ಬೆಂಗಳೂರಿಗರ ಗಮನಕ್ಕೆ: ನಾಳೆ ಈ ರಸ್ತೆಗಳಲ್ಲಿ ವಾಹನ ಸಂಚಾರ, ಪಾರ್ಕಿಂಗ್ ನಿಷೇಧ, ಇಲ್ಲಿದೆ ಪರ್ಯಾಯ ಮಾರ್ಗ

Untitled design 2026 05 20T223513.934

ಬೆಂಗಳೂರು, ಮೇ 20: NEET UG ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಭಾರತೀಯ ಯುವ ಕಾಂಗ್ರೆಸ್ ಮೇ 21ರಂದು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಕರೆ ನೀಡಿದೆ. ಈ ಹಿನ್ನೆಲೆ ನಗರದ ಈ ಭಾಗದಲ್ಲಿ ಭಾರೀ ಟ್ರಾಫಿಕ್ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಸಂಚಾರಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಹಲವು ರಸ್ತೆಗಳಲ್ಲಿ ವಾಹನ ಸಂಚಾರ ಹಾಗೂ ಪಾರ್ಕಿಂಗ್‌ಗೆ ತಾತ್ಕಾಲಿಕ ನಿರ್ಬಂಧ ಹೇರಿದ್ದಾರೆ.

ನಾಳೆ ಬೆಳಗ್ಗೆ 7.30ರಿಂದ ಸಂಜೆ 4 ಗಂಟೆಯವರೆಗೆ ಫ್ರೀಡಂಪಾರ್ಕ್ ಸುತ್ತಮುತ್ತ ವಾಹನ ಸಂಚಾರ ಮಾರ್ಗ ಬದಲಾವಣೆ ಜಾರಿಯಲ್ಲಿರಲಿದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಪ್ರಕಟಣೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದ್ದು, ಸಾರ್ವಜನಿಕರು ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಮನವಿ ಮಾಡಲಾಗಿದೆ.

NEET ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ನಾಲ್ವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆ ಯುವ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಆಯೋಜಿಸಿದೆ. ಪ್ರತಿಭಟನೆಗೆ ರಾಜ್ಯದ ವಿವಿಧ ಭಾಗಗಳಿಂದ ಕಾರ್ಯಕರ್ತರು ಆಗಮಿಸಲಿದ್ದು, ಫ್ರೀಡಂಪಾರ್ಕ್ ಪ್ರದೇಶದಲ್ಲಿ ಹೆಚ್ಚಿನ ಜನಸಂದಣಿ ಉಂಟಾಗುವ ಸಾಧ್ಯತೆ ಇದೆ.

ಯಾವ ರಸ್ತೆಗಳಲ್ಲಿ ಸಂಚಾರ ನಿರ್ಬಂಧ?

ಫ್ರೀಡಂಪಾರ್ಕ್ ಜಂಕ್ಷನ್‌ನಿಂದ ಕನಕದಾಸ ವೃತ್ತದ ಕಡೆಗೆ ಬರುವ ಹಾಗೂ ಹೋಗುವ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಇದರಿಂದಾಗಿ ಕೆ.ಜಿ.ರಸ್ತೆ ಮೂಲಕ ಮೈಸೂರು ಬ್ಯಾಂಕ್ ವೃತ್ತದಿಂದ ಫ್ರೀಡಂಪಾರ್ಕ್ ಕಡೆಗೆ ಬರುವ ವಾಹನಗಳು ಕಡ್ಡಾಯವಾಗಿ ಅರಮನೆ ರಸ್ತೆ ಹಾಗೂ ಮಹಾರಾಣಿ ಅಂಡರ್‌ಪಾಸ್ ಮಾರ್ಗವನ್ನು ಬಳಸಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.

ಇದೇ ವೇಳೆ ಪ್ರತಿಭಟನೆಕಾರರು ರೈಲು ನಿಲ್ದಾಣ ಭಾಗದಿಂದ ಫ್ಲೈಓವರ್ ರಸ್ತೆಯ ಮೂಲಕ ಕಾಲ್ನಡಿಗೆಯಲ್ಲಿ ಫ್ರೀಡಂಪಾರ್ಕ್‌ಗೆ ಆಗಮಿಸಲಿರುವ ಹಿನ್ನೆಲೆ ಖೋಡೆ ಜಂಕ್ಷನ್‌ನಿಂದ ಕೆ.ಆರ್. ಸರ್ಕಲ್ ಕಡೆಗೆ ಸಾಗುವ ವಾಹನಗಳಿಗೆ ವಿಶೇಷ ಡೈವರ್ಷನ್ ವ್ಯವಸ್ಥೆ ಮಾಡಲಾಗಿದೆ. ವಾಹನ ಸವಾರರು ಹಳೇ ಜೆಡಿಎಸ್ ಕಚೇರಿ ರಸ್ತೆಯನ್ನು ಬಳಸುವಂತೆ ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.

