ಲಂಡನ್: ಭಾರತೀಯ ಕ್ರಿಕೆಟಿಗ ಯುಜುವೇಂದ್ರ ಚಾಹಲ್ (Yuzvendra Chahal) ತಮ್ಮ ಗೆಳತಿ ಎನ್ನಲಾದ ರೇಡಿಯೋ ಜಾಕಿ ಮಹ್ವಾಶ್ (RJ Mahvash) ಜೊತೆ ಲಂಡನ್‌ನ ರಸ್ತೆಗಳಲ್ಲಿ ರೊಮ್ಯಾಂಟಿಕ್ ಸುತ್ತಾಟ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಜೋಡಿಯ ಆತ್ಮೀಯ ಕ್ಷಣಗಳು ನೆಟ್ಟಿಗರ ಗಮನ ಸೆಳೆದಿದ್ದು, ಅವರ ಸಂಬಂಧದ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ.
ಮಹ್ವಾಶ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಚಾಹಲ್ ಜೊತೆಗಿನ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಚಾಹಲ್ ಮತ್ತು ಮಹ್ವಾಶ್ ತಮ್ಮ ಸಂಬಂಧದ ಬಗ್ಗೆ ಯಾವುದೇ ಅಧಿಕೃತ ಸ್ಪಷ್ಟನೆ ನೀಡದಿದ್ದರೂ, ಅವರ ಒಡನಾಟವು ಪ್ರೀತಿಯ ಸಂಬಂಧವನ್ನೇ ಸೂಚಿಸುತ್ತದೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ.
ಚಾಹಲ್ ಈ ವರ್ಷದ ಆರಂಭದಲ್ಲಿ ತಮ್ಮ ಪತ್ನಿ ಧನಶ್ರೀ ವರ್ಮಾ ಅವರಿಗೆ ವಿಚ್ಛೇದನ ನೀಡಿದ್ದರು. ಇದಾದ ಬಳಿಕ, ಮಹ್ವಾಶ್ ಜೊತೆಗಿನ ಚಾಹಲ್ ಒಡನಾಟವು ಹೆಚ್ಚು ಗಮನ ಸೆಳೆಯುತ್ತಿದೆ. ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ವೇಳೆ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಅವರ ಆತ್ಮೀಯ ಕ್ಷಣಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದವು. ಇದಕ್ಕೂ ಮೊದಲು ದುಬೈನಲ್ಲಿ ಸಹ ಇವರಿಬ್ಬರು ಒಟ್ಟಿಗೆ ಸುತ್ತಾಡಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಈ ಜೋಡಿಯ ವಿಡಿಯೊಗಳು ಮತ್ತು ಫೋಟೊಗಳು ಆಗಾಗ ಕಾಣಸಿಗಲಿದೆ.
ಮಹ್ವಾಶ್ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಒಂದು ವಿಡಿಯೊವನ್ನು ಹಂಚಿಕೊಂಡಿದ್ದರು. ಈ ವಿಡಿಯೊದಲ್ಲಿ, “ನನ್ನ ಬದುಕಿನಲ್ಲಿ ಒಬ್ಬ ಹುಡುಗನಿಗೆ ಮಾತ್ರ ಜಾಗ. ಅವನೇ ನನ್ನ ಸ್ನೇಹಿತ, ಬೆಸ್ಟ್ ಫ್ರೆಂಡ್, ಬಾಯ್‌ಫ್ರೆಂಡ್ ಮತ್ತು ಪತಿ” ಎಂದು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದರು. ಈ ಪೋಸ್ಟ್‌ಗೆ ಚಾಹಲ್ ಲೈಕ್ ಮಾಡಿದ್ದು, ಅವರ ಸಂಬಂಧದ ಬಗ್ಗೆ ಇನ್ನಷ್ಟು ಕುತೂಹಲವನ್ನು ಹುಟ್ಟುಹಾಕಿದೆ.
ಆರ್‌ಜೆ ಮಹ್ವಾಶ್ ದೆಹಲಿಯ ಖ್ಯಾತ ರೇಡಿಯೋ ಜಾಕಿಯಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಅವರ ಆಕರ್ಷಕ ಧ್ವನಿ ಮತ್ತು ಮನರಂಜನಾತ್ಮಕ ಶೈಲಿಯಿಂದಾಗಿ ಅವರು ದೊಡ್ಡ ಸಂಖ್ಯೆಯ ಫಾಲೋವರ್ಸ್ ಹೊಂದಿದ್ದಾರೆ. ರೇಡಿಯೋ ಜಾಕಿಯಾಗಿ ತಮ್ಮ ವೃತ್ತಿಜೀವನದ ಜೊತೆಗೆ, ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ವಿಶಿಷ್ಟ ಕಂಟೆಂಟ್‌ನ ಮೂಲಕವೂ ಅವರು ಜನಪ್ರಿಯರಾಗಿದ್ದಾರೆ.