ನವದೆಹಲಿ: ಕ್ರಿಕೆಟ್ ಮೈದಾನದ ಹೀರೋಗಳು ಇದೀಗ ಬೆಟ್ಟಿಂಗ್ ಜಾಲಿನಲ್ಲಿ ಸಿಲುಕಿ ನಷ್ಟ ಅನುಭವಿಸುತ್ತಿದ್ದಾರೆ. ಜಾರಿ ನಿರ್ದೇಶನಾಲಯ (ED) ಇಂದು ಮಾಜಿ ತಾರಾ ಕ್ರಿಕೆಟಿಗರಾದ ಸುರೇಶ್ ರೈನಾ ಮತ್ತು ಶಿಖರ್ ಧವನ್ ಅವರಿಗೆ ಸೇರಿದ ರೂ. 11.14 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ.
ಈ ಇಬ್ಬರು ಕ್ರಿಕೆಟಿಗರು ‘1XBET’ ಎನ್ನುವ ಅಕ್ರಮ ಆನ್ಲೈನ್ ಬೆಟ್ಟಿಂಗ್ ಕಂಪನಿಯ ಪರವಾಗಿ ಪ್ರಚಾರ ನಡೆಸಿದ್ದರು. ಭಾರತದಲ್ಲಿ ಬೆಟ್ಟಿಂಗ್ ಚಟುವಟಿಕೆಗಳು ಕಾನೂನುಬಾಹಿರವಾಗಿರುವುದನ್ನು ತಿಳಿದಿದ್ದರೂ, ಇಬ್ಬರೂ ವಿದೇಶಿ ಕಂಪನಿಯ ನಂಟು ಹೊಂದಿದ ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದರು ಎಂದು ಇಡಿ ತನಿಖೆ ಹೇಳುತ್ತದೆ.
ಇಡಿ ಅಧಿಕಾರಿಗಳ ಪ್ರಾಥಮಿಕ ತನಿಖೆಯ ಪ್ರಕಾರ, ರೈನಾ ಮತ್ತು ಧವನ್ ಅವರಿಗೂ ಹಣವನ್ನು ನೇರವಾಗಿ ನೀಡದೆ, ವಿದೇಶಿ ಸಂಸ್ಥೆಗಳ ಮೂಲಕ ಪಾವತಿಸಿದರೆಂದು ಪತ್ತೆಯಾಗಿದೆ. ಅಕ್ರಮ ಹಣದ ಮೂಲವನ್ನು ಮುಚ್ಚಿಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಡಿ ವರದಿ ಹೇಳಿದೆ.
ತನಿಖೆಯ ನಂತರ, ಶಿಖರ್ ಧವನ್ ಅವರ 4.5 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹಾಗೂ ಸುರೇಶ್ ರೈನಾ ಅವರ 6.64 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡುವ ಆದೇಶ ನೀಡಲಾಗಿದೆ. ಈ ಕ್ರಮವು ಅಕ್ರಮ ಹಣ ವಹಿವಾಟು ತಡೆ ಕಾಯ್ದೆ (PMLA) ಅಡಿಯಲ್ಲಿ ಕೈಗೊಳ್ಳಲಾಗಿದೆ.
1XBET ಕಂಪನಿಯು ಕಳೆದ ಕೆಲವು ವರ್ಷಗಳಲ್ಲಿ ಭಾರತ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಪ್ರಚಾರ ನಡೆಸಿ, ಜನರನ್ನು ಬೆಟ್ಟಿಂಗ್‌ಗೆ ಆಕರ್ಷಿಸಿತ್ತು. ಈ ಕಂಪನಿಯು ಸುಮಾರು ₹1,000 ಕೋಟಿ ರೂಪಾಯಿ ಮೌಲ್ಯದ ವಂಚನೆ ಎಸಗಿದೆ ಎಂದು ಇಡಿ ಹೇಳಿದೆ. ಕಂಪನಿಯು ಸಾಮಾಜಿಕ ಮಾಧ್ಯಮ ಹಾಗೂ ಕ್ರಿಕೆಟ್ ಪ್ರಚಾರಗಳ ಮೂಲಕ ವ್ಯಾಪಕವಾಗಿ ಪ್ರಚಾರ ನಡೆಸಿ, ಕ್ರಿಕೆಟಿಗರನ್ನು ತಮ್ಮ ಜಾಹಿರಾತುಗಳಲ್ಲಿ ಭಾಗಿಯಾಗಲು ಪ್ರೇರೇಪಿಸಿತ್ತು.
