ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ನಾಗರ ಪಂಚಮಿ ಹಬ್ಬದ ದಿನವೇ ಒಂದು ಘೋರ ದುರಂತ ಘಟನೆ ನಡೆದಿದೆ. ವಿಷಕಾರಿ ಕೊಳಕುಮಂಡಲ ಹಾವು ಕಚ್ಚಿ ಮಹಿಳೆಯೋರ್ವರು ಮೃತಪಟ್ಟಿರುವ ಘಟನೆ ಸಂಭವಿಸಿದೆ.
ಮೃತ ಮಹಿಳೆಯನ್ನು ಸತ್ಯವ್ವ ಶಿಂಗೆ (43) ಎಂದು ಗುರುತಿಸಲಾಗಿದೆ. ಇವರು ರಾಯಬಾಗ ಪಟ್ಟಣದ ಹೊರವಲಯದಲ್ಲಿರುವ ತಮ್ಮ ಜಮೀನಿನಲ್ಲಿ ಕಸ ತೆಗೆಯುವ ಕೆಲಸದಲ್ಲಿ ತೊಡಗಿದ್ದರು. ಸೋಮವಾರ ಮುಂಜಾನೆ ಕುಟುಂಬದ ಜೊತೆಗೆ ಕೆಲಸಕ್ಕೆ ಹೋಗಿದ್ದ ಸತ್ಯವ್ವ ಅವರು, ಗಿಡಗಂಟಿಗಳ ನಡುವೆ ಕೈ ಹಾಕುತ್ತಿದ್ದಂತೆಯೇ ಅಲ್ಲಿ ಅಡಗಿದ್ದ ವಿಷಕಾರಿ ಕೊಳಕುಮಂಡಲ ಹಾವು ಅವರ ಎಡಗೈಗೆ ತೀವ್ರವಾಗಿ ಕಚ್ಚಿದೆ.
ಹಾವು ಕಚ್ಚಿದ ತಕ್ಷಣವೇ ಸತ್ಯವ್ವ ಅವರು ಅಸ್ವಸ್ಥಗೊಂಡರು. ಅವರ ಕುಟುಂಬಸ್ಥರು ತಕ್ಷಣವೇ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆದರೆ, ವಿಷದ ಪ್ರಮಾಣ ಅತಿಯಾಗಿದ್ದು, ಅಲ್ಲಿನ ವೈದ್ಯರು ತಕ್ಷಣವೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಬಾಗದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲು ಹೇಳಿದರು. ಆದರೆ, ದುರಾದೃಷ್ಟವಶಾತ್, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಸತ್ಯವ್ವ ಅವರು ಕೊನೆಯುಸಿರೆಳೆದರು. ಹೀಗಾಗಿ ನಾಗರ ಪಂಚಮಿ ಹಬ್ಬದ ದಿನವೇ ಕುಟುಂಬದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.
ಶಾಲಾ ಆವರಣದಲ್ಲಿ ವಿದ್ಯಾರ್ಥಿನಿಗೆ ಕಚ್ಚಿದ ಹಾವು: ವಿಷ ತೆಗೆದು ಪ್ರಾಣ ಉಳಿಸಿದ ಶಿಕ್ಷಕ
ಚಿತ್ರದುರ್ಗ: ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ವಿದ್ಯಾರ್ಥಿನಿಗೆ ನಾಗರಹಾವು ಕಚ್ಚಿದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ತಕ್ಷಣ ಶಿಕ್ಷಕೊಬ್ಬರು ಸಮಯಪ್ರಜ್ಞೆಯಿಂದ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಬಾಲಕಿಯ ಜೀವ ಉಳಿಸಿದ್ದಾರೆ.
ಈ ಘಟನೆ ಚಿತ್ರದುರ್ಗ ತಾಲೂಕಿನ ಹುಣಸೆಕಟ್ಟೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಎಂದಿನಂತೆ ಮುಂಜಾನೆ ವೇಳೆ ವಿದ್ಯಾರ್ಥಿನಿ ಸೃಷ್ಠಿ ಶಾಲಾ ಆವರಣದಲ್ಲಿ ಆಟವಾಡುತ್ತಿದ್ದಳು. ಈ ವೇಳೆ ಅಚಾನಕ್ ವಿಷಕಾರಿ ನಾಗರಹಾವು ಬಾಲಕಿಗೆ ಕಚ್ಚಿದೆ. ಹಾವು ಕಚ್ಚಿದ ಕ್ಷಣದಲ್ಲೇ ಬಾಲಕಿ ತೀವ್ರ ನೋವಿನಿಂದ ಅಳುತ್ತಾ ಚೀರಾಡಲು ಆರಂಭಿಸಿದ್ದಾಳೆ.
ಬಾಲಕಿಯ ಕಿರುಚಾಟ ಕೇಳಿ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಬಾಲಕಿಯ ಕಾಲಿನಲ್ಲಿ ಹಾವು ಕಚ್ಚಿದ ಗುರುತು ಕಂಡು ಬಂದಿದೆ. ಈ ವೇಳೆ ಶಾಲೆಯ ಶಿಕ್ಷಕ ರವಿಶಂಕರ್ ಅವರು ಬಾಲಕಿಗೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಲು ಮುಂದಾದರು. ಹಾವು ಕಚ್ಚಿದ ಭಾಗವನ್ನು ಬಾಯಿಯಿಂದ ಹೀರಿಕೊಂಡು ವಿಷವನ್ನು ಹೊರತೆಗೆದು ಬಾಲಕಿಯ ಪ್ರಾಣ ಉಳಿಸಿದ್ದಾರೆ.
ನಂತರ ಬಾಲಕಿಯನ್ನು ತಕ್ಷಣ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ವೈದ್ಯರು ಬಾಲಕಿಗೆ ತಕ್ಷಣ ಚಿಕಿತ್ಸೆ ನೀಡಿದ್ದು, ಸದ್ಯ ಆಕೆ ಆರೋಗ್ಯವಾಗಿದ್ದು ಅಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನೊಂದೆಡೆ, ವಿಷವನ್ನು ಬಾಯಿಯಿಂದ ಹೀರಿಕೊಂಡ ಕಾರಣ ಶಿಕ್ಷಕ ರವಿಶಂಕರ್ ಅವರಿಗೂ ಅಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ ಅವರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ವೈದ್ಯರು ಮುಂಜಾಗ್ರತಾ ಕ್ರಮವಾಗಿ ಅವರಿಗೆ ಚಿಕಿತ್ಸೆ ನೀಡಿದ್ದು, ಅವರ ಆರೋಗ್ಯವೂ ಈಗ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.





