ಐಸಿಸಿ ಟಿ20 ವಿಶ್ವಕಪ್ 2026ರ ಸೂಪರ್ 8 ಹಂತಕ್ಕೆ ಇಂದು (ಫೆಬ್ರವರಿ 21) ಭರ್ಜರಿ ಚಾಲನೆ ಸಿಗಬೇಕಾಗಿತ್ತು. ಆದರೆ ರೋಚಕ ಆರಂಭದ ನಿರೀಕ್ಷೆಯಲ್ಲಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಕೊಲಂಬೊದಲ್ಲಿ ಮಳೆ ನಿರಾಸೆ ಮೂಡಿಸಿದೆ. ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿರುವ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ ಮಹತ್ವದ ಪಂದ್ಯಕ್ಕೆ ವರುಣ ಅಡ್ಡಿಯಾದರು.
ಸೂಪರ್ 8 ಸುತ್ತಿನ ಮೊದಲ ಪಂದ್ಯವಾಗಿದ್ದರಿಂದಲೇ ಅಭಿಮಾನಿಗಳಲ್ಲಿ ಸಾಕಷ್ಟು ಉತ್ಸಾಹ ಇತ್ತು. ಟಾಸ್ ಗೆದ್ದ ಪಾಕಿಸ್ತಾನ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಟಾಸ್ ಮುಗಿದ ಬೆನ್ನಲ್ಲೇ ಮೋಡ ಕವಿದಿದ್ದು, ಮಳೆ ಸುರಿಯಲು ಆರಂಭವಾಯಿತು. ತಕ್ಷಣವೇ ಮೈದಾನ ಸಿಬ್ಬಂದಿ ಪಿಚ್ ಹಾಗೂ ಮೈದಾನವನ್ನು ಕವರ್‌ಗಳಿಂದ ಮುಚ್ಚಿದರು.
ಸಂಜೆ 7.45ರ ವೇಳೆಗೆ ಮಳೆ ತಗ್ಗುವ ಲಕ್ಷಣಗಳು ಕಾಣಿಸದಿದ್ದರಿಂದ ಪಂದ್ಯ ನಡೆಯುತ್ತದೆಯೇ ಎಂಬ ಅನುಮಾನ ಕಾಡತೊಡಗಿತು. ಹವಾಮಾನ ವರದಿಗಳ ಪ್ರಕಾರ ಇನ್ನೂ ಕೆಲವು ಸಮಯ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಹೀಗಾಗಿ ಓವರ್‌ಗಳ ಕಡಿತದ ಬಗ್ಗೆ ಚರ್ಚೆ ಆರಂಭವಾಗಿದೆ.
ಸ್ಥಳೀಯ ಕಾಲಮಾನ ಪ್ರಕಾರ ರಾತ್ರಿ 8.10ರಿಂದ ಓವರ್‌ಗಳ ಕಡಿತ ಪ್ರಕ್ರಿಯೆ ಆರಂಭವಾಗುತ್ತದೆ. ಅಂದರೆ ಪಂದ್ಯ ವಿಳಂಬವಾದಂತೆ ಪ್ರತಿ ಕೆಲವು ನಿಮಿಷಗಳಿಗೆ ಓವರ್‌ಗಳು ಕಡಿಮೆಯಾಗುತ್ತವೆ. 5 ಓವರ್‌ಗಳ ಕನಿಷ್ಠ ಪಂದ್ಯ ನಡೆಸಲು ರಾತ್ರಿ 10.16ರೊಳಗೆ ಮಳೆ ಸಂಪೂರ್ಣ ನಿಂತು, ಪಿಚ್ ಆಡಲು ಯೋಗ್ಯವಾಗಿರಬೇಕು.
ಒಂದು ವೇಳೆ 10.16ರ ನಂತರವೂ ಪಿಚ್ ತೇವವಾಗಿದ್ದು ಪಂದ್ಯ ಆರಂಭಿಸಲು ಸಾಧ್ಯವಾಗದಿದ್ದರೆ, ಈ ಪಂದ್ಯ ರದ್ದುಗೊಳ್ಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳಿಗೆ ತಲಾ ಒಂದು ಅಂಕ ನೀಡಲಾಗುತ್ತದೆ. ಸೂಪರ್ 8 ಹಂತದಂತಹ ಪ್ರಮುಖ ಸುತ್ತಿನಲ್ಲಿ ಪ್ರತಿಯೊಂದು ಅಂಕವೂ ಅಮೂಲ್ಯವಾಗಿರುವುದರಿಂದ ಎರಡೂ ತಂಡಗಳು ಸಂಪೂರ್ಣ ಪಂದ್ಯ ನಡೆಯಲೆಂದು ನಿರೀಕ್ಷಿಸುತ್ತಿವೆ.
ಪಾಕಿಸ್ತಾನ ಆಡುವ ಬಳಗ
ಸಾಹಿಬ್‌ಜಾದಾ ಫರ್ಹಾನ್, ಸೈಮ್ ಅಯೂಬ್, ಸಲ್ಮಾನ್ ಆಘಾ (ನಾಯಕ), ಬಾಬರ್ ಆಝಂ, ಫಖರ್ ಜಮಾನ್, ಉಸ್ಮಾನ್ ಖಾನ್ (ವಿಕೆಟ್ ಕೀಪರ್), ಶದಾಬ್ ಖಾನ್, ಮೊಹಮ್ಮದ್ ನವಾಜ್, ಫಹೀಮ್ ಅಶ್ರಫ್, ಸಲ್ಮಾನ್ ಮಿರ್ಜಾ, ಉಸ್ಮಾನ್ ತಾರಿಕ್.
ನ್ಯೂಜಿಲೆಂಡ್ ತಂಡ
ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಫಿನ್ ಅಲೆನ್, ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್‌ಮನ್, ಡ್ಯಾರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಜೇಮ್ಸ್ ನೀಶಾಮ್, ಮ್ಯಾಟ್ ಹೆನ್ರಿ, ಇಶ್ ಸೋಧಿ, ಲಾಕಿ ಫರ್ಗ್ಯೂಸನ್.