ಈ ಪ್ರಚಾರದ ಭಾಗವಾಗಿದ್ದ ಕೆಲವು ಕ್ರಿಕೆಟಿಗರ ವಿರುದ್ಧ ಈಗಾಗಲೇ ಇಡಿ ತನಿಖೆ ಆರಂಭಿಸಿದ್ದು, ಯುವರಾಜ್ ಸಿಂಗ್, ರಾಬಿನ್ ಉತ್ತಪ್ಪ ಸೇರಿದಂತೆ ಹಲವರ ವಿಚಾರಣೆ ನಡೆಸಲಾಗಿದೆ. ಇಡಿ ಪ್ರಕಾರ, “ಕ್ರಿಕೆಟ್ ಪ್ರಚಾರದ ಹೆಸರಿನಲ್ಲಿ ಅಕ್ರಮ ಹಣ ವಹಿವಾಟು ನಡೆದಿರುವುದು ಸ್ಪಷ್ಟವಾಗಿದೆ. ವಿದೇಶಿ ಕಂಪನಿಗಳ ಮುಖಾಂತರ ಬಂದ ಹಣವನ್ನು ಕಾನೂನುಬಾಹಿರವಾಗಿ ಬಳಸಿರುವುದಕ್ಕೆ ಸಾಕ್ಷಿಗಳು ಲಭ್ಯವಾಗಿವೆ,” ಎಂದು ಸ್ಪಷ್ಟಪಡಿಸಿದೆ.
ಬೆಟ್ಟಿಂಗ್ ಆ್ಯಪ್ ಪ್ರಚಾರ: ಯುವರಾಜ್ ಸಿಂಗ್, ಸುರೇಶ್ ರೈನಾ, ಹರ್ಭಜನ್‌ಗೆ ED ಶಾಕ್
ನವದೆಹಲಿ: ಆನ್‌ಲೈನ್ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗಳ (Online Betting Apps) ವಿರುದ್ಧ ಜಾರಿ ನಿರ್ದೇಶನಾಲಯ (ED) ತನ್ನ ತನಿಖೆಯನ್ನು ತೀವ್ರಗೊಳಿಸಿದ್ದು, ಹಲವಾರು ಮಾಜಿ ಕ್ರಿಕೆಟಿಗರು ಮತ್ತು ಸಿನಿಮಾ ತಾರೆಯರನ್ನು ವಿಚಾರಣೆಗೆ ಒಳಪಡಿಸಿದೆ. ಈ ಕಾನೂನುಬಾಹಿರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಭಾರತೀಯ ಕಾನೂನುಗಳ ಉಲ್ಲಂಘನೆಯ ಆರೋಪದ ಮೇಲೆ ತನಿಖೆ ನಡೆಯುತ್ತಿದ್ದು, ಈ ಪ್ರಕರಣವು ದೇಶಾದ್ಯಂತ ಗಮನ ಸೆಳೆದಿದೆ.
