ಮುಂಬೈ: ಬಿಗಿ ಬೌಲಿಂಗ್ ಹಿಡಿತದೊಂದಿಗೆ ಆರಂಭಗೊಂಡ ಪಂದ್ಯವನ್ನು ಗ್ರೇಸ್ ಹ್ಯಾರಿಸ್ ಅವರ ಅಬ್ಬರದ ಬ್ಯಾಟಿಂಗ್ ಸಂಪೂರ್ಣವಾಗಿ ತನ್ನದಾಗಿಸಿಕೊಂಡಿತ್ತು. ಮಹಿಳಾ ಪ್ರೀಮಿಯರ್ ಲೀಗ್ (WPL) 2026ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಯುಪಿ ವಾರಿಯರ್ಸ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿ, ಆರಂಭಿಕ ಎರಡು ಪಂದ್ಯಗಳನ್ನೂ ಗೆದ್ದು ಅಂಕಪಟ್ಟಿಯ ನಂ.1 ಸ್ಥಾನಕ್ಕೆ ಜಿಗಿದಿದೆ.
ನವಿ ಮುಂಬೈನ ಡಿವೈ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತ ಯುಪಿ ವಾರಿಯರ್ಸ್ ಮೊದಲು ಬ್ಯಾಟ್ ಮಾಡಿತ್ತು. ಆರಂಭದಿಂದಲೇ ಆರ್‌ಸಿಬಿ ಬೌಲರ್‌ಗಳು ಶಿಸ್ತಿನ ಬೌಲಿಂಗ್ ಪ್ರದರ್ಶಿಸಿ ವಾರಿಯರ್ಸ್ ಬ್ಯಾಟಿಂಗ್ ಲೈನಪ್‌ಗೆ ಒತ್ತಡ ತಂದರು. ಯುಪಿ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 143 ರನ್‌ಗಳಿಗೆ ಸೀಮಿತವಾಯಿತು.
ಯುಪಿ ತಂಡದ ಆರಂಭ ಅತ್ಯಂತ ಕಳಪೆಯಾಗಿತ್ತು. ಆರಂಭಿಕ ಆಟಗಾರ್ತಿ ಹರ್ಲಿನ್ ಡಿಯೋಲ್ 11 ರನ್ ಬಾರಿಸಿ ಲಾರೆನ್ ಬೆಲ್ ಎಸೆತದಲ್ಲಿ ಔಟ್ ಆದರು. ಭರವಸೆಯ ಬ್ಯಾಟರ್ ಮೆಗ್ ಲ್ಯಾನಿಂಗ್ 14 ರನ್ ಗಳಿಸಿದ್ದಾಗ ಶ್ರೇಯಾಂಕ ಪಾಟೀಲ್ ಎಸೆತದಲ್ಲಿ ರಾಧಾ ಯಾದವ್ ಕೈಯಲ್ಲಿ ಕ್ಯಾಚ್ ನೀಡಿ ಪೆವಿಲಿಯನ್‌ಗೆ ಮರಳಿದರು. ಫೋಬೆ ಲಿಚ್‌ಫೀಲ್ಡ್ ಕೂಡ 20 ರನ್ ಗಳಿಸಿ ಶ್ರೇಯಾಂಕ ಪಾಟೀಲ್ ಎಸೆತದಲ್ಲಿ ಸ್ಮೃತಿ ಮಂಧಾನ ಹಿಡಿದ ಅದ್ಭುತ ಕ್ಯಾಚ್‌ಗೆ ಬಲಿಯಾದರು.
50 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಯುಪಿ ತಂಡಕ್ಕೆ ನಾಯಕಿ ದೀಪ್ತಿ ಶರ್ಮಾ ಹಾಗೂ ಡಿಯಾಂಡ್ರಾ ಡಾಟಿನ್ ಜೋಡಿ ಆಸರೆಯಾಗಿ ನಿಂತರು. ಈ ಜೋಡಿ ಅತ್ಯಂತ ಜವಾಬ್ದಾರಿಯುತ ಆಟವಾಡಿ ತಂಡವನ್ನು ಗೌರವಾನ್ವಿತ ಮೊತ್ತದತ್ತ ಕರೆದೊಯ್ದಿತು. 72 ಎಸೆತಗಳಲ್ಲಿ ಅಜೇಯ 93 ರನ್‌ಗಳ ಜೊತೆಯಾಟ ನೀಡಿದ ಈ ಜೋಡಿ ತಂಡದ ಮೊತ್ತವನ್ನು 143 ರನ್‌ಗಳವರೆಗೆ ತಲುಪಿಸಿತು. ದೀಪ್ತಿ ಶರ್ಮಾ 5 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಅಜೇಯ 45 ರನ್ ಬಾರಿಸಿದರೆ, ಡಾಟಿನ್ 37 ಎಸೆತಗಳಲ್ಲಿ ಅಜೇಯ 40 ರನ್ ಗಳಿಸಿದರು.
144 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿ ಆರಂಭದಿಂದಲೇ ಉತ್ತಮ ಪ್ರದರ್ಶನ ನೀಡಿತ್ತು. ಗ್ರೇಸ್ ಹ್ಯಾರಿಸ್ ಮತ್ತು ಸ್ಮೃತಿ ಮಂಧಾನ ಜೋಡಿ ಯುಪಿ ಬೌಲರ್‌ಗಳ ಮೇಲೆ ದಾಳಿ ನಡೆಸಿ ಪವರ್‌ಪ್ಲೇಯಲ್ಲೇ ಪಂದ್ಯವನ್ನು ಆರ್‌ಸಿಬಿ ಪರ ವಾಲುವಂತೆ ಮಾಡಿತು. ಹ್ಯಾರಿಸ್ ಅವರ ಬ್ಯಾಟಿಂಗ್ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.
ಗ್ರೇಸ್ ಹ್ಯಾರಿಸ್ ಕೇವಲ 40 ಎಸೆತಗಳಲ್ಲಿ 10 ಬೌಂಡರಿ ಹಾಗೂ 5 ಸಿಕ್ಸರ್‌ಗಳೊಂದಿಗೆ 85 ರನ್ ಗಳಿಸಿ ಮಿಂಚಿದರು. ಸ್ಮೃತಿ ಮಂಧಾನ ಕೂಡ ಅದ್ಭುತ ಸಹಕಾರ ನೀಡುತ್ತಾ 32 ಎಸೆತಗಳಲ್ಲಿ 9 ಬೌಂಡರಿ ನೆರವಿನಿಂದ ಅಜೇಯ 47 ರನ್ ಗಳಿಸಿದರು. ರಿಚಾ ಘೋಷ್ ಔಟಾಗದೆ 4 ರನ್ ಸೇರಿಸಿದರು.
ಆರ್‌ಸಿಬಿ ತಂಡ ಕೇವಲ 12.1 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 145 ರನ್ ಗಳಿಸಿ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಅಂಕಪಟ್ಟಿಯ ಶಿಖರ ಸ್ಥಾನವನ್ನು ಅಲಂಕರಿಸಿದೆ…





