ಅದರೊಳಗೆ ಏನೋ ತೇಲುತ್ತಿರುವುದು ಅವರ ಗಮನಕ್ಕೆ ಬಂದಿದೆ. ಮೊದಲಿಗೆ ಅದನ್ನು ಸಾಮಾನ್ಯ ಕಸದ ತುಂಡು ಎಂದು ಭಾವಿಸಿದ ಅವರು, ನಂತರ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅದು ಕಾಂಡೋಮ್ ಪ್ಯಾಕೆಟ್ ಆಗಿರುವುದು ತಿಳಿದುಬಂದಿದೆ.

ಈ ದೃಶ್ಯ ಕಂಡ ಗ್ರಾಹಕ ಬೆಚ್ಚಿಬಿದ್ದು ಕೂಡಲೇ ಅದೇ ವೈನ್ ಶಾಪ್‌ಗೆ ತೆರಳಿ ಅಂಗಡಿ ಮಾಲೀಕರನ್ನು ಪ್ರಶ್ನಿಸಿದ್ದಾರೆ. ಆದರೆ, ಅಂಗಡಿ ಮಾಲೀಕರು ಪ್ರತಿಕ್ರಿಯಿಸಿಲ್ಲ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಗ್ರಾಹಕ, ಬೀರ್ ಬಾಟಲಿಯ ವಿಡಿಯೋವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದೆ.

ಇದೇ ವೇಳೆ, ಈ ವೈನ್ ಶಾಪ್ ವಿರುದ್ಧ ಗ್ರಾಹಕರು ಮತ್ತೊಂದು ಗಂಭೀರ ಆರೋಪವನ್ನೂ ಮಾಡಿದ್ದಾರೆ. ಇದೇ ಅಂಗಡಿಯಿಂದ ಈ ಹಿಂದೆ ಖರೀದಿಸಿದ್ದ ಮತ್ತೊಂದು ಬೀರ್ ಬಾಟಲಿಯಲ್ಲಿ ಬೀರ್ ಬದಲಿಗೆ ಕೇವಲ ನೀರು ಮಾತ್ರ ಇತ್ತು ಎಂದು ಕೆಲವರು ಆರೋಪಿಸಿದ್ದಾರೆ.

ಪ್ರಕರಣದ ಬಗ್ಗೆ ಮಾಹಿತಿ ತಿಳಿದ ಕೂಡಲೇ ಅಬಕಾರಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಟಲಿಯೊಳಗೆ ಕಾಂಡೋಮ್ ಪ್ಯಾಕೆಟ್ ಹೇಗೆ ಸೇರಿತು ಎಂಬುದರ ಕುರಿತು ತನಿಖೆ ಆರಂಭಿಸಲಾಗಿದೆ. ಉತ್ಪಾದನಾ ಘಟಕದಲ್ಲಿನ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದ್ದೇ ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ಬಾಟಲಿಯಲ್ಲಿ ವಸ್ತುವನ್ನು ಹಾಕಿದ್ದಾರೆಯೇ ಎಂದು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಕುರಿತು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ನಾವು ಕುಡಿಯುತ್ತಿರುವ ಪಾನೀಯಗಳು ಸುರಕ್ಷಿತವೇ?” ಎಂಬ ಪ್ರಶ್ನೆಯನ್ನು ಜನರು ಕೇಳುತ್ತಿದ್ದಾರೆ. ಕೆಲವರು ಕಂಪನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇನ್ನೂ ಕೆಲವರು ಮದ್ಯ ಉತ್ಪಾದನಾ ಘಟಕಗಳ ಮೇಲಿನ ನಿಯಂತ್ರಣವನ್ನು ಸರ್ಕಾರ ಮತ್ತಷ್ಟು ಬಿಗಿಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

Exit mobile version