ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಮನಕಲಕುವ ಘಟನೆೊಂದು ಬೆಳಕಿಗೆ ಬಂದಿದೆ. ರಾಜ್ಯಾದ್ಯಂತ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಆರಂಭವಾಗಿರುವ ಹಿನ್ನೆಲೆ ಲಕ್ಷಾಂತರ ವಿದ್ಯಾರ್ಥಿಗಳು ಉತ್ಸಾಹದಿಂದ ಪರೀಕ್ಷಾ ಕೇಂದ್ರಗಳಿಗೆ ಆಗಮಿಸುತ್ತಿದ್ದರೆ, ಇಲ್ಲಿ ಮಾತ್ರ ವಿದ್ಯಾರ್ಥಿನಿಯೊಬ್ಬಳು ಶುಲ್ಕ ಬಾಕಿ ಕಾರಣದಿಂದ ಪರೀಕ್ಷೆ ಬರೆಯಲು ಸಾಧ್ಯವಾಗದೆ ಕಣ್ಣೀರು ಹಾಕುವಂತಾಗಿದೆ.
ರಾಣೆಬೆನ್ನೂರಿನ BAGSS ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಸಾರಾ ಜೆಸ್ಸಿಕಾ ಎಂಬ ವಿದ್ಯಾರ್ಥಿನಿ ಈ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾಲೇಜಿಗೆ ಸುಮಾರು 30,000 ರೂ. ಶುಲ್ಕ ಬಾಕಿ ಉಳಿದಿತ್ತು. ಶನಿವಾರ ನಡೆದ ಕನ್ನಡ ಭಾಷಾ ಪರೀಕ್ಷೆ ಬರೆಯಲು ಸಾರಾ ಬೆಳಗ್ಗೆಯೇ ಕಾಲೇಜಿಗೆ ಆಗಮಿಸಿದ್ದರು. ಆದರೆ, ಶುಲ್ಕ ಪಾವತಿಸಿಲ್ಲ ಎಂಬ ಕಾರಣ ನೀಡಿ ಕಾಲೇಜು ಆಡಳಿತ ಮಂಡಳಿ ಹಾಲ್ ಟಿಕೆಟ್ ನೀಡಲು ನಿರಾಕರಿಸಿದೆ.
ಪರೀಕ್ಷಾ ಕೊಠಡಿಯೊಳಗೆ ಪ್ರವೇಶಿಸಲು ಸಾಧ್ಯವಾಗದೇ ವಿದ್ಯಾರ್ಥಿನಿ ಹೊರಗೇ ನಿಂತು ಅಳುವಂತಾಯಿತು. ಘಟನೆಗೆ ಸಂಬಂಧಿಸಿದಂತೆ ಕಾಲೇಜಿನ ಸಿಬ್ಬಂದಿ ಸುನೀತಾ ಬಿ. ಅವರು ಸಾರಾಳನ್ನು ತಡೆದಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಸಾಮಾಜಿಕ ಹೋರಾಟಗಾರ ಹನುಮಂತಪ್ಪ, ವಿದ್ಯಾರ್ಥಿನಿಯ ಭವಿಷ್ಯವನ್ನು ಮನಗಂಡು ತಕ್ಷಣ ಹಾಲ್ ಟಿಕೆಟ್ ನೀಡುವಂತೆ ಆಗ್ರಹಿಸಿದರು. ಈ ವೇಳೆ ಸುನೀತಾ ಬಿ. ಮತ್ತು ಹೋರಾಟಗಾರರ ನಡುವೆ ತೀವ್ರ ವಾಗ್ವಾದ ನಡೆಯಿತು.
“ಎಲ್ಲಾ ಕಾಲೇಜಿನವರು ಪುಕ್ಕಟೆ ಕಲಿಸ್ತಾರಾ?” ಎಂದು ಸುನೀತಾ ಪ್ರಶ್ನಿಸಿದರು. ಇದರಿಂದ ಆಕ್ರೋಶಗೊಂಡ ಹನುಮಂತಪ್ಪ, “ಕೇವಲ ಹಣಕ್ಕಾಗಿ ವಿದ್ಯಾರ್ಥಿನಿಯ ಭವಿಷ್ಯ ಹಾಳು ಮಾಡುತ್ತಿದ್ದೀರಿ. ಪರೀಕ್ಷೆ ಬರೆಯಲು ಅವಕಾಶ ಕೊಡದೆ ತಡೆದು ನಿಲ್ಲಿಸುವುದು ಅನ್ಯಾಯ” ಎಂದು ಕಿಡಿಕಾರಿದರು.
ನಂತರ ಮಧ್ಯಸ್ಥಿಕೆ ವಹಿಸಲು ಬಂದವರ ಬೈಕ್ ಅನ್ನು ಕಾಲೇಜು ಆಡಳಿತ ಮಂಡಳಿ ಅಡಮಾನ ಇಟ್ಟುಕೊಂಡಿರುವ ಆರೋಪ ಕೇಳಿಬಂದಿದೆ. “ಶುಲ್ಕ ಕೊಡುತ್ತೇವೆ” ಎಂದು ಭರವಸೆ ನೀಡಿದ ನಂತರವೂ ಬೈಕ್ ಅಡಮಾನವಾಗಿ ಇಟ್ಟುಕೊಂಡು, ನಂತರವೇ ಹಾಲ್ ಟಿಕೆಟ್ ನೀಡಲಾಗಿದೆ ಎನ್ನಲಾಗಿದೆ.





