ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಯ್ತು ಪುಡಿ ರೌಡಿಗಳ ಹಾವಳಿ: ಸಿಕ್ಕಸಿಕ್ಕವರ ಮೇಲೆ ಹಲ್ಲೆ

Untitled design 2026 05 20T224600.883

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರೌಡಿಶೀಟರ್‌ಗಳ ಅಟ್ಟಹಾಸ ದಿನೇದಿನೇ ಹೆಚ್ಚುತ್ತಿದ್ದು, ಸಾರ್ವಜನಿಕರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ನಗರದ ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಪಾರ್ವತಿಪುರ ಪ್ರದೇಶದಲ್ಲಿ ರೌಡಿಶೀಟರ್ ಹಾಗೂ ಆತನ ಸಹಚರರು ಕುಡಿದ ಅಮಲಿನಲ್ಲಿ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿ, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಬೈಕ್‌ಗಳನ್ನು ಜಖಂಗೊಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

ವಿವಿ ಪುರಂ ನಿವಾಸಿಯಾಗಿರುವ ರೌಡಿಶೀಟರ್ ಅಭಿ ಅಲಿಯಾಸ್ ‘ಅಭಿ ಪಾಂಡು’ ಈ ಕೃತ್ಯದ ಪ್ರಮುಖ ಸೂತ್ರಧಾರ ಎನ್ನಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳಲು ಮತ್ತು ಸ್ಥಳೀಯರಲ್ಲಿ ಭಯದ ಭೀತಿ ಹುಟ್ಟಿಸಲು ಈತ ತನ್ನ ಗ್ಯಾಂಗ್‌ನೊಂದಿಗೆ ನಿರಂತರವಾಗಿ ಗಲಾಟೆ ಸೃಷ್ಟಿಸುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಘಟನೆ ಇಂದು ಮುಂಜಾನೆ ಸುಮಾರು 4 ಗಂಟೆ ವೇಳೆಗೆ ನಡೆದಿದ್ದು, ಕುಡಿದ ಅಮಲಿನಲ್ಲಿದ್ದ ಮೂವರು-ನಾಲ್ವರು ಯುವಕರು ಸಿಕ್ಕಸಿಕ್ಕವರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ರಸ್ತೆ ಮೂಲಕ ಸಂಚರಿಸುತ್ತಿದ್ದ ಅಮಾಯಕರು, ಕೂಲಿ ಕಾರ್ಮಿಕರು ಹಾಗೂ ಸ್ಥಳೀಯ ಯುವಕರೇ ಈ ಗ್ಯಾಂಗ್‌ನ ದೌರ್ಜನ್ಯಕ್ಕೆ ಗುರಿಯಾಗಿದ್ದಾರೆ. ಅಲ್ಲದೆ, ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲಾಗಿದ್ದ ಹಲವು ದ್ವಿಚಕ್ರ ವಾಹನಗಳನ್ನು ಕಲ್ಲು ಹಾಗೂ ಇತರೆ ವಸ್ತುಗಳಿಂದ ಹೊಡೆದು ಜಖಂಗೊಳಿಸಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.

ವಿವಿ ಪುರಂ ಮಾರುಕಟ್ಟೆ ಪ್ರದೇಶದಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿರುವ ವ್ಯಾಪಾರಿಗಳು ಈ ರೌಡಿ ಗ್ಯಾಂಗ್‌ನಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ವ್ಯಾಪಾರಿಗಳಿಂದ ಹಣ ವಸೂಲಿ ಮಾಡುವುದು, ಹಣ ನೀಡದಿದ್ದರೆ ಬೆದರಿಕೆ ಹಾಕುವುದು ಮತ್ತು ಹಲ್ಲೆ ನಡೆಸುವುದು ಸಾಮಾನ್ಯವಾಗಿದೆ ಎಂದು ಆರೋಪಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕೆಲ ಯುವಕರು ಬೈಕ್‌ಗಳನ್ನು ಧ್ವಂಸ ಮಾಡುತ್ತಿರುವುದು ಹಾಗೂ ಸಾರ್ವಜನಿಕರನ್ನು ಓಡಾಡದಂತೆ ಬೆದರಿಸುತ್ತಿರುವ ದೃಶ್ಯಗಳು ಕಾಣಿಸುತ್ತಿವೆ. ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಎಚ್ಚೆತ್ತುಕೊಂಡಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

Exit mobile version