ನವದೆಹಲಿ, ಜು. 7: 2026ರ ಫಿಫಾ ವಿಶ್ವಕಪ್ ಟೂರ್ನಿಯ ಅಂತಿಮ 16ರ ಸುತ್ತಿನಲ್ಲಿ ಸ್ಪೇನ್ ಎದುರು ಪೋರ್ಚುಗಲ್ ತಂಡ ಸೋಲು ಅನುಭವಿಸಿತು. ಇದರೊಂದಿಗೆ ಕ್ರಿಸ್ಟಿಯಾನೊ ರೊನಾಲ್ಡೊ ಅವರ ವಿಶ್ವಕಪ್ ಕನಸು ಭಗ್ನವಾಯಿತು. ಪಂದ್ಯದ ಬಳಿಕ ಕಣ್ಣೀರಿಟ್ಟ ರೊನಾಲ್ಡೊ ಅವರ ಫೋಟೋಗಳು ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದನ್ನು ಗಮನಿಸಿದ ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್, ತಮ್ಮ ನೆಚ್ಚಿನ ಫುಟ್ಬಾಲ್ ತಾರೆಗೆ ಭಾವನಾತ್ಮಕ ಸಂದೇಶವನ್ನು ರವಾನಿಸಿದ್ದಾರೆ.
ಸ್ಪೇನ್ ವಿರುದ್ಧ ಪೋರ್ಚುಗಲ್ ಸೋಲು
ಜುಲೈ 6 ರಂದು ಟೆಕ್ಸಾಸ್‌ನ ಆರ್ಲಿಂಗ್ಟನ್ ಡಲ್ಲಾಸ್ ಕ್ರೀಡಾಂಗಣದಲ್ಲಿ ನಡೆದ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೋರ್ಚುಗಲ್ ಮತ್ತು ಸ್ಪೇನ್ ತಂಡಗಳು ಕಾದಾಡಿದ್ದವು. ನಿಗದಿತ ಅವಧಿಯಲ್ಲಿ ಯಾವುದೇ ತಂಡ ಗೋಲು ಗಳಿಸಲಿಲ್ಲ. ಆದರೆ ಹೆಚ್ಚುವರಿ ಸಮಯದಲ್ಲಿ (90+3 ನಿಮಿಷ) ಮೈದಾನಕ್ಕೆ ಆಗಮಿಸಿದ ಮೈಕಲ್ ಮೆರಿನೊ ಅವರು ಮ್ಯಾಚ್ ವಿನ್ನಿಂಗ್ ಗೋಲು ಗಳಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ರೊನಾಲ್ಡೊ ಅವರ ವಿಶ್ವಕಪ್ ಗೆಲ್ಲುವ ಕನಸು ಮತ್ತೊಮ್ಮೆ ಭಗ್ನವಾಯಿತು.
ರೊನಾಲ್ಡೊ ಕಣ್ಣೀರು
ಮ್ಯಾಚ್ ರೆಫರಿ ಸೀಟಿ ಹೊಡೆಯುತ್ತಿದ್ದಂತೆ ಪೋರ್ಚುಗಲ್ ಆಟಗಾರರು ಮತ್ತು ಅಭಿಮಾನಿಗಳು ದೊಡ್ಡ ಆಘಾತವನ್ನು ಅನುಭವಿಸಿದರು. ಕಳೆದ ಆರು ವಿಶ್ವಕಪ್ ಟೂರ್ನಿಗಳಲ್ಲಿ ಒಂದೇ ಒಂದು ಪ್ರಶಸ್ತಿ ಗೆಲ್ಲಲು ಸಾಧ್ಯವಾಗದ ರೊನಾಲ್ಡೊ, ಪಂದ್ಯದ ಬಳಿಕ ತಮ್ಮ ಭಾವನೆಗಳನ್ನು ತಡೆಯಲಾಗದೆ ಕಣ್ಣೀರಿಟ್ಟರು. ಈ ವಿಡಿಯೊ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
Mohammed Siraj penned a heartfelt message for footballer Cristiano Ronaldo, as his World Cup career ended in a bitter defeat to Spain on Monday.#FIFAWorldCup #Portugal pic.twitter.com/EFeStJnbUK
— Circle of Cricket (@circleofcricket) July 7, 2026
ಸಿರಾಜ್ ಭಾವನಾತ್ಮಕ ಸಂದೇಶ
ರೊನಾಲ್ಡೊ ಅವರ ದೊಡ್ಡ ಅಭಿಮಾನಿಯಾಗಿರುವ ಮೊಹಮ್ಮದ್ ಸಿರಾಜ್ ಕೂಡ ಪೋರ್ಚುಗಲ್ ಸೋಲಿನಿಂದ ಭಾವುಕರಾಗಿದ್ದಾರೆ. ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾವುಕ ಸಂದೇಶವನ್ನು ರವಾನಿಸಿದ್ದಾರೆ.
