ಹಾಸನ (ಜುಲೈ 14): ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಒಸ್ಸೂರು ಎಸ್ಟೇಟ್‌ನಲ್ಲಿ ಜನರ ಪ್ರೀತಿಗೆ ಪಾತ್ರವಾಗಿರುವ ಕಾಡಾನೆ ಭೀಮನ ಮೇಲೆ ಕಲ್ಲು ತೂರಿ ಕಿರುಕುಳ ನೀಡಿದ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯರು ಹಾಗೂ ಪ್ರಾಣಿ ಪ್ರಿಯರು ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಒಸ್ಸೂರು ಎಸ್ಟೇಟ್‌ನಲ್ಲಿ ಕೆಲಸ ನಿರ್ವಹಿಸಲು ಅಸ್ಸಾಂ ಮೂಲದವರಾಗಿರುವುದಾಗಿ ಹೇಳಿಕೊಳ್ಳುವ ಕೆಲವು ಕಾರ್ಮಿಕರು ತಂಗಿದ್ದು, ಅವರಿಗೆ ಎಸ್ಟೇಟ್ ಮಾಲೀಕರು ಲೈನ್ ಮನೆಗಳನ್ನು ಒದಗಿಸಿದ್ದಾರೆ. ಇಂದು ಮಂಗಳವಾರ ಬೆಳಿಗ್ಗೆ ಕಾರ್ಮಿಕರ ಮನೆಗಳ ಮುಂಭಾಗದ ರಸ್ತೆಯಲ್ಲಿ ಕಾಡಾನೆ ಭೀಮ ತನ್ನ ಪಾಡಿಗೆ ತಾನು ನಿಧಾನವಾಗಿ ಸಾಗುತ್ತಿತ್ತು.
ಈ ವೇಳೆ ಅಲ್ಲಿದ್ದ ಒಬ್ಬ ಕಾರ್ಮಿಕ ಕಾಡಾನೆಯತ್ತ ಪದೇಪದೇ ಕಲ್ಲು ತೂರಿ ಕೆಣಕಿದ ಎನ್ನಲಾಗಿದೆ. ಯಾವುದೇ ತೊಂದರೆ ನೀಡದೆ ತನ್ನ ದಾರಿಯಲ್ಲಿ ಸಾಗುತ್ತಿದ್ದ ಭೀಮನನ್ನು ಉದ್ದೇಶಪೂರ್ವಕವಾಗಿ ಕಿರಿಕಿರಿ ಮಾಡಿದ ಪರಿಣಾಮ, ಆನೆ ಘೀಳಿಟ್ಟು ಅಲ್ಲಿಂದ ಓಡಿ ಹೋಗಿದೆ. ಘಟನೆಯ ದೃಶ್ಯಗಳು ಸ್ಥಳೀಯರಲ್ಲಿ ಆತಂಕ ಮತ್ತು ಆಕ್ರೋಶ ಮೂಡಿಸಿವೆ.
ಮಲೆನಾಡು ಭಾಗದ ಜನರಿಗೆ ಪರಿಚಿತವಾಗಿರುವ ಕಾಡಾನೆ ಭೀಮ ಸಾಮಾನ್ಯವಾಗಿ ಶಾಂತ ಸ್ವಭಾವದ ಪ್ರಾಣಿಯೆಂದು ಸ್ಥಳೀಯರು ಹೇಳುತ್ತಾರೆ. ಜನವಸತಿ ಪ್ರದೇಶದ ಸಮೀಪ ಕಾಣಿಸಿಕೊಂಡರೂ ಯಾರಿಗೂ ತೊಂದರೆ ನೀಡದ ಈ ಆನೆಯನ್ನು ಕಲ್ಲು ತೂರಿ ಹಿಂಸಿಸಿರುವುದು ಖಂಡನೀಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಾಣಿ ಪ್ರಿಯರು ಹಾಗೂ ಸ್ಥಳೀಯ ನಿವಾಸಿಗಳು, ವನ್ಯಜೀವಿಗಳೊಂದಿಗೆ ಮಾನವೀಯವಾಗಿ ವರ್ತಿಸಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಒತ್ತಿಹೇಳಿದ್ದಾರೆ. ವನ್ಯಜೀವಿಗಳನ್ನು ಕೆಣಕುವುದು ಅಥವಾ ಹಿಂಸಿಸುವುದು ಅಪಾಯಕಾರಿಯಾಗಿದ್ದು, ಇಂತಹ ಕೃತ್ಯಗಳು ಮಾನವ-ಆನೆ ಸಂಘರ್ಷಕ್ಕೂ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ತನಿಖೆ ನಡೆಸಿ, ಕಾಡಾನೆಗೆ ಕಿರುಕುಳ ನೀಡಿದ ವ್ಯಕ್ತಿಯನ್ನು ಗುರುತಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಹೆಚ್ಚಾಗಿದೆ.
ಇನ್ನೊಂದು ಘಟನೆಯಲ್ಲಿ ಜಿಲ್ಲೆಯ ಬೇಲೂರು ತಾಲೂಕಿನ ದೊಲಮನೆ ಗ್ರಾಮದ ಸಮೀಪ ಒಂಟಿ ಕಾಡಾನೆ ಮನೆ ಅಂಗಳದವರೆಗೆ ಬಂದು ಕೆಲಕಾಲ ನಿಂತು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಕಾಡಾನೆ ಮನೆ ಸಮೀಪ ಸಂಚರಿಸಿದ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಹಿಡಿಯಲ್ಪಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮಾಹಿತಿಯ ಪ್ರಕಾರ, ಕಾಡಾನೆ ಮೊದಲು ಮನೆಯ ಮುಂಭಾಗದಲ್ಲಿದ್ದ ಬಾಳೆಗಿಡಗಳನ್ನು ತಿಂದು ನಂತರ ನಿಧಾನವಾಗಿ ಮನೆ ಸಮೀಪಕ್ಕೆ ಬಂದಿದೆ. ಕೆಲಕಾಲ ಮನೆಯ ಅಂಗಳದ ಬಳಿ ನಿಂತಿದ್ದ ಸಲಗ ಬಳಿಕ ಯಾವುದೇ ಅಹಿತಕರ ಘಟನೆ ನಡೆಸದೇ ಅಲ್ಲಿಂದ ಮುಂದೆ ಸಾಗಿದೆ. ಕಾಡಾನೆಯನ್ನು ಕಂಡ ಮನೆಯವರು ಭಯಭೀತರಾಗಿ ಮನೆಯೊಳಗೇ ಆಶ್ರಯ ಪಡೆದಿದ್ದಾರೆ.
ಮಲೆನಾಡು ಭಾಗದಲ್ಲಿ ಹೆಚ್ಚುತ್ತಿರುವ ಮಾನವ–ಕಾಡಾನೆ ಸಂಘರ್ಷವನ್ನು ತಡೆಯಲು ಅರಣ್ಯ ಇಲಾಖೆ ಹಾಗೂ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಗ್ರಾಮಸ್ಥರಿಂದ ಕೇಳಿಬಂದಿದೆ.
