ಹೈದರಾಬಾದ್: ಸನ್ ರೈಸರ್ಸ್ ಹೈದರಾಬಾದ್ (SRH) ಫ್ರಾಂಚೈಸಿ ಈಗ ಹೊಸದೊಂದು ವಿವಾದಕ್ಕೆ ಸಿಲುಕಿದೆ. ಇಂಗ್ಲೆಂಡ್‌ನಲ್ಲಿ ನಡೆಯಲಿರುವ ‘ದಿ ಹಂಡ್ರೆಡ್’ ಲೀಗ್‌ಗಾಗಿ ಸನ್ ರೈಸರ್ಸ್ ಮಾಲೀಕತ್ವದ ‘ಸನ್ ರೈಸರ್ಸ್ ಲೀಡ್ಸ್’ ತಂಡವು ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿರುವುದು ಈಗ ಭಾರತೀಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ವಿವಾದದ ಹಿನ್ನೆಲೆ ?
ಮಾರ್ಚ್ 12, 2026 ರಂದು ನಡೆದ ಹರಾಜಿನಲ್ಲಿ ಅಬ್ರಾರ್ ಅಹ್ಮದ್ ಅವರನ್ನು ಸನ್ ರೈಸರ್ಸ್ ಲೀಡ್ಸ್ ಬರೋಬ್ಬರಿ £1,90,000 (ಸುಮಾರು 2.34 ಕೋಟಿ ರೂ.) ನೀಡಿ ತನ್ನ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ, ಅಬ್ರಾರ್ ಅವರ ಹಳೆಯ ಭಾರತ ವಿರೋಧಿ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು ಮತ್ತು ವಿವಾದಾತ್ಮಕ ಹೇಳಿಕೆಗಳು ಮುನ್ನೆಲೆಗೆ ಬರುತ್ತಿದ್ದಂತೆ ಅಭಿಮಾನಿಗಳು ಕೆರಳಿದ್ದಾರೆ. ಜೊತೆಗೆ ಅಭಿಮಾನಿಗಳು ತಂಡದ ‘X’ (ಟ್ವಿಟರ್) ಖಾತೆಯನ್ನು ಸಾಮೂಹಿಕವಾಗಿ ರಿಪೋರ್ಟ್ ಮಾಡಿದ್ದರಿಂದ ಅದು ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.
ಫ್ರಾಂಚೈಸಿ ಮುಂದಿರುವ ಸಂಕಷ್ಟಗಳು
ಭಾರತೀಯ ಮೂಲದ ಫ್ರಾಂಚೈಸಿಯಾಗಿ ಸನ್ ರೈಸರ್ಸ್ ಈಗ ಇಕ್ಕಟ್ಟಿನ ಪರಿಸ್ಥಿತಿಯಲ್ಲಿದೆ. ಆಟಗಾರನನ್ನು ಕೈಬಿಡಲು ಪ್ರಮುಖವಾಗಿ ಎರಡು ಕಾರಣಗಳೆಂದರೆ ಭಾರತದಲ್ಲಿ ಐಪಿಎಲ್ ಆರಂಭವಾಗುವ ಹೊತ್ತಿನಲ್ಲೇ ಇಂತಹ ವಿವಾದ ಹುಟ್ಟಿಕೊಂಡಿರುವುದು ತಂಡದ ಜನಪ್ರಿಯತೆ ಮತ್ತು ಬ್ರ್ಯಾಂಡ್ ಮೌಲ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಭೀತಿಯಿದೆ.ಇದರೊಟ್ಟಿಗೆ ತಂಡಕ್ಕೆ ಬೆಂಬಲ ನೀಡುವ ಪ್ರಮುಖ ಕಂಪನಿಗಳು (Sponsors) ಸಾರ್ವಜನಿಕರ ಆಕ್ರೋಶಕ್ಕೆ ಹೆದರಿ ಒಪ್ಪಂದದಿಂದ ಹಿಂದೆ ಸರಿಯುವ ಸಾಧ್ಯತೆಯಿದೆ. ಇದರಿಂದ ಉಂಟಾಗುವ ಆರ್ಥಿಕ ನಷ್ಟವು ಆಟಗಾರನಿಗೆ ನೀಡುವ ಹಣಕ್ಕಿಂತ ಹೆಚ್ಚಿರಲಿದೆ.