ಕ್ರಿಕೆಟ್ ದಿಗ್ಗಜರ ವಿಚಾರಣೆ
ಮಾಹಿತಿಯ ಪ್ರಕಾರ, ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳ ಪ್ರಚಾರದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಮಾಜಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್, ಯುವರಾಜ್ ಸಿಂಗ್ ಮತ್ತು ಸುರೇಶ್ ರೈನಾ ಅವರನ್ನು ಇಡಿ ವಿಚಾರಣೆಗೆ ಒಳಪಡಿಸಿದೆ. ಈ ಮೂವರು ಕ್ರಿಕೆಟ್ ತಾರೆಯರು ತಮ್ಮ ಜನಪ್ರಿಯತೆಯನ್ನು ಬಳಸಿಕೊಂಡು ಕಾನೂನುಬಾಹಿರ ಬೆಟ್ಟಿಂಗ್ ಆ್ಯಪ್‌ಗಳಿಗೆ ಪ್ರಚಾರ ಮಾಡಿದ್ದಾರೆ ಎಂಬ ಆರೋಪವಿದೆ. ಇದರ ಜೊತೆಗೆ, ಬಾಲಿವುಡ್‌ನ ಖ್ಯಾತ ನಟ ಸೋನು ಸೂದ್ ಹಾಗೂ ನಟಿ ಊರ್ವಶಿ ರೌಟೇಲಾ ಅವರನ್ನೂ ತನಿಖೆಗೆ ಒಳಪಡಿಸಲಾಗಿದೆ.
ಬೇರೆ ಬೇರೆ ಹೆಸರಿನಲ್ಲಿ ಬೆಟ್ಟಿಂಗ್ ದಂಧೆ
ಈ ಬೆಟ್ಟಿಂಗ್ ಪ್ಲಾಟ್‌ಫಾರ್ಮ್‌ಗಳು ವಿಭಿನ್ನ ಹೆಸರುಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವು ಕ್ಯೂಆರ್ ಕೋಡ್‌ಗಳ ಮೂಲಕ ಬಳಕೆದಾರರಿಗೆ ಸುಲಭವಾಗಿ ಪ್ರವೇಶಿಸಲು ಅವಕಾಶ ನೀಡುತ್ತವೆ. ಈ ಕೋಡ್‌ಗಳನ್ನು ಸ್ಕ್ಯಾನ್ ಮಾಡುವ ಮೂಲಕ ಬಳಕೆದಾರರು ಬೆಟ್ಟಿಂಗ್ ಆಟಗಳಲ್ಲಿ ಭಾಗವಹಿಸಬಹುದು. ಆದರೆ ಇದು ಭಾರತೀಯ ಕಾನೂನಿನ ಪ್ರಕಾರ ಸಂಪೂರ್ಣ ಅಪರಾಧವಾಗಿದೆ. ಈ ಚಟುವಟಿಕೆಗಳು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ, ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA), ಮನಿ ಲಾಂಡರಿಂಗ್ ತಡೆ ಕಾಯ್ದೆ (PMLA) ಮತ್ತು ಬೇನಾಮಿ ವಹಿವಾಟು ಕಾಯ್ದೆಯಂತಹ ಗಂಭೀರ ಕಾನೂನುಗಳ ಉಲ್ಲಂಘನೆಗೆ ಒಳಗಾಗಿವೆ.
ಸೆಲೆಬ್ರಿಟಿಗಳಿಗೆ ನೋಟೀಸ್
ಈ ಕಾನೂನುಬಾಹಿರ ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡುತ್ತಿರುವ ಇನ್ನೂ ಹಲವಾರು ಸೆಲೆಬ್ರಿಟಿಗಳಿಗೆ ನೋಟೀಸ್ ಜಾರಿಗೊಳಿಸಲಾಗಿದೆ. ಈ ಆ್ಯಪ್‌ಗಳು ತಮ್ಮ ಕಾರ್ಯಾಚರಣೆಯನ್ನು ಮುಂದುವರೆಸಲು ಜನಪ್ರಿಯ ವ್ಯಕ್ತಿಗಳನ್ನು ಬಳಸಿಕೊಳ್ಳುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ. ಇದನ್ನು ತಡೆಗಟ್ಟಲು ಇಡಿ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ.