“ಇಂದು ಏನಾಯಿತು ಎಂಬುದು ಮುಖ್ಯವಲ್ಲ, ನೀವು ಯಾವಾಗಲೂ ನಮಗೆ ಸ್ಪೂರ್ತಿಯಾಗಿದ್ದೀರಿ, ಕ್ರಿಸ್ಟಿಯಾನೊ. ಕೇವಲ ಒಂದೇ ಒಂದು ಪಂದ್ಯ ನಿಮ್ಮ ಶ್ರೇಷ್ಠತೆಯನ್ನು ವ್ಯಾಖ್ಯಾನಿಸುವುದಿಲ್ಲ. ಇಡೀ ವಿಶ್ವದಾದ್ಯಂತ ಅಸಂಖ್ಯಾತ ಮಂದಿಗೆ ಸ್ಪೂರ್ತಿಯಾಗಿರುವುದಕ್ಕೆ ಧನ್ಯವಾದಗಳು,” ಎಂದು ಸಿರಾಜ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ಸಿರಾಜ್-ರೊನಾಲ್ಡೊ ಅಭಿಮಾನ
ಕ್ರಿಸ್ಟಿಯಾನೊ ರೊನಾಲ್ಡೊಗೆ ವಿರಾಟ್ ಕೊಹ್ಲಿ ಕೂಡ ದೊಡ್ಡ ಅಭಿಮಾನಿಯಾಗಿದ್ದಾರೆ. ಆರ್ಸಿಬಿ ಮಾಜಿ ಸಹ ಆಟಗಾರ ಸಿರಾಜ್ ಗೆ ಕೂಡ ಪೋರ್ಚುಗಲ್ ಆಟಗಾರ ಎಂದರೆ ಪಂಚಪ್ರಾಣ. ಕ್ರಿಕೆಟ್ ಪಂದ್ಯಗಳಲ್ಲಿ ಸಿರಾಜ್ ತಮ್ಮ ಬೌಲಿಂಗ್‌ನಲ್ಲಿ ವಿಕೆಟ್ ಪಡೆದ ಬಳಿಕ ರೊನಾಲ್ಡೊ ಶೈಲಿಯಲ್ಲಿ ‘ಸಿಯು’ ಸೆಲೆಬ್ರೇಷನ್ ಮಾಡುವುದನ್ನು ನಾವು ಸಾಕಷ್ಟು ಬಾರಿ ವೀಕ್ಷಿಸಿದ್ದೇವೆ. ತಾನು ರೊನಾಲ್ಡೊ ಅವರ ದೊಡ್ಡ ಅಭಿಮಾನಿ ಎಂದು ಸಿರಾಜ್ ಸ್ವತಃ ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ.
ಮೊಹಮ್ಮದ್ ಸಿರಾಜ್ ಅವರ ಈ ಭಾವನಾತ್ಮಕ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಒಂದು ಸೋಲು ಶ್ರೇಷ್ಠತೆಯನ್ನು ಕಡಿಮೆ ಮಾಡಲಾರದು ಎಂಬ ಸಂದೇಶವನ್ನು ಸಿರಾಜ್ ತಮ್ಮ ಪೋಸ್ಟ್ ಮೂಲಕ ನೀಡಿದ್ದಾರೆ.