ಕೈಬಿಡುವ ಹಾದಿಯಲ್ಲಿರುವ ಅಡೆತಡೆಗಳು
ಅಬ್ರಾರ್ ಅಹ್ಮದ್ ಅವರನ್ನು ಹರಾಜಿನ ಮೂಲಕ ಅಧಿಕೃತವಾಗಿ ಖರೀದಿಸಿರುವುದರಿಂದ ಅವರನ್ನು ಸುಮ್ಮನೆ ತೆಗೆದುಹಾಕಲು ಸಾಧ್ಯವಿಲ್ಲ. ಸೂಕ್ತ ಶಿಸ್ತುಕ್ರಮದ ಕಾರಣವಿಲ್ಲದೆ ಕೈಬಿಟ್ಟರೆ ಫ್ರಾಂಚೈಸಿಯು ಆಟಗಾರನಿಗೆ ಸಂಪೂರ್ಣ ಒಪ್ಪಂದದ ಮೊತ್ತವನ್ನು ಪಾವತಿಸಬೇಕಾಗುತ್ತದೆ. ‘ದಿ ಹಂಡ್ರೆಡ್’ ಟೂರ್ನಿಯು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ (ECB) ಅಡಿಯಲ್ಲಿ ನಡೆಯುವುದರಿಂದ, ಕೇವಲ ಸೋಷಿಯಲ್ ಮೀಡಿಯಾ ಒತ್ತಡಕ್ಕಾಗಿ ಆಟಗಾರನನ್ನು ವಜಾ ಮಾಡಲು ಮಂಡಳಿ ಅನುಮತಿ ನೀಡುತ್ತದೆಯೇ ಎಂಬುದು ಸದ್ಯ ಫ್ರಾಂಚೈಸಿ ಮುಂದಿನ ಪ್ರಶ್ನೆಯಾಗಿದೆ.
ಸದ್ಯ ಸನ್ ರೈಸರ್ಸ್ ಮುಖ್ಯಸ್ಥೆ ಕಾವ್ಯ ಮಾರನ್ ಮೌನವಾಗಿದ್ದರೂ, ಒಳಗಿನ ಮೂಲಗಳ ಪ್ರಕಾರ ತಂಡದ ಅಧಿಕಾರಿಗಳು ಇಸಿಬಿ ಜೊತೆ ಸತತ ಮಾತುಕತೆ ನಡೆಸುತ್ತಿದ್ದಾರೆ. ಒಂದು ವೇಳೆ ಒತ್ತಡ ಮಿತಿಮೀರಿದರೆ, ಆಟಗಾರನಿಗೆ ವೈಯಕ್ತಿಕ ಕಾರಣ ಅಥವಾ ಗಾಯದ ಸಮಸ್ಯೆ ಎಂಬ ಹಣೆಪಟ್ಟಿ ಹಚ್ಚಿ ಟೂರ್ನಿಯಿಂದ ಅಧಿಕೃತವಾಗಿ ಹೊರಹಾಕುವ ತಂತ್ರವನ್ನು ಫ್ರಾಂಚೈಸಿ ರೂಪಿಸಿದೆ ಎಂದು ವರದಿಯಾಗಿದೆ.
ಒಟ್ಟಾರೆಯಾಗಿ, ಐಪಿಎಲ್ ಹಂಗಾಮಿನ ಬೆನ್ನಲ್ಲೇ ಈ ವಿವಾದ ಎದ್ದಿರುವುದು ಸನ್ ರೈಸರ್ಸ್ ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಬ್ರಾರ್ ಅಹ್ಮದ್ ತಂಡದಲ್ಲಿ ಉಳಿಯುತ್ತಾರಾ ಅಥವಾ ಟೂರ್ನಿ ಆರಂಭಕ್ಕೂ ಮುನ್ನವೇ ‘ಗೇಟ್ ಪಾಸ್’ ಪಡೆಯುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.





