ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯಿಂದ ಜನರು ಬೇಸತ್ತು ಹೋಗಿದ್ದಾರೆ. ಆಸ್ಪತ್ರೆಗಳಿಗೆ ಹೋಗುವುದು, ವೈದ್ಯರನ್ನು ಭೇಟಿಯಾಗುವುದು ಅಥವಾ ತಕ್ಷಣ ಅಗತ್ಯವಿರುವ ಔಷಧಿಗಳನ್ನು ಪಡೆಯುವುದು, ಇವೆಲ್ಲವೂ ಈ ಟ್ರಾಫಿಕ್ ಜಾಮ್‌ದಿಂದ ಕಷ್ಟಕರವಾಗಿದೆ. ಆದರೆ ಈ ಸಮಸ್ಯೆಗೆ ಗುಡ್‌ಬೈ ಹೇಳಲು ದೆಹಲಿ ಮೂಲದ ಸೈ ಏರ್ (Skye Air) ಕಂಪನಿ ಮುಂದಾಗಿದೆ. ಬೆಂಗಳೂರು ತನ್ನ ಮೊದಲ ವಾಣಿಜ್ಯ ಡೋನ್ (ಡ್ರೋನ್) ಮೂಲಕ ಔಷಧ ವಿತರಣಾ ಸೇವೆಯನ್ನು ಪ್ರಾರಂಭಿಸಿದೆ.
ಮೂರು ವರ್ಷಗಳ ಹಿಂದೆ ಘೋಷಿತವಾಗಿದ್ದ ಈ ಯೋಜನೆಯು, ಕೊನೆಗೂ ಕಾನೂನಾತ್ಮಕ ಅನುಮತಿ ಹಾಗೂ ತಾಂತ್ರಿಕ ಸಿದ್ಧತೆಗಳ ಬಳಿಕ ಬೆಂಗಳೂರಿನಲ್ಲಿ ಕಾರ್ಯಾರಂಭಿಸಿದೆ. ದೆಹಲಿ ಮೂಲದ ಸೈ ಏರ್ (Skye Air) ಕಂಪನಿಯು ಈ ಸೇವೆಯನ್ನು ನೇರವಾಗಿ ನೀಡುತ್ತಿದೆ. ಸೈ ಏರ್‌ನ ಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಂಕಿತ್ ಕುಮಾರ್ ಅವರು ಈ ಕುರಿತು ಮಾಹಿತಿ ನೀಡಿದ್ದು, “ಪ್ರಸ್ತುತವಾಗಿ ಕನಕಪುರ ರಸ್ತೆ ಮತ್ತು ಕೋಣನಕುಂಟೆ ರಸ್ತೆ ಭಾಗದಲ್ಲಿ ಈ ಸೇವೆ ಆರಂಭಿಸಲಾಗಿದೆ. ಮುಂದೆ ಇದನ್ನು ಬೆಂಗಳೂರಿನ ಇತರೆ ಪ್ರದೇಶಗಳಿಗೂ ವಿಸ್ತರಿಸುವ ಯೋಜನೆ ಇದೆ,” ಎಂದು ತಿಳಿಸಿದ್ದಾರೆ.
ಈ ಡೋನ್ ಸೇವೆಯ ಮುಖ್ಯ ಉದ್ದೇಶ
ಆಸ್ಪತ್ರೆಗೆ ತಲುಪಲು ಸಾಧ್ಯವಾಗದ ಅಥವಾ ತ್ವರಿತ ವೈದ್ಯಕೀಯ ಸಹಾಯ ಅಗತ್ಯವಿರುವ ರೋಗಿಗಳಿಗೆ ಔಷಧಿಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ತಲುಪಿಸಬಹುದಾಗಿದೆ. ಸೈ ಏರ್ ಕಂಪನಿಯ ಮಾಹಿತಿ ಪ್ರಕಾರ, ಈ ಡೋನ್‌ಗಳು ಕೇವಲ 7 ನಿಮಿಷಗಳಲ್ಲಿ ನಿಗದಿತ ವಿಳಾಸಕ್ಕೆ ಔಷಧಿಗಳನ್ನು ತಲುಪಿಸಬಹುದು. ಇದರಿಂದ, ಸಾಮಾನ್ಯವಾಗಿ ರಸ್ತೆ ಮೂಲಕ 15-20 ನಿಮಿಷ ತೆಗೆದುಕೊಳ್ಳುವ ದೂರವನ್ನು, ಡೋನ್‌ಗಳು ಕೇವಲ 3-4 ನಿಮಿಷಗಳಲ್ಲಿ ತಲುಪಿಸಬಹುದು.
ಈಗಾಗಲೇ ಡೋನ್ ವಿತರಣಾ ಸೇವೆಯು ಹರಿಯಾಣದ ಗುರುಗ್ರಾಮ್‌ನಲ್ಲಿ ಯಶಸ್ವಿಯಾಗಿದ್ದು ಹೆಚ್ಚು ಕಾಲ ನಡೆಯುತ್ತಿದೆ. ಅಲ್ಲಿಯೂ ಸಹ, ಸುಮಾರು 1 ಮಿಲಿಯನ್ ಔಷಧಿ ಕಿಟ್‌ಗಳನ್ನು ಡೋನ್ ಮುಖಾಂತರ ವಿತರಿಸಲಾಗಿದೆ. “ಗುರುಗ್ರಾಮ್‌ನಲ್ಲಿ ನಮ್ಮ ಸೇವೆಗೆ ಉತ್ತಮ ಸ್ಪಂದನೆ ದೊರಕಿದ ಕಾರಣ, ಈ ಪ್ರಯತ್ನವನ್ನು ಬೆಂಗಳೂರಿಗೂ ವಿಸ್ತರಿಸಲು ನಾವು ನಿರ್ಧರಿಸಿದ್ದೇವೆ,” ಎಂದು ಅಂಕಿತ್ ಕುಮಾರ್ ತಿಳಿಸಿದ್ದಾರೆ.
ಈ ಡೋನ್ ಸೇವೆಯ ಮೂಲಕ ಕೇವಲ ಔಷಧಿ ಮಾತ್ರವಲ್ಲ, ತಕ್ಷಣ ಬೇಕಾಗುವ ವೈದ್ಯಕೀಯ ಪರಿಕರಗಳು, ಪರೀಕ್ಷಾ ಮಾದರಿಗಳು (ಲ್ಯಾಬ್ ಸೆಂಪಲ್), ಹಾಗೂ ಇತರೆ ತುರ್ತು ಸಾಮಗ್ರಿಗಳನ್ನು ಕೂಡ ರೋಗಿಗಳ ಮನೆಬಾಗಿಲಿಗೆ ತಲುಪಿಸಲು ಸಾಧ್ಯವಾಗಲಿದೆ. ಆರಂಭದ ಹಂತದಲ್ಲಿ ಕೆಲವು ಪ್ರಮುಖ ಆಸ್ಪತ್ರೆಗಳೊಂದಿಗೆ ಸಹಕಾರದಿಂದ ಈ ಸೇವೆ ನೀಡಲಾಗುತ್ತಿದೆ. ಮುಂದಿನ ಹಂತದಲ್ಲಿ ನಗರದ ವಿವಿಧ ಭಾಗಗಳಲ್ಲೂ ಈ ವ್ಯವಸ್ಥೆಯನ್ನು ಜಾರಿ ಮಾಡುವ ಉದ್ದೇಶವನ್ನು ಕಂಪನಿ ಹೊಂದಿದೆ.