ಕೊಲಂಬೊ, ಫೆ. 13: ಐಸಿಸಿ ಟೂರ್ನಿಗಳಲ್ಲಿ ಸದಾ ಪ್ರಾಬಲ್ಯ ಮೆರೆದಿರುವ ಆಸ್ಟ್ರೇಲಿಯಾ ತಂಡಕ್ಕೆ ಈ ಬಾರಿ ಜಿಂಬಾಬ್ವೆ ತಂಡ ಆಘಾತಕಾರಿ ಸೋಲು ಉಣಬಡಿಸಿದೆ. ಟಿ20 ವಿಶ್ವಕಪ್ ಪಂದ್ಯದಲ್ಲಿ ಜಿಂಬಾಬ್ವೆ 23 ರನ್‌ಗಳ ಅಂತರದಲ್ಲಿ ಅಮೋಘ ಜಯ ಸಾಧಿಸಿ, ಆಸೀಸ್ ತಂಡದ ಗರ್ವಭಂಗ ಮಾಡಿದೆ. ಈ ಸೋಲು ಆಸ್ಟ್ರೇಲಿಯಾಗೆ ಟಿ20 ವಿಶ್ವಕಪ್ ಇತಿಹಾಸದಲ್ಲಿ ಜಿಂಬಾಬ್ವೆ ವಿರುದ್ಧದ ಎರಡನೇ ಸೋಲಾಗಿದ್ದು, ಐಸಿಸಿ ಟೂರ್ನಿಗಳಲ್ಲಿ ಮೂರನೇ ಸೋಲಾಗಿ ದಾಖಲಾಗಿದೆ.
ಟಾಸ್ ಸೋತ ಜಿಂಬಾಬ್ವೆ ಮೊದಲು ಬ್ಯಾಟಿಂಗ್‌ಗೆ ಇಳಿದು ಸಮತೋಲನದ ಆಟ ಪ್ರದರ್ಶಿಸಿತು. ಆರಂಭಿಕ ಹಂತದಲ್ಲಿ ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿದ ಜಿಂಬಾಬ್ವೆ ಬ್ಯಾಟರ್‌ಗಳು ಮಧ್ಯ ಓವರ್‌ಗಳಲ್ಲಿ ವೇಗ ಹೆಚ್ಚಿಸಿ ರನ್ ಗಳಿಸಿದರು. ನಿಗದಿತ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 169 ರನ್‌ಗಳ ಮೊತ್ತವನ್ನು ಕಲೆಹಾಕಿದರು. ಜಿಂಬಾಬ್ವೆ ಬ್ಯಾಟರ್‌ಗಳ ಚಾಣಾಕ್ಷ ಆಟದಿಂದ ದೊಡ್ಡ ಮೊತ್ತ ದಾಖಲಾಯಿತು.
170 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ಯುವ ವೇಗಿ ಮುಜರಬಾನಿ ಅವರ ಬೌಲಿಂಗ್ ದಾಳಿಗೆ ಆಸೀಸ್ ಬ್ಯಾಟರ್‌ಗಳು ತತ್ತರಿಸಿದರು. 29 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ನಾಲ್ವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿ ತಂಡ ಸಂಕಷ್ಟಕ್ಕೆ ಸಿಲುಕಿತು. ಜೋಶ್ ಇಂಗ್ಲಿಸ್ ಕೇವಲ 8 ರನ್‌ಗಳಿಗೆ ಔಟ್ ಆದರೆ, ಕ್ಯಾಮರೋನ್ ಗ್ರೀನ್ ಮತ್ತು ಟಿಮ್ ಡೇವಿಡ್ ಖಾತೆ ತೆರೆಯದೇ ಹೊರನಡೆದರು. ಹಂಗಾಮಿ ನಾಯಕ ಟ್ರಾವಿಸ್ ಹೆಡ್ ಕೂಡ 17 ರನ್‌ಗಳಿಸಿ ನಿರಾಸೆ ಮೂಡಿಸಿದರು.
ಒಂದು ತುದಿಯಲ್ಲಿ ವಿಕೆಟ್‌ಗಳು ಬೀಳುತ್ತಿದ್ದರೂ, ಮ್ಯಾಟ್ ರೆನ್ಶಾ ತಂಡದ ಪರ ಹೋರಾಟ ಮುಂದುವರೆಸಿದರು. ಜವಾಬ್ದಾರಿಯುತ ಆಟವಾಡಿದ ಅವರು ಅರ್ಧಶತಕ ಬಾರಿಸಿ ಆಸೀಸ್‌ಗೆ ಭರವಸೆ ಮೂಡಿಸಿದರು. 65 ರನ್‌ಗಳಿಸಿ ಅವರು ಔಟ್ ಆಗುತ್ತಿದ್ದಂತೆಯೇ ಆಸ್ಟ್ರೇಲಿಯಾದ ಗೆಲುವಿನ ಆಸೆ ಬಹುತೇಕ ಕಣ್ಮರೆಯಾಯಿತು.
ಬೌಲಿಂಗ್‌ನಲ್ಲಿ ಮಿಂಚಿದ ಮುಜರಬಾನಿ ನಾಲ್ಕು ಓವರ್‌ಗಳಲ್ಲಿ ಕೇವಲ 17 ರನ್ ವೆಚ್ಚದಲ್ಲಿ 4 ವಿಕೆಟ್‌ಗಳನ್ನು ಕಿತ್ತು ಪಂದ್ಯವನ್ನು ಜಿಂಬಾಬ್ವೆ ಕಡೆ ತಿರುಗಿಸಿದರು. ಅವರಿಗೆ ಮತ್ತೊಂದು ತುದಿಯಲ್ಲಿ ಬ್ರಾಡ್ ಇವಾನ್ಸ್ ಉತ್ತಮ ಸಾಥ್ ನೀಡಿದರು. ಇವಾನ್ಸ್ 23 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದು ಆಸೀಸ್ ಬ್ಯಾಟಿಂಗ್ ಸಾಲನ್ನು ಕುಸಿತಕ್ಕೊಳಪಡಿಸಿದರು.
ಅಂತಿಮವಾಗಿ ಆಸ್ಟ್ರೇಲಿಯಾ ತಂಡ 19.3 ಓವರ್‌ಗಳಲ್ಲಿ 146 ರನ್‌ಗೆ ಪತನ ಕಂಡಿತು. 23 ರನ್‌ಗಳ ಅಂತರದಲ್ಲಿ ಜಯ ಸಾಧಿಸಿದ ಜಿಂಬಾಬ್ವೆ ತಂಡ ಸಂಭ್ರಮಾಚರಣೆಯಲ್ಲಿ ತೇಲಿತು. ಪಂದ್ಯಶ್ರೇಷ್ಠ ಪ್ರಶಸ್ತಿ ಮುಜರಬಾನಿ ಅವರಿಗೆ ಲಭಿಸಿತು.
ಐಸಿಸಿ ಟೂರ್ನಿಗಳಲ್ಲಿ ಸದಾ ಶಕ್ತಿಶಾಲಿಯಾಗಿ ಕಾಣಿಸಿಕೊಂಡ ಆಸ್ಟ್ರೇಲಿಯಾ ವಿರುದ್ಧ ಜಿಂಬಾಬ್ವೆ ಸಾಧಿಸಿದ ಈ ಗೆಲುವು ಕ್ರಿಕೆಟ್ ಲೋಕದ ಗಮನ ಸೆಳೆದಿದೆ.
