ಹಾಸನ (ಜುಲೈ 14): ರಾಜ್ಯದಲ್ಲಿ ಬೀದಿ ನಾಯಿಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೀದಿ ನಾಯಿಗಳ ಕಾಟಕ್ಕೆ ಜನ ರಸ್ತೆಯಲ್ಲಿ ಓಡಾಡಲು ಭಯಪಡುವಂತಹ ವಾತಾವರಣ ನಿರ್ಮಾಣವಾಗಿದೆ. ಇದರ ನಡುವೆ ಈಗ ಹುಚ್ಚು ನಾಯಿಗಳ ಭೀತಿ ಶುರುವಾಗಿದೆ. ಹುಚ್ಚು ನಾಯಿಯ ದಾಳಿಗೆ ಬಾಲಕ ಗಂಭೀರ ಗಾಯಗೊಂಡಿದ್ದಾನೆ. ಹೌದು.. ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಚಿಕ್ಕಬೊಮ್ಮನಹಳ್ಳಿ ಗ್ರಾಮದಲ್ಲಿ ಮನೆ ಮುಂದೆ ಆಟವಾಡುತ್ತಿದ್ದ 8 ವರ್ಷದ ಬಾಲಕನ ಮೇಲೆ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಗಾಯಗೊಂಡ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗೆ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
- 8 ವರ್ಷದ ಬಾಲಕನ ಮೇಲೆ ಹುಚ್ಚುನಾಯಿ ದಾಳಿ
- ತಲೆ ಮತ್ತು ಮುಖಕ್ಕೆ ಗಂಭೀರ ಗಾಯ.
- ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಕೆ
- ಗ್ರಾಮದಲ್ಲಿ ಜನರು ಹಾಗೂ ಜಾನುವಾರುಗಳ ಮೇಲೂ ಹುಚ್ಚುನಾಯಿ ದಾಳಿ ಆರೋಪ
- ತಕ್ಷಣ ಕ್ರಮಕ್ಕೆ ಗ್ರಾಮಸ್ಥರ ಒತ್ತಾಯ
ಗಾಯಗೊಂಡಿರುವ ಬಾಲಕನನ್ನು ಗುಣಗೌಡ (8) ಎಂದು ಗುರುತಿಸಲಾಗಿದೆ. ಆತ ಮೂಲತಃ ಅರಕಲಗೂಡು ತಾಲೂಕಿನ ಕರ್ತಾಳು ಗ್ರಾಮದ ನಿವಾಸಿಯಾಗಿದ್ದು, ಚಿಕ್ಕಬೊಮ್ಮನಹಳ್ಳಿಯಲ್ಲಿರುವ ತನ್ನ ಅಜ್ಜಿಯ ಮನೆಗೆ ಬಂದಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ಏಕಾಏಕಿ ಬಂದ ಹುಚ್ಚುನಾಯಿ ಬಾಲಕನ ಮೇಲೆ ಎರಗಿದೆ. ದಾಳಿಯ ವೇಳೆ ಬಾಲಕನ ತಲೆ ಹಾಗೂ ಮುಖಕ್ಕೆ ತೀವ್ರವಾಗಿ ಕಚ್ಚಿದ್ದು, ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಸ್ಥಳೀಯರು ಕೂಡಲೇ ಬಾಲಕನನ್ನು ರಕ್ಷಿಸಿ ಕೊಣನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದರು. ಬಳಿಕ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಬಾಲಕನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಗ್ರಾಮದಲ್ಲಿ ಇದೇ ಹುಚ್ಚುನಾಯಿ ಜನರು ಮತ್ತು ಜಾನುವಾರುಗಳ ಮೇಲೂ ದಾಳಿ ನಡೆಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಗ್ರಾಮಸ್ಥರು ಭಯಭೀತರಾಗಿದ್ದು, ಮಕ್ಕಳು ಹೊರಗೆ ಆಟವಾಡಲು ಸಹ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮಸ್ಥರು ತಕ್ಷಣವೇ ಅರಣ್ಯ ಇಲಾಖೆ, ಪಶುಸಂಗೋಪನಾ ಇಲಾಖೆ ಹಾಗೂ ಸ್ಥಳೀಯ ಆಡಳಿತವು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಹುಚ್ಚುನಾಯಿಯನ್ನು ಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ. ಜೊತೆಗೆ ಗ್ರಾಮದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಇಂತಹ ಘಟನೆಗಳು ಮರುಕಳಿಸದಂತೆ ಕ್ರಮವಹಿಸುವಂತೆ ಆಗ್ರಹಿಸಿದ್ದಾರೆ.