ದ್ವಿಮುಖ ಸಂಚಾರಕ್ಕೆ ಅವಕಾಶ

ಸುಬ್ಬಣ್ಣ ಜಂಕ್ಷನ್‌ನಿಂದ ಎಂಟಿಆರ್ ಜಂಕ್ಷನ್ ಕಡೆಗೆ ತಾತ್ಕಾಲಿಕವಾಗಿ ದ್ವಿಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಗಾಂಧಿನಗರ ಹಾಗೂ ಸುತ್ತಮುತ್ತ ಪ್ರದೇಶಗಳಿಗೆ ತೆರಳುವ ವಾಹನ ಸವಾರರು ಈ ಮಾರ್ಗವನ್ನು ಬಳಸಬಹುದು. ಇದರಿಂದ ಪ್ರಮುಖ ರಸ್ತೆಗಳ ಮೇಲಿನ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಸಹಾಯವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ರಸ್ತೆಗಳಲ್ಲಿ ಪಾರ್ಕಿಂಗ್ ಸಂಪೂರ್ಣ ನಿಷೇಧ

ಪ್ರತಿಭಟನೆ ಹಿನ್ನೆಲೆ ಕೆಲವು ಪ್ರಮುಖ ರಸ್ತೆಗಳಲ್ಲಿ ವಾಹನ ಪಾರ್ಕಿಂಗ್‌ಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಖೋಡೆ ಜಂಕ್ಷನ್‌ನಿಂದ ಮಹಾರಾಣಿ ಜಂಕ್ಷನ್‌ವರೆಗೆ, ವೈ.ರಾಮಚಂದ್ರ ರಸ್ತೆ, ಕಾಳಿದಾಸ ರಸ್ತೆ, ಅರಮನೆ ರಸ್ತೆ ಹಾಗೂ ಕೆ.ಜಿ.ರಸ್ತೆಯಲ್ಲಿ ಯಾವುದೇ ರೀತಿಯ ವಾಹನ ನಿಲುಗಡೆಗೆ ಅವಕಾಶ ಇರುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ನಿಯಮ ಉಲ್ಲಂಘಿಸಿ ವಾಹನಗಳನ್ನು ಪಾರ್ಕ್ ಮಾಡಿದರೆ ಟೋಯಿಂಗ್ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಸಾರ್ವಜನಿಕರಿಗೆ ಟ್ರಾಫಿಕ್ ಪೊಲೀಸರ ಮನವಿ

ನಗರದ ಹೃದಯಭಾಗದಲ್ಲಿ ಪ್ರತಿಭಟನೆ ನಡೆಯುತ್ತಿರುವುದರಿಂದ ಕಚೇರಿ ಸಮಯದಲ್ಲಿ ಭಾರೀ ಟ್ರಾಫಿಕ್ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ವಾಹನ ಸವಾರರು ಪ್ರಯಾಣಕ್ಕೂ ಮೊದಲು ಟ್ರಾಫಿಕ್ ಅಪ್‌ಡೇಟ್ ಪರಿಶೀಲಿಸಿ ಪರ್ಯಾಯ ಮಾರ್ಗಗಳನ್ನು ಬಳಸುವುದು ಒಳಿತು ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ಸಲಹೆ ನೀಡಿದ್ದಾರೆ.

ಅಗತ್ಯವಿಲ್ಲದಿದ್ದರೆ ಫ್ರೀಡಂಪಾರ್ಕ್, ಕೆ.ಆರ್.ಸರ್ಕಲ್, ಗಾಂಧಿನಗರ, ಮೈಸೂರು ಬ್ಯಾಂಕ್ ವೃತ್ತ ಹಾಗೂ ಸುತ್ತಮುತ್ತ ಪ್ರದೇಶಗಳಿಗೆ ಭೇಟಿ ನೀಡುವುದನ್ನು ತಪ್ಪಿಸುವಂತೆ ಸೂಚಿಸಲಾಗಿದೆ. ಸಾರ್ವಜನಿಕರ ಸಹಕಾರದಿಂದ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version