ಸರ್ಕಾರಿ ರೈಫಲ್‌ನಿಂದಲೇ ಶೂಟ್ ಮಾಡಿಕೊಂಡು ಪೊಲೀಸ್ ಪೇದೆ ಆತ್ಮಹತ್ಯೆ

Untitled design 2026 07 07T232941.447

ಕಲಬುರಗಿ, ಜು. 7: ಕರ್ತವ್ಯ ನಿರತರಾಗಿದ್ದ ಪೊಲೀಸ್ ಪೇದೆಯೊಬ್ಬರು ತಮಗೆ ನೀಡಲಾಗಿದ್ದ ಸರ್ಕಾರಿ ರೈಫಲ್‌ನಿಂದಲೇ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಕಲಬುರಗಿ ನಗರದ ಜಗತ್ ವೃತ್ತದಲ್ಲಿ ಈ ಘಟನೆ ನಡೆದಿದೆ.

ಯಾರು ಆತ್ಮಹತ್ಯೆ ಮಾಡಿಕೊಂಡ ಪೇದೆ?

ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯನ್ನು ಕಲಬುರಗಿ ನಗರ ಸಶಸ್ತ್ರ ಮೀಸಲು ಪಡೆಯ (CAR) ಪೇದೆ ಶಿವಕುಮಾರ್ ಮಾವನೂರ್ (32) ಎಂದು ಗುರುತಿಸಲಾಗಿದೆ. ಇವರು ಕಳೆದ ಮೂರು ತಿಂಗಳ ಹಿಂದೆಯಷ್ಟೇ ಬೆಂಗಳೂರಿನಿಂದ ಕಲಬುರಗಿ ನಗರಕ್ಕೆ ವರ್ಗಾವಣೆಯಾಗಿ ಬಂದು ಕರ್ತವ್ಯಕ್ಕೆ ಹಾಜರಾಗಿದ್ದರು. ಶಿವಕುಮಾರ್ ಅವರು ಮೂಲತಃ ಕಲಬುರಗಿ ಜಿಲ್ಲೆಯವರಾಗಿದ್ದು, ಸುಮಾರು 8 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದುಬಂದಿದೆ.

ಘಟನೆ ಹೇಗೆ ನಡೆಯಿತು?

ಶಿವಕುಮಾರ್ ಅವರು ಕರ್ತವ್ಯದಲ್ಲಿದ್ದ ಪೊಲೀಸ್ ವಾಹನದಲ್ಲಿ ಕುಳಿತಿದ್ದಾಗ ಈ ದುರ್ಘಟನೆ ನಡೆದಿದೆ. ವಾಹನದ ಒಳಗಡೆಯೇ ತಮ್ಮ ಬಳಿಯಿದ್ದ ಸರ್ಕಾರಿ ರೈಫಲ್ ತೆಗೆದುಕೊಂಡು ಶೂಟ್ ಮಾಡಿಕೊಂಡಿದ್ದಾರೆ. ಗುಂಡು ಹಾರಿದ ಶಬ್ದ ಕೇಳಿ ಸಹೋದ್ಯೋಗಿಗಳು ಓಡಿ ಬರುವಷ್ಟರಲ್ಲೇ ಅವರು ರಕ್ತದ ಮಡುವಿನಲ್ಲಿ ಬಿದ್ದು ಕೊನೆಯುಸಿರೆಳೆದಿದ್ದರು. 

ಪೊಲೀಸ್ ಅಧಿಕಾರಿಗಳ ಭೇಟಿ

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕಲಬುರಗಿ ನಗರ ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್.ಡಿ., ಉಪ ಪೊಲೀಸ್ ಆಯುಕ್ತರಾದ (DCP) ಶಾಲೂ ಉದ್ಯೋಗ್ ಸೇರಿದಂತೆ ಹಲವು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಏಕೆ ಆತ್ಮಹತ್ಯೆ?

ಆತ್ಮಹತ್ಯೆಗೆ ನಿಖರವಾದ ಕಾರಣವೇನೆಂಬುದು ಇನ್ನು ತಿಳಿದುಬಂದಿಲ್ಲ. ಮಾನಸಿಕ ಒತ್ತಡ ಅಥವಾ ಕೌಟುಂಬಿಕ ಕಲಹ ಇದರ ಹಿಂದಿದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Exit mobile version